Advertisement

ಪ್ರವೀಣ್‌ ನೆಟ್ಟಾರು ಹತ್ಯೆ:ಹಿಟ್‌ಸ್ಕ್ವಾಡ್‌ನ‌ ತರಬೇತುದಾರ ಸೇರಿ ಇಬ್ಬರ ವಿರುದ್ಧ ಆರೋಪಪಟ್ಟಿ

12:00 AM May 05, 2023 | Team Udayavani |

ಬೆಂಗಳೂರು: ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಪೂರಕ ಆರೋಪ ಪಟ್ಟಿ ಸಲ್ಲಿಸಿದೆ. ಇದುವರೆಗೂ ಪ್ರಕರಣದ 21 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಎನ್‌ಐಎ ತಿಳಿಸಿದೆ.
ಪಿಎಫ್ಐನ ಹಿಟ್‌ಸ್ಕ್ವಾಡ್‌ನ‌ ಶಸ್ತ್ರಾಸ್ತ್ರ ತರಬೇತುದಾರ ಎಂ.ಎಚ್‌. ತುಫೈಲ್‌ ಮತ್ತು ನಿಷೇಧಿತ ಪಿಎಫ್ಐ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷ ಮೊಹಮ್ಮದ್‌ ಜಬೀರ್‌ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದು, ಶಂಕಿತರು 2047ರ ಹೊತ್ತಿಗೆ ಭಾರತದಲ್ಲಿ ಇಸ್ಲಾಮಿಕ್‌ ಆಳ್ವಿಕೆ ಸ್ಥಾಪಿಸುವ ಗುರಿ ಹೊಂದಿದ್ದರು. ಈ ನಿಟ್ಟಿನಲ್ಲಿ ಹಿಂದೂ ಮುಖಂಡರ ಹತ್ಯೆಗೆ ನಿರಂತರ ಸಂಚು ರೂಪಿಸಿದ್ದರು. ಒಂದು ಸಮುದಾಯದ ಸದಸ್ಯರಲ್ಲಿ ಭಯೋತ್ಪಾದನೆ ಮತ್ತು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪಿಎಫ್ಐ ಸಂಘಟನೆ ಕಾರ್ಯಸೂಚಿ ಮತ್ತು ಬೆಳ್ಳಾರೆಯಲ್ಲಿ ನಡೆದ ಮಸೂದ್‌ ಹತ್ಯೆಗೆ ಪ್ರತೀಕಾರವಾಗಿ ಪ್ರವೀಣ್‌ ಕೊಲೆಗೈಯಲಾಗಿದೆ ಎಂಬುದು ಆರೋಪ ಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ.

Advertisement

ಕೊಡಗು ಮೂಲದವನಾದ ಎಂ.ಎಚ್‌. ತುಫೈಲ್‌ ಪಿಎಫ್‌ಐ ಹಿಟ್‌ ಸ್ಕ್ವಾಡ್‌/ಸರ್ವೀಸ್‌ ಟೀಂನ ಸಕ್ರಿಯ ಸದಸ್ಯನಾಗಿದ್ದು, ಮಾಸ್ಟರ್‌ ಟ್ರೈನರ್‌ ಆಗಿದ್ದ. ದಕ್ಷಿಣ ಕನ್ನಡದಲ್ಲಿರುವ ಸ್ವಾತಂತ್ರ್ಯ ಸಮುದಾಯ ಭವನದಲ್ಲಿಯೇ ಪಿಎಫ್‌ಐ ಸದಸ್ಯರಿಗೆ ಶಸ್ತ್ರಾಸ್ತ್ರ ಬಳಕೆ ತರಬೇತಿ ನೀಡುತ್ತಿದ್ದ. ಬಳಿಕ ನುರಿತ ಸದಸ್ಯರನ್ನು ಹಿಂದೂ ಮುಖಂಡರ ಹತ್ಯೆಗೆ ಕಳುಹಿಸಲಾಗುತ್ತಿತ್ತು. ಹೀಗೆ ಪ್ರವೀಣ್‌ ನೆಟ್ಟಾರು ಹತ್ಯೆಗೂ ಕೆಲವು ಸದಸ್ಯರನ್ನು ನೇಮಿಸಲಾಗಿತ್ತು. ಕೊಲೆಗೈದ ಆರೋಪಿಗಳಿಗೆ ತುಫೈಲ್‌ ತನ್ನ ಸಹಚರರ ಮೂಲಕ ಮೈಸೂರು, ಕೊಡಗು ಹಾಗೂ ತಮಿಳುನಾಡಿನ ಈರೋಡ್‌ನ‌ಲ್ಲಿ ಆಶ್ರಯ ಕಲ್ಪಿಸಿಕೊಟ್ಟಿದ್ದ.

ಇನ್ನು ಮೊಹಮ್ಮದ್‌ ಜಬೀರ್‌ ದಕ್ಷಿಣ ಕನ್ನಡ ಜಿಲ್ಲೆಯ ಪಿಎಫ್‌ಐ ಜಿಲ್ಲಾಧ್ಯಕ್ಷನಾಗಿದ್ದು, ಪ್ರವೀನ್‌ ನೆಟ್ಟಾರು ಹತ್ಯೆಗೆ ಸಂಚು ರೂಪಿಸಿ ನಡೆದಿದ್ದ ಸಭೆಗಳಲ್ಲಿ ಭಾಗಿಯಾಗಿದ್ದ. ಮಸೂದ್‌ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಮತ್ತು ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸಿದೆ.
ಪ್ರಕರಣದ ತನಿಖೆ ಆರಂಭಿಸದ ವೇಳೆ ಪಿಎಫ್‌ಐ ಸಂಘಟನೆ ಹಿಂದೂಗಳಲ್ಲಿ ಭಯವನ್ನುಂಟು ಮಾಡುವ ಮತ್ತು 2047ರ ವೇಳೆಗೆ ಭಾರತದಲ್ಲಿ ಇಸ್ಲಾಂ ಆಡಳಿತ ಜಾರಿಗೆ ತರುವ

ಉದ್ದೇಶ ಹೊಂದಿದ್ದು ಅದಕ್ಕಾಗಿಯೇ ತನ್ನದೇ ಆದ ಹಿಟ್‌ ಸ್ಕ್ವಾಡ್‌-ಸರ್ವೀಸ್‌ ಟೀಂ/ ಕಿಲ್ಲರ್‌ ಸ್ಕ್ವಾಡ್‌ ಹೊಂದಿರುವುದು ಕಂಡು ಬಂದಿತ್ತು. ಸರ್ವಿಸ್‌ ಟೀಂನ ಸದಸ್ಯರು ಶಸ್ತ್ರಾಸ್ತ್ರ ತರಬೇತಿ ಹೊಂದಿದ್ದು ಪಿಎಫ್ಐನ ಹಿರಿಯ ನಾಯಕರ ಸೂಚನೆಯಂತೆ ಹಿಂದೂಗಳ ಹತ್ಯೆ, ಹಲ್ಲೆ ನಡೆಸುತ್ತಿದ್ದರು. ಅದರಂತೆ ನಾಲ್ವರು ಹಿಂದೂ ಮುಖಂಡರನ್ನು ಗುರುತಿಸಿದ್ದರು. ಈ ಪೈಕಿ ಬಿಜೆಪಿಯ ಯುವ ಮೋರ್ಚಾದ ಸದಸ್ಯ ಪ್ರವೀಣ್‌ ನೆಟ್ಟಾರುನನ್ನು 2022ರ ಜುಲೈ 26ರಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯ್ಯಲಾಯಿತು ಎಂದು ಎನ್‌ಐಎ ಜನವರಿ 20ರಂದು ಸಲ್ಲಿಸಿದ್ದ ತನ್ನ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸಿತ್ತು.

ಪ್ರವೀಣ್‌ ಹತ್ಯೆ ಪ್ರಕರಣ
ಪಿಎಫ್ಐನ ಹಿಟ್‌ಸ್ಕ್ವಾಡ್‌ನ‌ ಶಸ್ತ್ರಾಸ್ತ್ರ ತರಬೇತುದಾರ ಎಂ.ಎಚ್‌. ತುಫೈಲ್‌ ಮತ್ತು ನಿಷೇಧಿತ ಪಿಎಫ್ಐ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಮೊಹಮ್ಮದ್‌ ಜಬೀರ್‌ ವಿರುದ್ಧ ಆರೋಪಪಟ್ಟಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next