ಚನ್ನರಾಯಪಟ್ಟಣ: ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸದಸ್ಯರು, ತಮಗೆ ಅನುಕೂಲವಾಗುವಂತಹ ಮೀಸಲು ನಿಗದಿ ಮಾಡಿಸಿ ಕೊಡಲು, ಬೆಂಬಲಿತ ಪಕ್ಷದ ಮುಖಂಡರ ಮನೆ ಬಾಗಿಲಿಗೆ ಆಕಾಂಕ್ಷಿಗಳು ಎಡತಾಕಿ ಒತ್ತಡ
ಹಾಕುತ್ತಿದ್ದಾರೆ.
ಚುನಾವಣಾ ಆಯೋಗ ಈ ಬಾರಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ 5 ವರ್ಷದ ಅವಧಿಯಲ್ಲಿ ತಲಾ ಎರಡೂವರೆ ವರ್ಷಕ್ಕೆ ಮೀಸಲು ನಿಗದಿ ಮಾಡುತ್ತಿದೆ. ಹೀಗಾಗಿ ಗ್ರಾಮ ಗದ್ದುಗೆ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಶಾಸಕ ಬಾಲಕೃಷ್ಣ, ಎಂಎಲ್ಸಿ ಗೋಪಾಲ ಸ್ವಾಮಿ, ಬಿಜೆಪಿ ಮುಖಂಡರ ಮನೆಗೆ ತೆರಳಿ, ತಮಗೆ ಅನುಕೂಲ ಆಗುವ ಮೀಸಲಾತಿಯನ್ನು ಸರ್ಕಾರದ ಮೂಲಕ ಮಾಡಿಸುವಂತೆ ಒತ್ತಡ ಹೇರುತ್ತಿದ್ದಾರೆ.
ರಾಜ್ಯಪತ್ರದಲ್ಲಿ ಪ್ರಕಟಣೆ: ಚುನಾವಣೆಯಲ್ಲಿ ಗೆಲುವು ಸಾಧಿಸಿರುವವರಿಗೆ ಈಗಾಗಲೇ ಚುನಾವಣಾಧಿಕಾರಿ ಪ್ರಮಾಣ ಪತ್ರ ನೀಡಿದ್ದಾರೆ. ಆದರೆ, ರಾಜ್ಯ ಸರ್ಕಾರ ಅಧಿಕೃತವಾಗಿ ರಾಜ್ಯಪತ್ರದಲ್ಲಿ ಪ್ರಕಟಿಸಲು ಈಗಾಗಲೆ ಸಕಲ ತಯಾರಿ ಮಾಡುತ್ತಿದೆ. ರಾಜ್ಯಪತ್ರದಲ್ಲಿ ಪ್ರಕಟಣೆಯಾದ 30 ದಿನದ ಒಳಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗಬೇಕು. ಅಷ್ಟರಲ್ಲಿ ರಾಜಕೀಯ ಮುಖಂಡರ ಭೇಟಿ ಮಾಡಿ ಮುಂದಿನ ಚುನಾವಣೆಯನ್ನು ನೆನಪು ಮಾಡಿ ತಮಗೆ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಮಾಡಿಸುವಂತೆ ಬೇಡಿಕೆ ಇಡುತ್ತಿದ್ದಾರೆ.
ಇದನ್ನೂ ಓದಿ:ಹಿಂಸಾಚಾರ, ಪ್ರತಿಭಟನೆ; ಕೊನೆಗೂ ಸೋಲೊಪ್ಪಿಕೊಂಡ ಟ್ರಂಪ್, ಬೈಡೆನ್ ಗೆ ಭರ್ಜರಿ ಗೆಲುವು
ಸುತ್ತೋಲೆ ರವಾನೆ: ಈಗಾಗಲೇ ಚುನಾವಣಾ ಆಯೋಗ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಮಾಡುವ ಬಗ್ಗೆ ಜಿಲ್ಲಾ ಹಾಗೂ ತಾಲೂಕು ಆಡಳಿತಕ್ಕೆ ಸೂಚನೆ ನೀಡಿದೆ. ಗ್ರಾಪಂ ಲೆಕ್ಕದಲ್ಲಿ ಎಸ್ಸಿ, ಎಸ್ಟಿ, ಬಿಸಿಎಂ ಎ ಹಾಗೂ ಬಿ, ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ನಿಗದಿಪಡಿಸಬೇಕು ಎಂದು ಸುತ್ತೋಲೆ ಹೊರಡಿಸಿ, ಸಿದ್ಧತೆ ಮಾಡಿಕೊಳ್ಳುವಂತೆ ಹೇಳಿದೆ.
ಒಂದೇ ಸಮುದಾಯಕ್ಕೆ ಅಧಿಕಾರ ಇಲ್ಲ: ಈಗಾಗಲೇ ಚುನಾವಣಾ ಆಯೋಗ ಹೊರಡಿಸಿರುವ ಸುತ್ತೋಲೆ ಪ್ರಕಾರ ಒಂದು ಗ್ರಾಪಂನಲ್ಲಿ ಒಂದೇ ಸಮುದಾಯದವರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಪಡೆದು ಕೊಳ್ಳುವಂತಿಲ್ಲ, ಮೀಸಲಾತಿಯೊಂದಿಗೆ ಮಹಿಳೆಯರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾದರೆ ಒಂದೇ ವರ್ಗಕ್ಕೆ ಸೇರಿದವರಿಗೆ ಅವಕಾಶವಿಲ್ಲ, ಈಗೆ ಸಾಕಷ್ಟು ಜಾಣ್ಮೆಯಿಂದ ಆಯೋಗ ಸೂಚನೆ ನೀಡಿರುವುದರಿಂದ ಜಿಲ್ಲಾಡಳಿತ ಸವಾಲಿನಲ್ಲಿ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಬೇಕಾಗಿದೆ.
– ಶಾಮಸುಂದರ್ ಕೆ.ಅಣ್ಣೇನಹಳಿ