ಮಹಾನಗರ: ಉರ್ವ ಮಾರುಕಟ್ಟೆ ಬಳಿಯ “ಜೈವಿಕ ಅನಿಲ ವಿದ್ಯುತ್ ಉತ್ಪಾದನಾ ಸ್ಥಾವರ’ (ಬಯೋ ಗ್ಯಾಸ್ ಪವರ್ ಜನರೇಶನ್ ಪ್ಲ್ಯಾಂಟ್)ದಲ್ಲಿ ಇನ್ನು ಮುಂದೆ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜಿಂಗ್ ಮಾಡುವ “ಜಾರ್ಜಿಂಗ್ ಪಾಯಿಂಟ್’ ಅಳವಡಿಸಲು ಮಹ್ವತದ ತೀರ್ಮಾನ ಕೈಗೊಳ್ಳಲು ಉದ್ದೇಶಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ 2013ರಲ್ಲಿ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಉರ್ವ ಮಾರುಕಟ್ಟೆ ಬಳಿ ಜೈವಿಕ ಅನಿಲ ವಿದ್ಯುತ್ ಉತ್ಪಾದನಾ ಸ್ಥಾವರ ನಿರ್ಮಾಣ ಮಾಡಲಾಗಿತ್ತು. ಹಸಿ ತ್ಯಾಜ್ಯದಿಂದ ಘಟಕದಲ್ಲಿ ಈಗ ಅನಿಲ ಉತ್ಪಾದಿಸಿ ಅದರಿಂದ ವಿದ್ಯುತ್ ತಯಾರಿಸಲಾಗುತ್ತಿದೆ.
ಯೋಜನೆ ಆರಂಭವಾದಾಗ ಮೆಸ್ಕಾಂ ಗ್ರಿಡ್‌ಗೆ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿತ್ತು. ಆದರೆ ತಾಂತ್ರಿಕವಾಗಿ ಅದು ಸಾಧ್ಯವಾಗಿಲ್ಲ. ಸ್ಥಾವರದ ಪಕ್ಕದಲ್ಲೇ ಹೊಸದಾಗಿ ನಿರ್ಮಾಣ ವಾಗಿರುವ ಮಾರುಕಟ್ಟೆ ಕಟ್ಟಡದ ಪಾರ್ಕಿಂಗ್ ಸ್ಥಳಕ್ಕೆ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ಕೇಬಲ್‌ಗಳನ್ನು ಅಳವಡಿಸಲಾಗಿದ್ದರೂ ಮಾರುಕಟ್ಟೆ ಪೂರ್ಣ ಪ್ರಮಾಣದಲ್ಲಿ ತೆರೆದುಕೊಳ್ಳದ ಕಾರಣ
ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ.
ದಿನಕ್ಕೆ 9-10 ಯುನಿಟ್‌ಗಳಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದ್ದರೂ ಇದು ಸ್ಥಾವರಕ್ಕೆ ಸಂಬಂಧಿಸಿದ ವಿವಿಧ ಉಪಕರಣಗಳ ಬಳಕೆಗೆ ಮಾತ್ರ ಸೀಮಿತವಾಗಿದೆ. ಇದರಿಂದಾಗಿ ಯೋಜನೆಯ ನೈಜ ಉದ್ದೇಶ ಈಡೇರಿಲ್ಲ ಎನ್ನುವ ಮಾತುಗಳೂ ಕೇಳಿಬಂದಿವೆ. ಇನ್ನು ಮುಂದೆ ಇವಿ-ಜಾರ್ಜಿಂಗ್ ಪಾಯಿಂಟ್ ಗಳನ್ನು ಅಳವಡಿಸಿ ವಾಹನಗಳ ಚಾರ್ಜಿಂಗ್ ಮಾಡುವ ಮೂಲಕ ವಿದ್ಯುತ್ ಬಳಕೆಯ ಉದ್ದೇಶ ಹೊಂದಲಾಗಿದೆ. ಈ ಬಗ್ಗೆ ಕೇಂದ್ರವನ್ನು ನಿರ್ವಹಿಸುತ್ತಿರುವ ಬೆಂಗಳೂರು ಮೂಲದ “ಗ್ರೀನ್ ಎನ್ವಿರೋ ಟೆಕ್ ಸರ್ವಿಸ್’ ಸಂಸ್ಥೆ ಮಹಾನಗರ ಪಾಲಿಕೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ.ಉತ್ಪಾದನೆಯಾದ ವಿದ್ಯುತ್ ಹೊರಗೆ ಹೋಗದ ಕಾರಣ ಸಂಸ್ಥೆಗೆ ಬೇರೆ ಆದಾಯವೂ ಸಿಗುತ್ತಿಲ್ಲ ಎನ್ನುತ್ತಾರೆ ಸಂಸ್ಥೆಯ ಪ್ರಮುಖರು.
ವಿದ್ಯುತ್ ಉತ್ಪಾದನೆ ಹೇಗೆ?
ಘಟಕದ ಒಟ್ಟು ಸಾಮರ್ಥ್ಯ ದಿನಕ್ಕೆ 2 ಟನ್. ಪ್ರಸ್ತುತ ದಿನಕ್ಕೆ 1.3 ಟನ್ ವರೆಗೆ ಹಸಿ ಕಸವನ್ನು ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತದೆ. ಅಡುಗೆ ಮನೆಯ ತ್ಯಾಜ್ಯ, ಹೊಟೇಲ್ ವೇಸ್ಟ್, ತರಕಾರಿ ತ್ಯಾಜ್ಯವನ್ನು ಕೇಂದ್ರದಿಂದಲೇ ವಿವಿಧೆಡೆಯಿಂದ
ಸಂಗ್ರಹಿಸಲಾಗುತ್ತದೆ. ಅದರಲ್ಲಿ ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯಗಳಿದ್ದರೆ ವಿಂಗಡಿಸಿ, ಆರ್ಗಾನಿಕ್ ಕ್ರಶರ್ ಮೂಲಕ ಘನತ್ಯಾಜ್ಯಗಳ ತುಂಡರಿಸಿ ನೀರಿನೊಂದಿಗೆ ಮಿಶ್ರಣ ಮಾಡಿ ಡೈಜೆಸ್ಟರ್ ಪ್ಲಾಂಟ್‌ಗೆ ಪೈಪ್ ಮೂಲಕ ಕಳುಹಿಸಲಾಗುತ್ತದೆ.
ಆಮ್ಲಜನಕ ಇಲ್ಲದೆ ಎನರೋಬಿಕ್ ಪ್ರಕ್ರಿಯೆ ಮೂಲಕ ಕೊಳೆಯಿ ಸಿದಾಗ ಶೇ.97ರಷ್ಟು ಮಿಥೇನ್ ಗ್ಯಾಸ್ ಉತ್ಪತ್ತಿಯಾಗುತ್ತದೆ. ಉಳಿದಂತೆ ಕಾರ್ಬನ್ ಮೋನಾಕ್ಸೈಡ್, ಹೈಡ್ರೋಜನ್ ಸಲ್ಫೈಟ್ ಸಹಿತ ಇತರ ಗ್ಯಾಸ್ ಉತ್ಪತ್ತಿಯಾದರೂ ಪ್ರಮಾಣ ಕಡಿಮೆ. ಮಿಥೇನ್ ಗ್ಯಾಸನ್ನು ಗ್ಯಾಸ್ ಹೋಲ್ಡರ್‌ನಲ್ಲಿ ಸಂಗ್ರಹ ಮಾಡಿ ಪೈಪ್ ಮೂಲಕ ಜನರೇಟರ್‌ಗೆ ಸಂಪರ್ಕಿಸಲಾಗುತ್ತದೆ. ಗ್ಯಾಸ್ ಮೂಲಕವೇ ಜನರೇಟರ್ ಚಾಲನೆಯಾಗಿ ವಿದ್ಯುತ್ ಉತ್ಪಾದನೆಯಾಗುತ್ತದೆ.
ಪರಿಶೀಲಿಸಿ ನಿರ್ಧಾರ
ಉರ್ವದ ಜೈವಿನ ಅನಿಲ ವಿದ್ಯುತ್ ಉತ್ಪಾದನ ಸ್ಥಾವರದಲ್ಲಿ ಉತ್ಪಾದನೆಯಾಗುವ ವಿದ್ಯುತ್ ಅಲ್ಲಿಂದ ಹೊರಕ್ಕೆ ಪೂರೈಕೆಯಾಗುತ್ತಿಲ್ಲ. ಸ್ಥಾವರದ ಸ್ವಂತ ಖರ್ಚಿಗೆ ಮಾತ್ರ ಬಳಕೆಯಾಗುತ್ತಿದೆ. ಇದನ್ನು ಸಾರ್ವಜನಿಕರ ಉಪಯೋಗಕ್ಕೆ ಸಿಗುವಂತೆ ಮಾಡಲು ಇವಿ-ಜಾರ್ಜಿಂಗ್ ಪಾಯಿಂಟ್ ನಿರ್ಮಾಣದ ಪ್ರಸ್ತಾವನೆ ಇದೆ. ಈ ಬಗ್ಗೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುವುದು.
*ಸುಧೀರ್ ಶೆಟ್ಟಿ, ಕಣ್ಣೂರು, ಮೇಯರ್, ಮನಪಾ
*ಭರತ್ ಶೆಟ್ಟಿಗಾರ್