Advertisement

ಚಿದಂಬರಂ ವಿರುದ್ಧ ಚಾರ್ಜ್‌ಶೀಟ್‌

04:05 AM Oct 26, 2018 | Karthik A |

ಹೊಸದಿಲ್ಲಿ: ಬಹುಕೋಟಿ 2ಜಿ ಸ್ಪೆಕ್ಟ್ರಂ ಹಗರಣದ ಭಾಗವೇ ಆಗಿರುವ ಏರ್‌ಸೆಲ್‌ -ಮ್ಯಾಕ್ಸಿಸ್‌ ಡೀಲ್‌ ಪ್ರಕರಣದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ವಿರುದ್ದ ಜಾರಿ ನಿರ್ದೇಶನಾಲಯ (ಇ.ಡಿ.) ಗುರುವಾರ 2ನೇ ಆರೋಪಪಟ್ಟಿ  ಸಲ್ಲಿಸಿದೆ. ಪ್ರಭಾವಶಾಲಿಯಾಗಿರುವ ಮಾಜಿ ಸಚಿವರನ್ನು ಮೊದಲ ಆರೋಪಿ ಎಂದು ಕೇಂದ್ರ ತನಿಖಾ ಸಂಸ್ಥೆ ಬೊಟ್ಟು ಮಾಡಿದೆ. ಅವರ ಜತೆಗೆ ಇತರ ಎಂಟು ಮಂದಿ ಪ್ರಮುಖರು ಮತ್ತು ಸಂಸ್ಥೆಗಳ ಹೆಸರುಗಳನ್ನೂ ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ. ವಿಶೇಷ ಕೋರ್ಟ್‌ ನ್ಯಾಯಾಧೀಶ ಓ.ಪಿ.ಸೈನಿ ಅವರಿಗೆ ಈ ಆರೋಪ ಪಟ್ಟಿ ಸಲ್ಲಿಸಲಾಗಿದೆ. ನ.26ರಂದು ಅದರ ಪರಿಶೀಲನೆ ನಡೆಯಲಿದೆ. ಒಂದು ವೇಳೆ ಅವರ ವಿರುದ್ಧದ ಆರೋಪ ಸಾಬೀತಾದರೆ ದಂಡ ಸಹಿತ ಏಳು ವರ್ಷಗಳ ಜೈಲು ಶಿಕ್ಷೆಯಾಗಲಿದೆ.

Advertisement

ಅಕ್ರಮ ಹಣ ವರ್ಗಾವಣೆ ಆರೋಪ
2006ರಲ್ಲಿ ವಿದೇಶಿ ಬಂಡವಾಳ ಹೂಡಿಕೆ ಉತ್ತೇಜನಾ ಮಂಡಳಿ (ಎಫ್ಐಪಿಬಿ) ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ 1.16 ಕೋಟಿ ರೂ. ಮೊತ್ತ ವರ್ಗಾಯಿಸಿದ ಆರೋಪ ಇವರ ಮೇಲಿದೆ. ಮಾರಿಷಸ್‌ನ ಗ್ಲೋಬಲ್‌ ಕಮ್ಯುನಿಕೇಶನ್‌ ಆ್ಯಂಡ್‌ ಸರ್ವಿಸಸ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌ಗೆ ಬಂಡವಾಳ ಹೂಡಲು ನಿಯಮ ಬಾಹಿರವಾಗಿ ಅನುಮೋದನೆ ನೀಡಲಾಗಿತ್ತು. 2006ರಲ್ಲಿ ಜಾರಿಯಲ್ಲಿದ್ದ ವಿದೇಶಿ ಬಂಡವಾಳ ಹೂಡಿಕೆ ನಿಯಮ ಪ್ರಕಾರ, ವಿತ್ತ ಸಚಿವರಾಗಿದ್ದ ಚಿದಂಬರಂಗೆ 600 ಕೋಟಿ ರೂ. ಮೌಲ್ಯದವರೆಗೆ ಮಾತ್ರ ವಿದೇಶಿ ಹೂಡಿಕೆಗೆ ಅನುಮತಿ ನೀಡಬಹುದಿತ್ತು. ಆದರೆ ಮಾರಿಷಸ್‌ನ ಕಂಪೆನಿ 3,560 ಕೋಟಿ ರೂ. ಹೂಡಿಕೆಗೆ ಮುಂದಾಗಿತ್ತು. ಇಷ್ಟು ದೊಡ್ಡ ಮೊತ್ತದ ಹೂಡಿಕೆಗೆ ಆರ್ಥಿಕ ವ್ಯವಹಾರಗಳಿಗಾಗಿನ ಕೇಂದ್ರ ಸಂಪುಟ ಸಮಿತಿ (ಸಿಸಿಇಎ)ಯ ಅನುಮೋದನೆ ಬೇಕು. ಆದರೆ ಆ ನಿಯಮ ಅನುಸರಿಸದೆ ಚಿದಂಬರಂ ಅನುಮತಿ ನೀಡಿದ್ದರು ಎನ್ನುವುದು ಆರೋಪ.

ತನಿಖೆಯ ವೇಳೆ ಕಾರ್ತಿ ಚಿದಂಬರಂ, ಪಿ.ಚಿದಂಬರಂ ನಡುವೆ ಹಣಕಾಸಿನ ವ್ಯವಹಾರಗಳು ನಡೆದ ಬಗ್ಗೆ ದಾಖಲೆಗಳು ಲಭ್ಯವಾಗಿವೆ. ಎಫ್ಐಪಿಬಿ ನಿಯಮಗಳನ್ನು ಉಲ್ಲಂ ಸಿರುವ ಬಗ್ಗೆ ಸಾಕಷ್ಟು ದಾಖಲೆಗಳು ಲಭ್ಯವಾಗಿದ್ದವು. ಅವುಗಳನ್ನು ಪರಿಶೀಲಿಸಿದ ಬಳಿಕವೇ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಇ.ಡಿ.ಹೇಳಿದೆ.

ಮೊದಲ ಚಾರ್ಜ್‌ಶೀಟ್‌
ಹೈಪ್ರೊಫೈಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ಜೂ.13ರಂದು ಮೊದಲ ಬಾರಿಗೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿತ್ತು. ಅದರಲ್ಲಿ ಮಾಜಿ ಸಚಿವ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಹೆಸರು ಪ್ರಸ್ತಾವಿಸಲಾಗಿದೆ. ಪೂರಕ ಆರೋಪ ಪಟ್ಟಿಯಲ್ಲಿಯೂ ಕಾರ್ತಿ ಹೆಸರು ಪ್ರಸ್ತಾವ ಮಾಡಲಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ತೀರಾ ವಾಗ್ವಾದಕ್ಕೆ ಎಡೆ ಮಾಡಿಕೊಟ್ಟಿರುವ ಈ ಪ್ರಕರಣಕ್ಕೆ ಸಂಬಂಧಿಸಿ 2012ರ ಎ.7ರಂದು ಇ.ಡಿ. ಅಕ್ರಮ ಹಣ ವರ್ಗಾವಣೆ ಕಾಯ್ದೆಯನ್ವಯ ಕೇಸು ದಾಖಲಿಸಿತ್ತು. ಅದಕ್ಕಿಂತ ಮೊದಲೇ ಸಿಬಿಐ ಎಫ್ಐಆರ್‌ ದಾಖಲಿಸಿತ್ತು. ಅದರ ಆಧಾರದಲ್ಲಿ ಈ ಕೇಸು ದಾಖಲಾಗಿತ್ತು.

ನ.29ರ ವರೆಗೆ ಬಂಧನವಿಲ್ಲ
ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ ದಿಲ್ಲಿ ಹೈಕೋರ್ಟ್‌ ನ.29ರ ವರೆಗೆ ಪಿ. ಚಿದಂಬರಂ ಅವರನ್ನು ಬಂಧಿಸಬಾರದು ಎಂದಿದೆ. ಐಎನ್‌ಎಕ್ಸ್‌ ಮಾಧ್ಯಮ ಸಂಸ್ಥೆ ಲಂಚ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ಇದಾಗಿದೆ. ಅರ್ಜಿದಾರರು ಕೋರ್ಟ್‌ಗೆ ಹಾಜ ರಾಗದೆ ಇದ್ದುದರಿಂದ ನ್ಯಾ| ಎ.ಕೆ.ಪಟ್ನಾಯಕ್‌ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ. ಜು.25ರಂದು ಮಾಜಿ ಸಚಿವರನ್ನು ಬಂಧಿಸದಂತೆ ದಿಲ್ಲಿ ಹೈಕೋರ್ಟ್‌ ಮಧ್ಯಾಂತರ ಆದೇಶ ನೀಡಿತ್ತು. ಈಗ ಅದನ್ನು ವಿಸ್ತರಿಸಿದೆ.

Advertisement

ನಿಲ್ಲಲಿಲ್ಲ ಮಾರನ್‌ ಪ್ರಕರಣ
ಕೇಂದ್ರದ ಮಾಜಿ ಸಚಿವ ದಯಾನಿಧಿ ಮಾರನ್‌, ಅವರ ಸಹೋದರ ಕಲಾನಿಧಿ ಮಾರನ್‌ ವಿರುದ್ಧವೂ ಇದೇ ಪ್ರಕರಣದಲ್ಲಿ ಸಿಬಿಐ ಆರೋಪ ಪಟ್ಟಿ ದಾಖಲಿಸಿತ್ತು. ಸದ್ಯ ಅದನ್ನು ವಿಶೇಷ ಕೋರ್ಟ್‌ ತಳ್ಳಿ ಹಾಕಿದೆ.

ಆರೋಪ ಪಟ್ಟಿಯಲ್ಲಿ ಯಾರಿದ್ದಾರೆ?
1. ಪಿ.ಚಿದಂಬರಂ
2. ಎಸ್‌.ಭಾಸ್ಕರಂ (ಕಾರ್ತಿ ಚಿದಂಬರಂ ಲೆಕ್ಕ ಪರಿಶೋಧಕ)
3. ವಿ.ಶ್ರೀನಿವಾಸನ್‌ (ಏರ್‌ಸೆಲ್‌ನ ಮಾಜಿ ಸಿಇಒ)
4. ಅಗಸ್ಟಸ್‌ ರಾಲ್ಫ್ ಮಾರ್ಶಲ್‌ (ಏರ್‌ಸೆಲ್‌ ಜತೆಗೆ ಸಂಪರ್ಕ ಹೊಂದಿದ್ದವರು)
5. ಆಸ್ಟ್ರೋ ಆಲ್‌ ಏಷ್ಯಾ ನೆಟ್‌ವರ್ಕ್ಸ್ ಮಲೇಷ್ಯಾ
6. ಏರ್‌ಸೆಲ್‌ ಟೆಲಿವೆಂಚರ್ಸ್‌ ಲಿಮಿಟೆಡ್‌
7. ಮ್ಯಾಕ್ಸಿಸ್‌ ಮೊಬೈಲ್‌ ಸರ್ವಿಸಸ್‌ ಎಸ್‌ಡಿಎನ್‌ ಬಿಎಚ್‌ಡಿ
8. ಬುಮಿ ಅರ್ಮಡ ಬೆರ್ಹಾದ್‌
9. ಬುಮಿ ಅರ್ಮಡ ನ್ಯಾವಿಗೇಷನ್‌ ಎಸ್‌ಡಿಎನ್‌ ಬಿಎಚ್‌ಡಿ

Advertisement

Udayavani is now on Telegram. Click here to join our channel and stay updated with the latest news.

Next