ಚನ್ನಪಟ್ಟಣ: ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅತಿವೃಷ್ಟಿಯಿಂದಾಗಿ ತಾಲೂಕಿನ ಕೆರೆ- ಕಟ್ಟೆಗಳು ತುಂಬಿ, ಕೋಡಿಗಳು ಒಡೆದು ಗ್ರಾಮಗಳಿಗೆ ನೀರು ನುಗ್ಗಿ ಬೆಳೆನಾಶದ ಜತೆಗೆ ರೈತರ ಬದುಕು ಅಸ್ತವ್ಯಸ್ತವಾಗಿತ್ತು. ಆದರೆ, ಈ ಬಾರಿಯ ಮುಂಗಾರು ಹಾಗೂ ಹಿಂಗಾರು ಎರಡೂ ಬಹುತೇಕ ಕೈಕೊಟ್ಟ ಕಾರಣ ತಾಲ್ಲೂಕಿನಲ್ಲಿ ಅನಾವೃಷ್ಟಿ ಹಾಗೂ ಬರದ ಛಾಯೆ ಆವರಿಸಿದೆ.
ತಾಲೂಕಿನ ನೀರಾವರಿಗೆ ಪ್ರಮುಖ ಆಸರೆಯಾಗಿ ರುವ ಇಗ್ಗಲೂರು ಹಾಗೂ ಕಣ್ವ ಜಲಾಶಯ ಮಳೆರಾಯನ ಅವಕೃಪೆಯಿಂದ ಮಳೆಗಾಲದಲ್ಲಿಯೇ ಬರಿದಾಗುವ ಆತಂಕ ಎದುರಾಗಿದೆ. ಮುಂಗಾರು ಮುಗಿಯುತ್ತಾ ಬಂದರೂ ಕೆರೆಗಳಲ್ಲಿ ನೀರಿಲ್ಲದೆ ಖಾಲಿ ಹೊಡೆಯುತ್ತಿದ್ದು, ಕಣ್ವ ಏತ ನೀರಾವರಿ ಯೋಜನೆ ಇದ್ದರೂ ಈ ಬಾರಿ ನೀರಿನ ತೀವ್ರ ಅಭಾವ ತಾಲೂಕನ್ನು ಆವರಿಸುವ ಭಯ ಕಾಡುತ್ತಿದೆ. ಈ ಬಾರಿಯ ಮುಂಗಾರು ಹಾಗೂ ಇದೀಗ ಬಹುತೇಕ ಹಿಂಗಾರು ಕೂಡ ಕೈಕೊಡುವ ಲಕ್ಷಣಗಳು ಕಾಣಿಸುತ್ತಿದ್ದು, ತಾಲೂಕಿ ನಲ್ಲಿ ನೀರಿಗಾಗಿ ಜನ-ಜಾನುವಾರು ಪರಿತಪಿಸುವ ಅಂದಾಜು ಕಾಣುತ್ತಿದೆ.
ಕಣ್ವ ಜಲಾಶಯ ತಾಲೂಕಿನ ಜೀವನಾಡಿ: 32 ಅಡಿ ಆಳ ಹೊಂದಿರುವ ತಾಲೂಕಿನ ಜೀವನಾಡಿ ಯಾದ ಕಣ್ವ ಜಲಾಶಯದಲ್ಲಿ ಗರಿಷ್ಠ 0.5 ಟಿಎಂಸಿಯಷ್ಟು ನೀರಿನ ಸಾಮರ್ಥಯ ಹೊಂದಿದೆ. ಪ್ರಸ್ತುತ ಇಲ್ಲಿ 25 ಅಡಿಯಷ್ಟು ನೀರಿನ ಲಭ್ಯತೆ ಇದೆ. ಇಗ್ಗಲೂರಿನ ಎಚ್ .ಡಿ.ದೇವೇಗೌಡ ಬ್ಯಾರೇಜಿನಲ್ಲಿ 22 ಅಡಿಯಷ್ಟು ನೀರು ಶೇಖರಣೆ ಮಾಡಬಹು ದಾಗಿದ್ದು, ಇದೀಗ ಅಲ್ಲಿ ಕೇವಲ 18 ಅಡಿಗಳಷ್ಟು ಮಾತ್ರ ನೀರಿನ ಲಭ್ಯತೆ ಇದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬರಿದಾದ ಕೆರೆಗಳು: ಇಗ್ಗಲೂರು ಬ್ಯಾರೇಜ್‌ನಿಂದ ಕಣ್ವ ಏತ ನೀರಾವರಿ ಮೂಲಕ ತಾಲೂಕಿನ ಎಲ್ಲಾ ಕೆರೆಕಟ್ಟೆಗಳನ್ನು ತುಂಬಿಸಲಾಗುತ್ತಿದ್ದು, ಕಳೆದ ಐದಾರು ವರ್ಷದಿಂದ ನೀರಾವರಿ ಯೋಜನೆ ಯಿಂದಾಗಿ ಕೆರೆ-ಕಟ್ಟೆಗಳೆಲ್ಲಾ ತುಂಬಿ ಆಂತರ್ಜಲ ಸಹ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡ ಪರಿಣಾಮವಾಗಿ ಮಳೆ ಬೀಳದೆ ಬರ ಹೊಡೆದರೂ ಸಹ ತಾಲೂಕು ಮಾತ್ರ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು. ಇದಕ್ಕೆ ಏತ ನೀರಾವರಿಯಿಂದ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುತ್ತಿದ್ದದ್ದು ಕಾರಣ. ಆದರೆ ಈ ಬಾರಿ ಮುಂಗಾರು ಮುಗಿಯುತ್ತಾ ಬಂದರೂ ಕೆರೆಗಳಲ್ಲಿ ಹನಿ ನೀರು ಇಲ್ಲದೆ ಖಾಲಿ ಹೊಡೆಯುತ್ತಿದ್ದು, ಕಣ್ವ ಏತ ನೀರಾವರಿ ಯೋಜನೆ ಇದ್ದರೂ ಈ ಬಾರಿ ಬರದ ಛಾಯೆ ತಾಲೂಕನ್ನು ಆವರಿಸುವ ಭಯ ಕಾಡುತ್ತಿದೆ.
ಕೃಷಿ ಚಟುವಟಿಕೆ ಮೇಲೂ ಪರಿಣಾಮ: ಕಣ್ವ ಏತ ನೀರಾವರಿ ಯೋಜನೆಯಿಂದಾಗಿಯೇ ತಾಲೂಕಿನಲ್ಲಿ ಸಣ್ಣಪುಟ್ಟ ಕಟ್ಟೆಗಳು ಸೇರಿದಂತೆ ಕೆರೆಗಳೆಲ್ಲಾ ಭರ್ತಿ ಯಾಗಿ, ಆಂತರ್ಜಲ ಮಟ್ಟ ಏರಿದ ಪರಿಣಾಮ ಭತ್ತಿ ಹೋಗಿದ್ದ ಕೊಳವೆ ಬಾವಿಗಳಲ್ಲಿ ಜಲ ಮರುಪೂರಣ ಗೊಂಡು ಸ್ಥಗಿತಗೊಂಡಿದ್ದ ಕೃಷಿ ಚಟುವಟಿಕೆಗಳು ಮತ್ತೆ ಪುನಾರಾರಂಭಗೊಂಡಿದ್ದವು. ವ್ಯವಸಾಯಕ್ಕೆ ನೀರಿಲ್ಲದೆ ಜಮೀನುಗಳನ್ನು ಬೀಡು ಬಿಟ್ಟು ಪಟ್ಟಣ ಸೇರಿದ್ದ ಮಂದಿಯೆಲ್ಲಾ ಮತ್ತೆ ಗ್ರಾಮ ಗಳಿಗೆ ತೆರಳಿ ಕೃಷಿಯಲ್ಲೆ ಬದುಕನ್ನು ಕಟ್ಟಿಕೊಂಡಿದ್ದರು. ಹೈನುಗಾರಿಕೆ, ತೋಟಗಾರಿಕೆ, ರೇಷ್ಮೆ ಸೇರಿದಂತೆ ಕೃಷಿ ಚಟುವಟಿಕೆಗಳ ಮೂಲಕ ಬದುಕು ಕಟ್ಟಿಕೊಂಡ ರೈತರ ಆದಾಯ ಹೆಚ್ಚುವುದರ ಜತೆಗೆ ತಾಲೂಕಿನ ಆರ್ಥಿಕ ಪಗ್ರತಿ ಸಹ ಏರುಮುಖ ಗೊಂಡಿತ್ತು. ಇದೀಗ ಮುಂಗಾರಿನ ಹೊಡೆತದ ಪರಿ ಣಾಮ ಕೆರೆಗಳು ಬರಿದಾಗಿ ಮತ್ತೆ ಅಂತರ್ಜಲ ಕುಸಿ ಯುವ ಭೀತಿ ಎದುರಾಗಿದೆ. ಆ ಮೂಲಕ ಕೃಷಿ ಚಟು ವಟಿಕೆ ಮೇಲೆ ಬರದ ಕಾರ್ಮೋಡ ಆವರಿ ಸುವಂತಾಗಿದೆ.
ಹಿಂದೆ ಅತಿವೃಷ್ಟಿ, ಈಗ ಅನಾವೃಷ್ಟಿ: ಕಳೆದ ವರ್ಷ ಈ ವೇಳೆಗಾಗಲೇ ತಾಲೂಕಿನಲ್ಲಿ ಮಳೆ ಸೃಷ್ಟಿಸಿದ ಅವಾಂತರಗಳಿಂದ ಮನೆಗಳು ಬಿದ್ದು, ರೈತರ ಬೆಳೆ ನಾಶವಾಗಿ, ಕೆರೆಗಳು ಹೊಡೆದು ಸಾಕಷ್ಟು ಅನಾನೂ ಕೂಲ ಸೃಷ್ಟಿಸಿತ್ತು. ಅವಧಿ ಪೂರ್ವ ಮುಂಗಾರಿನಿಂದ ತತ್ತರಿಸಿ ಹೋಗಿದ್ದ ಜನರು ಸಾಕಪ್ಪ ಮಳೆರಾಯ ಎನ್ನುವಷ್ಟರ ಮಟ್ಟಿಗೆ ಕಾಟ ಕೊಟ್ಟಿತ್ತು. ಈ ಬಾರಿ ಮುಂಗಾರು ಮುಗಿದು ಹಿಂಗಾರು ಸಮೀಪಿ ಸುತ್ತಿದ್ದರೂ ಉತ್ತಮ ಮಳೆಯಾಗುವ ಲಕ್ಷಣಗಳು ಗೋಚರಿಸದಾಗಿದೆ. ಕಳೆದ ಸಾರಿ ಅತಿವೃಷ್ಟಿಯಿಂದ ನೊಂದ ಜನರನ್ನು ಈ ಬಾರಿ ಅನಾವೃಷ್ಟಿಯಿಂದ ಸತಾಯಿಸುತ್ತಿದ್ದು ಇದನ್ನೇ ಪ್ರಕೃತಿ ವಿಸ್ಮಯ ಎನ್ನಲಾಗುತ್ತದೆ. ಬೇರೆ ತಾಲೂಕಿಗೆ ಹೋಲಿಸಿದರೆ ನಮ್ಮ ತಾಲೂಕಿನಲ್ಲಿ ಪರವಾಗಿಲ್ಲ ಎನ್ನುವಷ್ಟರ ಮಟ್ಟಿಗೆ ನೀರಿನ ಅಭಾವ ಇಲ್ಲವಾಗಿದೆ. ಕೈಕೊಟ್ಟ ಮುಂಗಾರು: ಆದರೆ ರಾಮನಗರ ಹಾಗೂ ಚನ್ನಪಟ್ಟಣ ಎರಡು ನಗರಗಳು ಕುಡಿಯುವ ನೀರಿಗೆ ಕಾವೇರಿಯನ್ನೇ ಆಶ್ರಯಿಸಿದ್ದು ಮುಂಗಾರು ಕೈಕೊಟ್ಟು, ಮಳೆ ಬಾರದೆ ಕೆರೆಗಳು ತುಂಬದೆ ಹೋದರೆ, ಇಲ್ಲಿನ ಪರಿಸ್ಥಿತಿ ಸಹ ಬೇರೆ ಕಡೆಗಿಂತ ಭಿನ್ನ ವಿಲ್ಲದ ರೀತಿಯಲ್ಲಿ ಬಿಗಡಾಯಿಸಲಿದೆ.ನೀರಾವರಿ ಕಾರಣದಿಂದಲೇ ಹಾಲು ಉತ್ಪಾದನೆ ಯಲ್ಲಿ ಮೊದಲ ಸ್ಥಾನ ಗಳಿಸಿರುವ ತಾಲೂಕು ಮೇವಿನ ಕೊರತೆ ಎದು ರಿಸಿ ಹೈನು ಉದ್ಯಮ ನೆಲಕಚ್ಚುವ ಭಯ ರೈತರನ್ನು ಕಾಡುತ್ತಿದೆ. ನೀರಾವರಿಯನ್ನೆ ಆಶ್ರಯಿ ಸಿರುವ ಕೃಷಿ ಚಟುವಟಿಕೆಗಳ ಮೇಲೆ ಇದು ಉಂಟು ಮಾಡಲಿರುವ ಪರಿಣಾಮ ನೆನೆದರೆ ಮೈಯೆಲ್ಲಾ ನಡಗುವುದಂತೂ ಖಚಿತ ಎಂಬ ವಿಶ್ಲೇಷಣೆ ಕೇಳಿ ಬರತೊಡಗಿದೆ.
ಬೇರೆ ತಾಲೂಕಿಗೆ ಹೋಲಿಸಿದರೆ ನಮ್ಮ ತಾಲೂಕಿನಲ್ಲಿ ಪರವಾಗಿಲ್ಲ ಎನ್ನುವಷ್ಟರ ಮಟ್ಟಿಗೆ ನೀರಿನ ಅಭಾವ ಇಲ್ಲವಾಗಿದೆ. ಆದರೆ, ರಾಮನಗರ ಹಾಗೂ ಚನ್ನಪಟ್ಟಣ ನಗರಗಳು ಕುಡಿಯುವ ನೀರಿಗೆ ಕಾವೇರಿಯನ್ನೇ ಆಶ್ರಯಿಸಿದ್ದು, ಮಳೆ ಬಾರದೆ ಕೆರೆಗಳು ತುಂಬದೆ ಹೋದರೆ, ಇಲ್ಲಿನ ಪರಿಸ್ಥಿತಿ ಸಹ ಬೇರೆ ಕಡೆಗಿಂತ ಭಿನ್ನವಿಲ್ಲದ ರೀತಿಯಲ್ಲಿ ಬಿಗಡಾಯಿಸಲಿದೆ.
● ಗರಕಹಳ್ಳಿ ಕೃಷ್ಣೇಗೌಡ, ಪ್ರಗತಿಪರ ಕೃಷಿಕ, ಚನ್ನಪಟ್ಟಣ
– ಎಂ.ಶಿವಮಾದು