ಚನ್ನಗಿರಿ: ಸೂಳೆಕೆರೆ ವಿಚಾರವಿಟ್ಟುಕೊಂಡು ಅಪಪ್ರಚಾರ ಮಾಡುವ ಮೂಲಕ ನನಗೆ ಲೋಕಸಭಾ ಚುನಾವಣೆಯಲ್ಲಿ ಹಿನ್ನೆಡೆಯುಂಟು ಮಾಡಲು ಪ್ರಯತ್ನಿಸಿದ್ದರು. ಕಾಂಗ್ರೆಸ್ ನವರು ಕೆರೆಯನ್ನು ತುಂಬಿಸುತ್ತಾರೆ ಎನ್ನುತ್ತಿದ್ದರು. ಅದರೆ ಇಂದು ಸೂಳೆಕೆರೆ ತುಂಬಿರುವುದು ನಮ್ಮ ಪರಿಶ್ರಮದಿಂದ ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ಹೇಳಿದರು.
ತಾಲೂಕಿನ ಶಾಂತಿಸಾಗರ (ಸೂಳೆಕೆರೆ)ಯಲ್ಲಿ ಭಾನುವಾರ ಬಾಗಿನ ಅರ್ಪಣೆ ಮತ್ತು ದೋಣಿ ವಿಹಾರ ಹಾಗೂ ಜಲ ಸಾಹಸ ಕ್ರೀಡಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನನ್ನ ಸ್ವಗ್ರಾಮ ಭೀಮಸಮುದ್ರದ ಕೆರೆಗೆ ಸೂಳೆಕೆರೆಯಿಂದ ನೀರು ಒಯ್ಯುತ್ತಿದ್ದಾರೆ ಎಂದು ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿದ್ದರು. ಆದರೆ, ಸತ್ಯ ಜನತೆಗೆ ಗೊತ್ತಿಲ್ಲ. ಕಳೆದ 25 ವರ್ಷಗಳಿಂದ ಭೀಮಸಮುದ್ರದ ಕೆರೆ ಖಾಲಿ ಇದೆ. ಚುನಾವಣೆಯಲ್ಲಿ ಚನ್ನಗಿರಿ ತಾಲೂಕಿನ ಜನತೆ ಲೀಡ್ ಕೊಡದಿದ್ದರೆ ಈ ಬಾರಿ ಅಪಪ್ರಚಾರದಿಂದ ನಾನು ಸೋಲು ಅನುಭವಿಸಬೇಕಾಗಿತ್ತು. ಜಗಳೂರು, ಸಿರಿಗೆರೆ, ಚಿತ್ರದುರ್ಗ ತಾಲೂಕು, ಚನ್ನಗಿರಿ ತಾಲೂಕು, ಹೊಳಲ್ಕೆರೆ ಸೇರಿದಂತೆ ಹಲವು ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಸೂಳೆಕೆರೆಯಿಂದ ಆಗುತ್ತಿತ್ತು. ಇದನ್ನು ಮನಗಂಡು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ನಾನು ಭದ್ರಾ ನಾಲೆಯ ನೀರನ್ನು ಸೂಳೆಕೆರೆಗೆ ಹರಿಸಿ ಕೆರೆಯನ್ನು ಶೇ.70 ಭಾಗದಷ್ಟು ತುಂಬಿಸಿದ್ದೇವೆ. ಜನತೆ ಅಪಪ್ರಚಾರಕ್ಕೆ ಕಿವಿಗೊಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ. ಪತ್ರಿಕೆಗಳನ್ನು ಓದುವ ಮೂಲಕ ಸತ್ಯ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆಭಾಗಕ್ಕೆ ನೀರು ಹೋಗುತ್ತಿಲ್ಲ ಎಂಬ ರೈತರ ಕೂಗು ಒಂದೆಡೆಯಾದರೆ ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಇನ್ನೊಂದೆಡೆ ನೋಡಿಕೊಳ್ಳಬೇಕು. ಇದನ್ನರಿತು ಭದ್ರಾ ನೀರನ್ನು ಕೆರೆಗೆ ಬಿಡಿಸಿದ ಪರಿಣಾಮ ಕೆರೆ ತುಂಬಿ ಕೋಡಿ ಬಿದ್ದಿದೆ ಎಂದರು.
ಮಾಯಕೊಂಡ ಶಾಸಕ ಪ್ರೊ| ಎನ್. ಲಿಂಗಣ್ಣ ಮಾತನಾಡಿ, ಯಡಿಯೂರಪ್ಪ ಸಿ.ಎಂ ಗದ್ದುಗೆ ಏರುತ್ತಿದಂತೆ ರಾಜ್ಯದಲ್ಲಿ ಸಮೃದ್ಧ ಮಳೆಯಾಗಿದೆ. ಕೆರೆ-ಕಟ್ಟೆ, ನದಿಗಳು ಉಕ್ಕಿ ಹರಿದಿವೆ. ಇದಕ್ಕೆ ಯಡಿಯೂರಪ್ಪ ಕಾಲ್ಗುಣವೇ ಕಾರಣ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಸೂಳೆಕೆರೆ ಅಭಿವೃದ್ಧಿ ಕೆಲಸಗಳು ಚುರುಕಾಗಿ ನಡೆಯಬೇಕಿದೆ. ಸೂಳೆಕೆರೆಯು ಪ್ರಕೃತಿ ಸೌಂದರ್ಯದಲ್ಲಿ ಶ್ರೀಮಂತವಾಗಿದೆ. ಇದನ್ನು ಬಳಸಿಕೊಂಡು ದೊಡ್ಡ ಮಟ್ಟದಲ್ಲಿ ಪ್ರವಾಸಿ ತಾಣವಾಗಿಸಿ ಪ್ರವಾಸಿಗರಿಗೆ ಕೊಡುಗೆಯಾಗಿ ನೀಡಬೇಕು ಎಂಬ ಹಂಬಲವಿದೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ ಎಂದರು.
ಜಿಪಂ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಲೋಕೇಶ್ವರ, ಜಿಪಂ ಸದಸ್ಯರಾದ ಫಕೀರಪ್ಪ, ಮಂಜುಳಾ ಟಿ.ವಿ. ರಾಜು, ಲೀಲಾವತಿ ಮಾಡಾಳ್ ವಿರೂಪಾಕ್ಷಪ್ಪ, ಗಾಯಿತ್ರಿ ಜಿ.ಎಂ. ಸಿದ್ದೇಶ್ವರ್, ಜಿಪಂ ಸಿಇಒ ಪದ್ಮಬಸವಂತಪ್ಪ, ಉಪ ವಿಭಾಗಾಧಿಕಾರಿ ಮಮತ ಹೊಸಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಶ್ರೀನಿವಾಸ್, ಪ್ರಕಾಶ್ ಮತ್ತಿತರರಿದ್ದರು.