Advertisement

2 ರೂಪಾಯಿ GST ಪಡೆದು 15 ಸಾವಿರ ರೂಪಾಯಿ ದಂಡ ಪಾವತಿಸಿದ ರೆಸ್ಟೋರೆಂಟ್!

08:45 AM Jul 19, 2019 | Nagendra Trasi |

ಚೆನ್ನೈ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಿಎಸ್ ಟಿ(ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೊಳಿಸಿದ ದಿನದಿಂದ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಜಿಎಸ್ ಟಿಯನ್ನು ವಸೂಲಿ ಮಾಡಿದ ಪ್ರಸಂಗ ನಡೆಯುತ್ತಲೇ ಇದೆ. ಇದೀಗ ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಅಂತಹದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು, ರೆಸ್ಟೋರೆಂಟ್ ಭಾರೀ ದಂಡ ಪಾವತಿಸುವಂತಾಗಿದೆ.

Advertisement

ಹಲವಾರು ವಸ್ತುಗಳಿಗೆ ಜಿಎಸ್ ಟಿ ಅನ್ವಯಿಸುವುದಿಲ್ಲ. ಆದರೆ ಈಗಲೂ ಹಲವಾರು ಹೋಟೆಲ್ ಗಳು, ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರಿಗೆ ತೆರಿಗೆಯನ್ನು ಹಾಕಲಾಗುತ್ತಿದೆ. ಅದೇ ರೀತಿ ತಿರುನೆಲ್ವೇಲಿಯ ಹೋಟೆಲ್ ಅನಾವಶ್ಯಕವಾಗಿ ಜಿಎಸ್ ಟಿ ವಸೂಲಿ ಮಾಡಿದ್ದಕ್ಕೆ ಜಿಲ್ಲಾ ಗ್ರಾಹಕ ನ್ಯಾಯಾಲಯ 15 ಸಾವಿರ ರೂಪಾಯಿ ದಂಡ ವಿಧಿಸಿದೆ.

ಏನಿದು ಪ್ರಕರಣ:

ತಮಿಳುನಾಡಿನ ತಿರುನೆಲ್ವೇಲಿಯಲ್ಲಿರುವ ರೆಸ್ಟೋರೆಂಟ್ ನಲ್ಲಿ ಗ್ರಾಹಕರೊಬ್ಬರು 40 ರೂಪಾಯಿ ಬೆಲೆಯ ಮೊಸರನ್ನು ಖರೀದಿಸಿದ್ದರು. ಅದಕ್ಕೆ 2 ರೂಪಾಯಿ ಜಿಎಸ್ ಟಿ ಹಾಗೂ ಪ್ಯಾಕೇಜಿಂಗ್ ಗೆ 2 ರೂ. ಸೇರಿಸಿ ಒಟ್ಟು 44 ರೂಪಾಯಿ ಪಡೆದಿದ್ದರು. ಈ ವೇಳೆ ಗ್ರಾಹಕ ಮೊಸರಿಗೆ ಜಿಎಸ್ ಟಿ ಇಲ್ಲ ಎಂದು ವಾದಿಸಿದ್ದರು. ಆದರೆ ರೆಸ್ಟೋರೆಂಟ್ ಸಿಬ್ಬಂದಿಗಳು ಜಿಎಸ್ ಟಿ ಜಾರಿಯಾದಾಗಿನಿಂದ 2 ರೂಪಾಯಿ ತೆರಿಗೆ ಹಾಕುತ್ತಿರುವುದಾಗಿ ತಿಳಿಸಿದ್ದರು. ಅದರಂತೆ ಗ್ರಾಹಕ 44 ರೂಪಾಯಿ ಪಾವತಿಸಿ ಬಿಲ್ ಪಡೆದಿದ್ದರು.

ಬಳಿಕ ಗ್ರಾಹಕ ಜಿಎಸ್ ಟಿ ಅಧಿಕಾರಿಗಳನ್ನು ಭೇಟಿಯಾಗಿ ಈ ಬಗ್ಗೆ ದೂರು ನೀಡಿದ್ದರು. ಆದರೆ ಅವರು ಯಾವುದೇ ಕ್ರಮ ಕೈಗೊಳ್ಳದಿದ್ದಾಗ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಗ್ರಾಹಕ ನ್ಯಾಯಾಲದಲ್ಲಿ ಎರಡೂ ಕಡೆಯ ವಾದ, ಪ್ರತಿವಾದ ಆಲಿಸಿದ ಮೇಲೆ ಗ್ರಾಹಕರಿಗೆ 15 ಸಾವಿರ ರೂಪಾಯಿ ಪರಿಹಾರ ಕೊಡುವಂತೆ ಆದೇಶ ನೀಡಿತ್ತು. ಅಷ್ಟೇ ಅಲ್ಲ ಹೆಚ್ಚುವರಿಯಾಗಿ ಪಡೆದುಕೊಂಡ 4 ರೂಪಾಯಿ(2 ರೂ.ಜಿಎಸ್ ಟಿ, 2 ರೂ.ಪ್ಯಾಕೇಜಿಂಗ್)ಯನ್ನು ವಾಪಸ್ ಕೊಡುವಂತೆ ಗ್ರಾಹಕ ನ್ಯಾಯಾಲಯ ರೆಸ್ಟೋರೆಂಟ್ ಗೆ ಸೂಚಿಸಿದೆ ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next