ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಜೀವ ಬೆದರಿಕೆ ಬಂದಿದ್ದರೆ ಪೊಲೀಸ್ ಇಲಾಖೆ ದೂರು ನೀಡಬಹುದಿತ್ತು. ಅದನ್ನು ಬಿಟ್ಟು ಬಿಜೆಪಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಕಾರ್ಯಕರ್ತರ ಅಹವಾಲು ಆಲಿಸಿದ ಬಳಿಕ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಕಡೆಯಿಂದ ತಮಗೆ ಜೀವ ಬೆದರಿಕೆ ಬಂದಿದೆ ಎಂದು ಕುಮಾರಸ್ವಾಮಿಯವರು ಹೇಳಿಕೆ ನೀಡಿದ್ದಾರೆ. ಅವರಿಗೆ ಬೆದರಿಕೆ ಬಂದಿದ್ದರೆ ಪೊಲೀಸರಿಗೆ ದೂರು ನೀಡಬಹುದಿತ್ತು. ಪೊಲೀಸ್ ಇಲಾಖೆ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳುತ್ತಿತ್ತು. ಬಿಜೆಪಿ ಕಡೆಯ ಯಾವ ವ್ಯಕ್ತಿ,
ಯಾವ ರೀತಿ ಬೆದರಿಕೆ ಬಂದಿದೆ ಎಂಬುದನ್ನು ಕುಮಾರಸ್ವಾಮಿಯವರು ಹೇಳಿಲ್ಲ. ಬಿಜೆಪಿಯನ್ನು ಗುರಿಯಾಗಿಸಿಕೊಂಡು ಈ ರೀತಿಯ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಬಿಜೆಪಿ ಎಂದಿಗೂ ಇಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ. ಇತರ ಕೆಲ ಪಕ್ಷಗಳು ಇಂತಹ ಕೆಲಸವನ್ನು ಮಾಡುತ್ತವೆ ಎಂದು ದೂರಿದರು.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಹ ಕುಮಾರಸ್ವಾಮಿಯವರ ರೀತಿಯಲ್ಲೇ ಹೇಳಿಕೆ ನೀಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಪ್ರೇರಿತ ಹಾಗೂ ದಿಕ್ಕು ತಪ್ಪಿಸುವ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರಂತಹ ಹಿರಿಯ, ಅನುಭವಿ ರಾಜಕೀಯ ವ್ಯಕ್ತಿಗಳು ಸಮಾಜ ಕಟ್ಟುವುದನ್ನು ಬಿಟ್ಟು ಒಂದು ಜಾತಿಯ ಮೇಲೆ ಮತ್ತೂಂದು ಜಾತಿಯನ್ನು ಎತ್ತಿಕಟ್ಟಿ ಜಾತಿಗಳ ನಡುವೆ ವೈಮನಸ್ಸು ಮೂಡಿಸಲು ಹೊರಟಿರುವುದು ದುರಂತ.
-ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ