Advertisement

6 ಹೋಬಳಿಯಲ್ಲಿ ಶೀಘ್ರ ಮೇವು ಬ್ಯಾಂಕ್‌ ಆರಂಭ

03:37 PM Aug 01, 2019 | Naveen |

ಚನ್ನರಾಯಪಟ್ಟಣ/ಶ್ರವಣಬೆಳಗೊಳ: ಪೂರ್ವ ಮುಂಗಾರು ಹಾಗೂ ಮುಂಗಾರು ಕೈ ಕೊಟ್ಟಿದ್ದರಿಂದ ತಾಲೂಕಿನಲ್ಲಿ ಬರಗಾಳ ಆವರಿಸಿದ್ದು ರಾಸುಗಳ ಮೇವಿಗೆ ತೊಂದರೆ ಉಂಟಾಗುತ್ತಿರುವುದರಿಂದ ತಾಲೂಕಿನ ಆರು ಹೋಬಳಿ ಕೇಂದ್ರದಲ್ಲಿ ಮೇವು ಬ್ಯಾಂಕ್‌ ಶೀಘ್ರದಲ್ಲಿ ತೆರೆಯಲಾಗುವುದು ಎಂದು ಶಾಸಕ ಸಿ.ಎನ್‌.ಬಾಲಕೃಷ್ಣ ಭರವಸೆ ನೀಡಿದರು.

Advertisement

ಬರದಿಂದ ಮೇವಿಗೆ ಸಮಸ್ಯೆ: ತಾಲೂಕಿನ ಶ್ರವಣ ಬೆಳಗೊಳ ಸುಂಡಹಳ್ಳಿ ಗ್ರಾಮದಲ್ಲಿ ಮೇವು ಬ್ಯಾಂಕ್‌ ಉದ್ಘಾಟಿಸಿ ಮಾತನಾಡಿದ ಅವರು, ಮಳೆ ಇಲ್ಲದ ಕಾರಣ ಮೇವಿನ ಸಮಸ್ಯೆ ಉಂಟಾಗುತ್ತಿದೆ. ಹೈನು ಗಾರಿಕೆ ಮಾಡುವ ಕೃಷಿಕರು ಮೇವಿಗೆ ಪರದಾಡ ಬಾರದು ಎಂಬ ಉದ್ದೇಶದಿಂದ ಮುಂದಿನ ದಿವಸದಲ್ಲಿ ಹಿರೀಸಾವೆ, ನುಗ್ಗೇಹಳ್ಳಿ, ಕಸಬಾ, ಬಾಗೂರು ಸೇರಿದಂತೆ ಅಗತ್ಯ ಇರುವ ಕಡೆ ಮೇವು ಬ್ಯಾಂಕ್‌ ತೆರೆಯಲಾಗುವುದು ಎಂದು ತಿಳಿಸಿದರು.

ಸರ್ಕಾರ ರೈತ ಪರವಾಗಲಿ: ಯಡಿಯೂರಪ್ಪ ಸರ್ಕಾರ ಮಾಡುತ್ತಿರುವುದು ಸ್ವಾಗತಾರ್ಹ ಅವರು ರೈತರಪರವಾಗಿ ಅಧಿಕಾರ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಅದರಂತೆ ನಡೆದುಕೊಳ್ಳ ಬೇಕು. ರಾಜ್ಯದಲ್ಲಿ 14 ತಿಂಗಳು ಮೈತ್ರಿ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಸಾಲ ಮನ್ನಾ ಮಾಡುವ ಮೂಲಕ ರೈತರ ಬಾಳಿಕೆ ಬೆಳ ಕಾಗಿದೆ, ಸುಂಡಹಳ್ಳಿ ಗ್ರಾಮದಲ್ಲಿ ಸುಮಾರು 1,200 ಮಂದಿ ಸಾಲ ಮನ್ನಾ ಯೋಜನೆ ಅನುಕೂಲ ಪಡೆದಿದ್ದಾರೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ತಾಲೂಕಿನಲ್ಲಿ ಈಗಾಗಲೇ 60 ಸಾವಿರ ಮಂದಿ ರೈತರು ನೋಂದಣಿ ಮಾಡಿಕೊಂಡಿದ್ದು ಕೇಂದ್ರದ ಸಹಾಯ ಧನದ ಜೊತೆ ರಾಜ್ಯದಲ್ಲಿ ನಾಲ್ಕು ಸಾವಿರ ನೀಡುವು ದಾಗಿ ಯಡಿಯೂರಪ್ಪ ತಿಳಿಸಿದ್ದಾರೆ. ಆದಷ್ಟು ಬೇಗ ಹಣ ರೈತರ ಖಾತೆಗೆ ಜಮಾ ಮಾಡಬೇಕು. ಬರಗಾಲ ದಲ್ಲಿ ಈ ಹಣ ರೈತರಿಗೆ ಅನುಕೂಲವಾಗಲಿದೆ ಹಾಗಾಗಿ ತಡಮಾಡುವುದು ಬೇಡ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಸರ್ಕಾರ ಇರುವುದರಿಂದ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಅನುಕೂಲ ಆಗುತ್ತದೆ. ಇದನ್ನು ಮುಖ್ಯ ಮಂತ್ರಿಗಳು ಹಾಗೂ ಬಿಜೆಪಿ ಪಕ್ಷದವರು ಮಾಡಬೇಕು, ಹಲವು ತಿಂಗಳಿನಿಂದ ನರೇಗಾದ ಬಾಕಿ ಎರಡು ಸಾವಿರ ಕೋಟಿ ಹಣ ಬಿಡುಗಡೆ ಮಾಡಿಲ್ಲ. ಇದನ್ನು ಆದಷ್ಟು ಬೇಗ ಬಿಡುಗೆ ಮಾಡಿಸುವತ್ತ ಮುಖ್ಯ ಮಂತ್ರಿ ಗಮನ ಹರಿಸಬೇಕು ಎಂದು ಹೇಳಿದರು.

Advertisement

ಹಣಕ್ಕಾಗಿ ಪಕ್ಷಾಂತರ- ವಿಷಾದ: ಕ್ಷೇತ್ರದ ಜನತೆ ಒಂದು ಪಕ್ಷವನ್ನು ನಂಬಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿರುತ್ತಾರೆ. ಆದರೆ ಜನಪ್ರತಿನಿಧಿಗಳು ಮಾರಾ ಟದ ವಸ್ತುಗಳಾಗುತ್ತಿರುವುದು ರಾಜ್ಯಕ್ಕೆ ಅಪಾಯ ಕಾರಿ. ಒಂದು ಪಕ್ಷದಲ್ಲಿ ಗೆದ್ದ ಮೇಲೆ ಐದು ವರ್ಷ ಜನರ ಸೇವೆ ಮಾಡಬೇಕು ಇದರ ಬದಲಾಗಿ ಪುನಃ ಚುನಾವಣೆ ತರುವುದು ಶೋಭೆಯಲ್ಲ. ಐದು ವರ್ಷದ ಶಾಸಕ ಸ್ಥಾನವನ್ನು ಪೂರ್ತಿಗೊಳಿಸಿ ನಂತರ ಬೇರೆ ಪಕ್ಷಕ್ಕೆ ಹೋಗುವುದರಲ್ಲಿ ಯಾರ ಅಭ್ಯಂತರವು ಇರುವುದಿಲ್ಲ ಎಂದರು.

ರೈತರು ಮೇವು ಖರೀದಿಸಲಿ: ತಹಶೀಲ್ದಾರ್‌ ಜೆ.ಬಿ. ಮಾರುತಿ ಮಾತನಾಡಿ, ತಾಲೂಕಿನ ಪ್ರತಿ ಹೋಬಳಿಗೆ ಸುಮಾರು ಮೂರು ಸಾವಿರ ಮಂದಿ ರೈತರು ಮೇವಿನ ಚೀಟಿ ವಿತರಣೆ ಮಾಡುವ ಗುರಿ ಹೊಂದಲಾಗಿದೆ. ಈತ ಕೇವಲ 200 ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ದಯಮಾಡಿ ರೈತರು ಮೇವು ಕೊಳ್ಳಲು ಮುಂದಾಗ ಬೇಕು. ಒಂದು ರೈತ ಕುಟುಂಬಕ್ಕೆ 50 ಕೇಜಿ ಒಮ್ಮೆ ನೀಡಲಾಗುವುದು. ಬೇಡಿಕೆ ಇದ್ದರೆ 2ನೇ ಹಂತದಲ್ಲಿ ಪುನಃ 50 ಕೇಜಿ ನೀಡಲಾಗುವುದು ಎಂದು ತಿಳಿಸಿದರು.

ತಾಲೂಕು ಪಶು ವೈದ್ಯಾಧಿಕಾರಿ ಡಾ. ಕೃಷ್ಣಮೂರ್ತಿ, ಪಶು ವೈದ್ಯರಾದ ಸೋಮಶೇಖರ್‌, ಸುಬ್ರಹ್ಮಣ್ಯ, ಡಾ.ಶ್ರೀಧರ್‌, ಡಾ.ಗುಂಡಣ್ಣ, ಟಿಎಪಿಎಂಎಸ್‌ ಕೃಷ್ಣೇಗೌಡ, ನಿಂಗೇಗೌಡ, ಪಿ.ಕೆ.ಮಂಜೇಗೌಡ ಮೊದಲಾದವರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next