Advertisement

ಅಕ್ಷರ ಸಂಸ್ಕೃತಿ ಬೆಳೆಸುವುದು ಅಗತ್ಯ

12:24 PM Nov 06, 2017 | |

ಬೀದರ: ಓದುವುದು, ಕಾವ್ಯ ರಚಿಸುವುದು, ಪುಸ್ತಕ ಪ್ರಕಟಿಸಿ ಅಕ್ಷರ ಸಂಸ್ಕೃತಿ ಬೆಳೆಸುವುದು ಈ ಹೊತ್ತಿನ ಬಹು ದೊಡ್ಡ
ಅಗತ್ಯವಾಗಿದೆ ಎಂದು ಕಲಬುರಗಿಯ ನಿವೃತ್ತ ಪ್ರಾಧ್ಯಾಪಕ ಡಾ| ಕಾಶಿನಾಥ ಅಂಬಲಗೆ ಹೇಳಿದರು.

Advertisement

ಟೋಕರೆ ಪರಿವಾರದ ಕಲ್ಯಾಣ ಮಹೋತ್ಸವ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕಾವ್ಯ ಕುಂಚ ಗಾಯನ, ಸಾಂಸ್ಕೃತಿಕ ಸಂಜೆ ಹಾಗೂ “ಅಕ್ಷರ ಕಾರಂಜಿ’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಟೋಕರೆ ಪರಿವಾರ ಈ ಅಗತ್ಯ ಪೂರೈಸಿದ್ದು, ಇದೊಂದು ಅಪರೂಪದ ಕಾರ್ಯಕ್ರಮ ಎಂದು ಬಣ್ಣಿಸಿದರು. ಜನಪರ ಜೀವಪರ ಕಾಳಜಿಯುಳ್ಳವರಿಂದ ಮಾತ್ರ ಇಂಥ ಕಾರ್ಯಸಾಧ್ಯ. ಬಸವಾದಿ ಶರಣರ ವೈಚಾರಿಕ ನಿಲುವುಗಳೇ ಇಂಥ ಕಾರ್ಯಗಳಿಗೆ ಸತ್ಪ್ರೇರಣೆ ಎಂದರು.

ಸಾಹಿತ್ಯ ಮತ್ತು ಸಂಸ್ಕೃತಿಯು ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡುತ್ತವೆ. ಆದ್ದರಿಂದ ಯುದ್ಧ- ಹಿಂಸೆಗಳನ್ನು
ಸಾಹಿತ್ಯದಿಂದ ಎದುರಿಸೋಣ ಎಂದು ಹೇಳಿದರು.

ಕಸಾಪ ಕಾರ್ಯದರ್ಶಿ ಡಾ| ಬಸವರಾಜ ಬಲ್ಲೂರ ಮಾತನಾಡಿ, ಸಾಹಿತ್ಯ ಪರಿಷತ್ತು ಸಾಹಿತ್ಯಿಕ ಚಟುವಟಿಕೆಗಳ
ಜೊತೆಗೆ ಸಮಾಜೋ ಸಾಂಸ್ಕೃತಿಕ ಚಟುವಟಿಕೆಗಳ ಕಡೆ ಮುಖ ಮಾಡಿದೆ. ಅಕ್ಷರ ಪ್ರೀತಿಯಿಂದ 15 ಜಿಲ್ಲಾ ಕನ್ನಡ
ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣ ಸೇರಿದಂತೆ ಹಲವಾರು ಮೌಲಿಕ ಕೃತಿಗಳನ್ನು ಹೊರತಂದ ಪರಿಷತ್ತು, ಜಿಲ್ಲಾ ಪ್ರಾತಿನಿಧಿಕ ಸಂಕಲನ ಕಿರಿಯರು, ಹಿರಿಯರು ಸೇರಿದಂತೆ 112 ಜನ ಕವಿಗಳ ಕವಿತೆಗಳನ್ನು ಒಳಗೊಂಡ ಮಹತ್ವಕಾಂಕ್ಷೆಯ ಕೃತಿಯಾಗಿದೆ ಎಂದರು.

ಮದುವೆ ಆಮಂತ್ರಣ ಪತ್ರದಲ್ಲಿ ಸಿದ್ದ ಪಂಚಾಂಗದ ನಿರ್ದಿಷ್ಟ ಸಮಯ ಸೇರಿಸದೆ ಬಸವ ತತ್ವವನ್ನು ನಿಜಾಚರಣೆಗೆ ತಂದಿದ್ದು ಕುವೆಂಪು ಅವರ ಪತ್ರ ಪೂರ್ಣಚಂದ್ರ ತೇಜಸ್ವಿಯವರ ಮದುವೆಯ ಆಮಂತ್ರಣ ನೆನಪಿಸುತ್ತದೆ ಎಂದು ಸ್ಮರಿಸಿದರು.

Advertisement

ಶಾಸಕ ರಹೀಮ್‌ ಖಾನ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶುದ್ಧ ವೈಚಾರಿಕತೆಯ ಪ್ರತಿಪಾದನೆ, ಬಸವ
ತತ್ವದ ನಿಜಾಚರಣೆಯೆಂದು ಬಣ್ಣಿಸಿದರು. ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿವಿ ಡೀನ್‌ ಡಾ| ಸುರೇಶ ಪಾಟೀಲ, ಬೀಜ ವಿಜ್ಞಾನ ಮತ್ತು ತಾಂತ್ರಿಕತೆ ಮುಖ್ಯಸ್ಥ ಡಾ| ಎಸ್‌.ಎನ್‌. ವಾಸುದೇವನ್‌, ಉದ್ಯೋಗ ಮತ್ತು ತರಬೇತಿ ಇಲಾಖೆ ಜಂಟಿ ನಿರ್ದೇಶಕ ವೈಜಗೊಂಡ, ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ, ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಲಕ್ಷ್ಮೀಬಾಯಿ ಚಲುವಾ, ಶರಣಬಸಪ್ಪ ಚಲುವಾ, ಬಸವಕುಮಾರ, ಮಂಗಳಗೌರಿ, ದೇಶಾಂಶ ಹುಡಗಿ. ಎಂ.ಜಿ. ದೇಶಪಾಂಡೆ, ಹಂಸಕವಿ, ಗೋಪಾಲಕೃಷ್ಣ ವಂಡಸೆ, ವಿಜಯಕುಮಾರ ಗೌರೆ, ಸಂಜೀವಕುಮಾರ ಅತಿವಾಳೆ, ಸುನೀತಾ ದಾಡಗೆ, ಶ್ರೀದೇವಿ ಹೂಗಾರ ಮೊದಲಾದವರು ಕಾವ್ಯ ವಾಚನ ಮಾಡಿದರು. ಅದಕ್ಕೆ ಶಿವಕುಮಾರ ಪಾಂಚಾಳ ಧ್ವನಿ ನೀಡಿದರು. ಯೋಗೀಶ ಮಠದ ಅವರು ಕಾವ್ಯಕ್ಕೆ ಚಿತ್ರ ರೂಪ ನೀಡಿದರು. ಹೀಗೆ ಕಾವ್ಯ- ಕುಂಚ- ಗಾಯನ ನೆರವೇರಿತು. ಶಿವಶಂಕರ ಟೋಕರೆ ಸ್ವಾಗತಿಸಿದರು. ಚನ್ನಬಸವ ಹೇಡೆ ನಿರೂಪಿಸಿದರು. ಟಿ.ಎಂ. ಮಚ್ಚೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next