Advertisement

ಚನ್ನಮ್ಮನ ಕಿತ್ತೂರು: ಟೈರ್‌ ಟ್ಯೂಬ್‌ ಮೇಲೆ ಕುಳಿತು ಕೆರೆ ದಾಟುವ ಮಕ್ಕಳು!

06:06 PM Aug 07, 2024 | Team Udayavani |

ಉದಯವಾಣಿ ಸಮಾಚಾರ 
ಚನ್ನಮ್ಮನ ಕಿತ್ತೂರು: ವಾಡಿಕೆಗಿಂತ ಹೆಚ್ಚು ಮಳೆಯಾದ ಕಾರಣ ತುಂಬಿ ಹರಿಯುತ್ತಿರುವ ಕೆರೆಯಲ್ಲಿ ವಿದ್ಯಾರ್ಥಿಗಳು ಟ್ರಾಕ್ಟರ್‌ ಟ್ಯೂಬ್‌ ಮೇಲೆ ಕುಳಿತು ದಾಟಿ ಪ್ರತಿನಿತ್ಯ ಶಾಲೆಗೆ ಹೋಗುತ್ತಿರುವ ಘಟನೆ ತಾಲೂಕಿನ ನಿಂಗಾಪೂರ ಗ್ರಾಮದಲ್ಲಿ
ವರದಿಯಾಗಿದೆ.

Advertisement

ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವ ಕಾರಣ ಧಾರವಾಡ ತಾಲೂಕಿನ ಹುಲಿಕೇರಿ ಗ್ರಾಮದ ಕೆರೆ
ಸಂಪೂರ್ಣ ಭರ್ತಿಯಾಗಿದೆ. ಸುಮಾರು 93 ಎಕರೆ ವಿಸ್ತೀರ್ಣದ ಕೆರೆ ಇದಾಗಿದ್ದು, ಇದರ ಹಿನ್ನೀರು ಚನ್ನಮ್ಮನ ಕಿತ್ತೂರು ತಾಲೂಕಿನ ಕುಲವಳ್ಳಿ ಗ್ರಾಪಂ ವ್ಯಾಪ್ತಿಯ ನಿಂಗಾಪುರ್‌ ಗ್ರಾಮದ ತುಂಬೆಲ್ಲ ಆವರಿಸಿಕೊಂಡಿದ್ದರಿಂದ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು.

ಗ್ರಾಮಸ್ಥರು ಬೇರೆಡೆ ಹೋಗಬೇಕೆಂದರೆ ಹಳ್ಳದಲ್ಲಿ ಈಜಿ ಅಥವಾ ಟೈರ್‌ ಟ್ಯೂಬ್‌ ಮೇಲೇರಿ ಕೆರೆ ದಾಟಿ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ದಿನಂಪ್ರತಿ ಮಕ್ಕಳು ಪ್ರಾಣದ ಹಂಗು ತೊರೆದು ಟೈರ್‌ ಟ್ಯೂಬ್‌ ಮೇಲೆ ಶಾಲೆಗೆ ತೆರಳುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು.

ಇದನ್ನು ತಿಳಿದ ಶಾಸಕ ಬಾಬಾಸಾಹೇಬ ಪಾಟೀಲ ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಿತ ಇಲಾಖೆ ಅಧಿಕಾರಿಗಳ ಜತೆ ಮಾತನಾಡಿ ಎಸ್‌ಡಿಆರ್‌ಎಫ್‌ ತಂಡವನ್ನು ಕರೆಸಿ ಸುಮಾರು 8 ಜನರನ್ನು ಹೊತ್ತು ಸಾಗುವ ದೋಣಿ ವ್ಯವಸ್ಥೆ ಮಾಡಿದ್ದಾರೆ. ವಾಡಿಕೆಗಿಂತ ಹೆಚ್ಚು ಮಳೆಯಾದಾಗ ಇಂತಹ ಪರಿಸ್ಥಿತಿಗಳು ಉದ್ಭವವಾಗುತ್ತವೆ.ಯಾರೂ ಕೂಡ ಆತಂಕ ಪಡಬಾರದು. ಮುಂದಿನ ದಿನಗಳಲ್ಲಿ ಯಾವುದೇ ತರಹದ ತೊಂದರೆಯಾಗದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ
ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next