Advertisement

ಚೆನ್ನಪ್ಪನಪುರ ವೀರಭದ್ರೇಶ್ವರ ರಥೋತ್ಸವದಲ್ಲಿ ಚಕ್ರ ಮುರಿದು, ಉರುಳಿ ಬಿದ್ದ ರಥ

02:43 PM Nov 01, 2022 | Team Udayavani |

ಚಾಮರಾಜನಗರ: ತಾಲೂಕಿನ ಚೆನ್ನಪ್ಪನಪುರ ಗ್ರಾಮದ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಸಂದರ್ಭದಲ್ಲಿ ರಥದ ಚಕ್ರ ಮುರಿದು ಬಿದ್ದು, ರಥ ಉರುಳಿಬಿದ್ದ ಘಟನೆ ಮಂಗಳವಾರ ನಡೆದಿದೆ.

Advertisement

ಅದೃಷ್ಟವಶಾತ್‍ ಯಾರಿಗೂ ಯಾವುದೇ ಅಪಾಯವಾಗಿಲ್ಲ. ನಾಲ್ಕು ವರ್ಷಗಳ ಬಳಿಕ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಹಾಗೂ ಬೆಳ್ಳಿ ಕವಚಧಾರಣಾ ಮಹೋತ್ಸವ ನಡೆದಿತ್ತು.

ಮಂಗಳವಾರ ಮಧ್ಯಾಹ್ನ 12ಕ್ಕೆ ದೇವಾಲಯದ ಹೊರಾವರಣದಲ್ಲಿ ರಥೋತ್ಸವ ಆರಂಭವಾಯಿತು. ರಥ ಸಾಗಿ ದೇವಾಲಯದ ಗರ್ಭ ಗುಡಿಯ ಹಿಂಭಾಗ ಬಂದಾಗ ಮಧ್ಯಾಹ್ನ 12.30ರಲ್ಲಿ ಚಕ್ರದ ದೂರಿ ಹಾಗೂ ಬಲಗಡೆಯ ಚಕ್ರ ಮುರಿದು ರಥ ವಾಲಿಕೊಂಡಿತು. ಆ ಸಂದರ್ಭದಲ್ಲಿ ಪೊಲೀಸರು ರಥದ ಅಕ್ಕಪಕ್ಕ ಇದ್ದ ನೂರಾರು ಜನರನ್ನು ಚದುರಿಸಿದರು. ರಥದ ಗೋಪುರವನ್ನು ಹಗ್ಗದ ಸಹಾಯದಿಂದ ಹಿಡಿದುಕೊಳ್ಳಲಾಗಿತ್ತು. ಹಗ್ಗದ ಆಧಾರದಿಂದ ನಿಂತಿದ್ದ ರಥ, ಹಗ್ಗವನ್ನು ನಿಧಾನವಾಗಿ ಸಡಿಲ ಬಿಟ್ಟಾಗ ಕೆಳಕ್ಕೆ ಉರುಳಿತು. ಪೊಲೀಸರು ಜನರನ್ನು ದೂರ ಚದುರಿಸಿದ್ದರಿಂದ ಯಾರಿಗೂ ಯಾವುದೇ ಅಪಾಯ ಆಗಲಿಲ್ಲ.

ರಥೋತ್ಸವ ಅಪೂರ್ಣಗೊಂಡರೂ, ಬೆಳ್ಳಿ ಕವಚಧಾರಣೆ, ಸ್ವಾಮಿಯ ದರ್ಶನ ನಡೆದವು. ವಿವಿಧೆಡೆಗಳಿಂದ ಸಾವಿರಾರು ಜನರು ಪಾಲ್ಗೊಂಡಿದ್ದರು.

ಇದನ್ನೂ ಓದಿ:ರಾಜರತ್ನನಿಗಿಂದು ‘ಕರ್ನಾಟಕ ರತ್ನ’ ಗೌರವ; ಇದುವರೆಗೆ ನವರತ್ನರಿಗೆ ಸಿಕ್ಕಿದೆ ಈ ಪುರಸ್ಕಾರ

Advertisement

ಒಂದೆರಡು ತಿಂಗಳ ಹಿಂದೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಾರ್ವತಿ ದೇವಾಲಯದ ರಥೋತ್ಸವದ ಸಂದರ್ಭದಲ್ಲೂ ರಥ ವೇಗವಾಗಿ ಚಲಿಸಿ, ಅವಘಡ ಸಂಭವಿಸಿತ್ತು.

ಇದಕ್ಕೂ ಮೊದಲು, ಶಾಸಕ ಸಿ. ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಜಿ. ನಿಜಗುಣರಾಜು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next