ಕೊಪ್ಪಳ: ಭತ್ತದ ನಾಡು, ಅಂಜನಾದ್ರಿಯ ನೆಲೆವೀಡು ಗಂಗಾವತಿ ಚುನಾವಣ ಕಣ ರಂಗೇರಿದೆ. ಬಿಜೆಪಿ ಶಾಸಕ ಪರಣ್ಣಮುನವಳ್ಳಿ, ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ, ಕೆಆರ್‌ಪಿಪಿಯಿಂದ ಗಾಲಿ ಜನಾರ್ದನ ರೆಡ್ಡಿ ಆರ್ಭಟಿಸುತ್ತಿದ್ದಾರೆ.
ಹಾಲಿ ಶಾಸಕ ಪರಣ್ಣ ಮುನವಳ್ಳಿ ಹಿಂದುತ್ವದ ಜಪ ಮಾಡುತ್ತಲೇ ಗಂಗಾವತಿ ಕ್ಷೇತ್ರದಲ್ಲಿ ಗೆಲುವಿಗೆ ಯತ್ನ ನಡೆಸಿದ್ದಾರೆ. 2008ರಲ್ಲಿ ಗೆದ್ದಿದ್ದ ಪರಣ್ಣ 2018ರಲ್ಲೂ ಗೆಲುವು ಕಂಡಿದ್ದರು. 3ನೇ ಬಾರಿ ಗೆಲ್ಲಲು ಶತಾಯಗತಾಯ ಕಸರತ್ತಿನಲ್ಲಿದ್ದಾರೆ. ಇದು ಹಿಂದುತ್ವದ ಅಳಿವು- ಉಳಿವಿನ ಪ್ರಶ್ನೆ, ಹಿಂದುತ್ವ ಗೆಲ್ಲಲು ನನಗೆ ಮತ ನೀಡಿ ಎನ್ನುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ 2004ರಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದರು. ಮತ್ತೆ 2013ರಲ್ಲಿ ದಳದಿಂದ ಗೆದ್ದು, 2018ರಲ್ಲಿ ಕೈನಿಂದ ಸ್ಪ ರ್ಧಿಸಿ ಸೋಲು ಕಂಡಿದ್ದರು. ಈಗ ಮತ್ತೆ ಹೇಗಾದರೂ ಮಾಡಿ ಕ್ಷೇತ್ರ ಕೈ ವಶಕ್ಕೆ ರಣತಂತ್ರ ಹೆಣೆಯುತ್ತಿದ್ದಾರೆ. ಇವರಿಬ್ಬರಿಗೂ ಟಕ್ಕರ್ ನೀಡಲು ಅಂಜನಾದ್ರಿಯ ಜಪ ಮಾಡುತ್ತ, ಬಸವಣ್ಣ ಆದರ್ಶ ಎನ್ನುತ್ತಲೇ ಕೆಆರ್‌ಪಿಪಿ ಗಾಲಿ ಜನಾರ್ದನ ರೆಡ್ಡಿ ಕ್ಷೇತ್ರದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿ ಇಬ್ಬರನ್ನು ನಿದ್ದೆಗೆಡಿಸಿದ್ದಾರೆ. ನಗರಸಭೆ ಹಲವು ಸದಸ್ಯರು ಸೇರಿ, ಹೋಬಳಿ, ಗ್ರಾ.ಪಂ.ವಾರು ಮುಖಂಡರನ್ನು ಆಪರೇಶನ್ ಮಾಡಿ ತಮ್ಮ ಫುಟ್ಬಾಲ್ ಆಟ ಆರಂಭಿಸಿದ್ದಾರೆ. ಕ್ಷೇತ್ರದಲ್ಲೀಗ ತ್ರಿಕೋನ ಸ್ಪರ್ಧೆಯ ಆಟವು ಜೋರಾಗಿ ನಡೆಯುತ್ತಿದೆ.
ಪ್ಲಸ್-ಮೈನಸ್ ಲೆಕ್ಕಾಚಾರ: ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಕ್ಷೇತ್ರದಲ್ಲಿ ಕೆಲವೊಂದು ಹಗರಣಗಳ ಆರೋಪಕ್ಕೆ ತುತ್ತಾಗಿ ಮುಜುಗರ ಅನುಭವಿಸಿದ್ದಾರೆ. ಇದು ಅವರಿಗೆ ಮೈನಸ್ ಆಗುವ ಸಾಧ್ಯತೆ ಇದೆ. ಆದರೆ ಪ್ರತೀ ಹಳ್ಳಿಗೂ ಜನರೊಂದಿಗೆ ಸಂಪರ್ಕ ಹೊಂದಿರುವುದು ಇವರಿಗೆ ಪ್ಲಸ್. ಇನ್ನು ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಪ್ರಚಾರದ ವೈಖರಿಯೇ ವಿಭಿನ್ನವಾಗಿದೆ. ರಾತ್ರಿ ಪ್ರಚಾರ ಆರಂಭಿಸುವುದು ಕಾರ್ಯಕರ್ತರಲ್ಲಿ, ಮುಖಂಡರಲ್ಲಿ ಬೇಸರ ತರಿಸಿದೆ. ಸಂಜೆ 5ರಿಂದ ಮಧ್ಯರಾತ್ರಿವರೆಗೂ ಹಳ್ಳಿಯಲ್ಲಿ ಪ್ರಚಾರ ನಡೆಸುವ ಅನ್ಸಾರಿ ಟೀಕೆಗಳಿಗೆ ತುತ್ತಾಗಿದ್ದಾರೆ. ಇವರು ಜನಸಂರ್ಪಕಕ್ಕೆ ರಾತ್ರಿಯೇ ಇವರನ್ನು ಭೇಟಿಯಾಗುವ ಪರಿಸ್ಥಿತಿ ಇಂದಿಗೂ ಇದೆ. ಕೈನಲ್ಲಿ ಆಂತರಿಕ ಬೇಗುದಿ ಇನ್ನೂ ತಣ್ಣಗಾಗಿಲ್ಲ.
ಇನ್ನು ಜನಾರ್ದನ ರೆಡ್ಡಿ ಆಪರೇಶನ್ ಆಟ ಶುರು ಮಾಡಿರುವುದು, ಹಿಂದೆ ಬಳ್ಳಾರಿ ಗಣಿ ಹಗರಣಗಳ ಲೆಕ್ಕಾಚಾರ, ಜನರಿಗೆ ನೇರ ಸಂಪರ್ಕಕ್ಕೆ ಸಿಗದಿರುವುದು. ಯಾವುದೇ ನಾಯಕರ ಸಂಪರ್ಕಕ್ಕೂ ದೊರೆಯದೇ ಇರುವುದು ಮೈನಸ್ ಎಂದೆನಿಸಿದೆ. ಕ್ಷೇತ್ರದಲ್ಲಿ ಅಧಿ ಪತ್ಯಕ್ಕೆ ಎಲ್ಲ ಪ್ರಯೋಗಗಳು ಇವರಿಂದ ನಡೆದಿವೆ.
~ ದತ್ತು ಕಮ್ಮಾರ