Advertisement

ಕಳಪೆ ಆಹಾರ ವಿತರಣೆಗೆ ಆಕ್ರೋಶ

10:38 AM Aug 24, 2019 | Naveen |

ಚನ್ನಗಿರಿ: ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರು, ಬಾಣಂತಿಯರು ಹಾಗೂ ಹಾಗೂ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ಪದಾರ್ಥ ನೀಡಲಾಗುತ್ತಿದೆ ಎಂದು ಆರೋಪಿಸಿ ತಾಪಂ ಸದಸ್ಯ ಹಾಲೇಶ್‌ ನಾಯ್ಕ ಹುಳುಗಳಿದ್ದ ಬೆಲ್ಲ, ಗೋಧಿ, ಹೆಸರುಕಾಳು ತಾಪಂ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ಮುಂದೆ ಪ್ರದರ್ಶಿಸಿದ ಘಟನೆ ನಡೆಯಿತು.

Advertisement

ಶುಕ್ರವಾರ ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ಬಿ.ಆರ್‌. ರೂಪ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಇಲಾಖೆಗೆ ಕೋಟಿಗಟ್ಟಲೆ ಹಣ ನೀಡುವುದು ಕಚೇರಿಯಲ್ಲಿ ಕುಳಿತು ಹೋಗುವುದಕ್ಕೆ ಅಲ್ಲ, ಕಾಶಿಪುರ ಕ್ಯಾಂಪ್‌ನ ಅಂಗನವಾಡಿ ಕೇಂದ್ರದಲ್ಲಿ ಆಹಾರ ಧಾನ್ಯಗಳೆಲ್ಲ ಹುಳುಗಳಿಂದ ಕೂಡಿವೆ. ಇಂತಹ ಪದಾರ್ಥ ತಿಂದರೆ ಸಾವು ಕಟ್ಟಿಟ್ಟ ಬುತ್ತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಪಂ ಸದಸ್ಯ ಶ್ರೀಕಾಂತ್‌ ಇದಕ್ಕೆ ದನಿಗೂಡಿಸಿ, ಅಧಿಕಾರಿಗಳಿಗೆ ಹೇಳ್ಳೋರಿಲ್ಲ, ಕೇಳ್ಳೋರಿಲ್ಲ ಎನ್ನುವಂತಾಗಿದೆ. ಶಾಲಾ ಮಕ್ಕಳ ಶೂ ಕಳಪೆ ಎಂದು ಸಾಬೀತಾದರೂ ಕ್ರಮ ಕೈಗೊಂಡ ಮಾಹಿತಿ ಇಲ್ಲ. ಕಳಪೆ ಆಹಾರ ಪೂರೈಕೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಪಂ ಇಒ ಮಾತನಾಡಿ, ಏಕೆ ಅಂಗನವಾಡಿಗಳ ಪರಿಶೀಲನೆ ನಡೆಸಿಲ್ಲ ಎಂಬುದಕ್ಕೆ ಉತ್ತರ ನೀಡಬೇಕು. ಸಮೀಕ್ಷೆ ನಡೆಸಿ ಇಂತಹ ಆಹಾರ ಬಳಸುವ ಅಂಗನವಾಡಿಗಳ ವಿವರ ನೀಡಬೇಕು ಎಂದು ಅಧಿಕಾರಿಗೆ ಸೂಚಿಸಿದರು.

Advertisement

ತಾಪಂ ಸದಸ್ಯೆ ಗಾಯಿತ್ರಿ, ಹಾಲೇಶ್‌ ನಾಯ್ಕ, ಪುಷ್ಪಾವತಿ ಮಾತನಾಡಿ, ಚನ್ನಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡವರ್ಗದ ಜನರ ಸುಲಿಗೆ ನಡೆದಿದೆ. ಔಷಧಿ ಹೊರಗಡೆಯಿಂದ ತರಿಸುತ್ತಾರೆ. ಕೆಲವು ವೈದ್ಯರು ಖಾಸಗಿ ಕ್ಲಿನಿಕ್‌ ಮಾಡಿದ್ದಾರೆ ಎಂದು ಆರೋಪಿಸಿದರು.

ಡಾ| ಗಿರಿ ಉತ್ತರಿಸಿ, ಆಸ್ಪತ್ರೆಯಲ್ಲಿ ಎಲ್ಲ ಔಷಧಿಗಳಿದ್ದು, ಹೊರಗಡೆಯಿಂದ ಔಷಧಿ ತರಿಸುತ್ತಿಲ್ಲ ಎಂದು ಉತ್ತರಿಸಿದರು.

ತಾಪಂ ಸದಸ್ಯೆ ಪುಷ್ಪಾವತಿ ಮಾತನಾಡಿ, ತೋಟಗಾರಿಕೆ ಇಲಾಖೆ ನೀಡಿದ ತರಕಾರಿ ಕಿಟ್ ಕಳಪೆ ಇದ್ದು, ಬಿತ್ತನೆ ಮಾಡಿದ ರೈತನಿಗೆ ಸಂಪೂರ್ಣ ನಷ್ಟವಾಗಿದೆ ಎಂದು ಸಭೆಗೆ ತಿಳಿಸಿದರು. ಈ ಕುರಿತು ಪರೀಶಿಲನೆ ನಡೆಸುವುದಾಗಿ ತೋಟಗಾರಿಕೆ ಅಧಿಕಾರಿ ತಿಳಿಸಿದರು.

ತಾಪಂ ಸದಸ್ಯೆ ಕವಿತಾ ಮಾತನಾಡಿ, ನವೀಲೆಹಾಳ್‌ ಸರ್ಕಾರಿ ಶಾಲೆ ಕಟ್ಟಡ ಶಿಥಿಲವಾಗಿದ್ದು, ಒಂದೇ ದಿನಕ್ಕೆ 20 ಮಕ್ಕಳು ಟಿಸಿ ಪಡೆದು ಖಾಸಗಿ ಶಾಲೆಗಳಿಗೆ ಹೋಗಿದ್ದಾರೆ. ಶಿಕ್ಷಣ ಇಲಾಖೆ ತಕ್ಷಣ ಶಾಲೆಯ ಅಭಿವೃದ್ಧಿಗೆ ಕ್ರಮವಹಿಸಬೇಕು ಎಂದರು.

ತಾಪಂ ಅಧ್ಯಕ್ಷೆ ರೂಪ, ಉಪಾಧ್ಯಕ್ಷೆ ಗೀತಾ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ ರವಿ, ಇಒ ಎಂ.ಆರ್‌. ಪ್ರಕಾಶ್‌ ಇದ್ದರು.

ಬಾಲಕರ ಹಾಸ್ಟೆಲ್ ಕಾಮಗಾರಿ ಕಳಪೆ
ಪಟ್ಟಣದ ಸಂತೆ ಮೈದಾನ ಸಮೀಪದ ಕಾಲೇಜ್‌ ಬಾಲಕರ ಹಾಸ್ಟೆಲ್ ನವೀಕರಣಕ್ಕೆ 56 ಲಕ್ಷ ಹಣ ಮಂಜೂರು ಆಗಿದೆ, ಈಗಾಗಲೇ ಶೇ. 70 ಹಣವನ್ನು ಬಿಡುಗಡೆ ಮಾಡಿಕೊಂಡಿದ್ದಾರೆ. ಅದರೆ ಕೆಲಸ ಮಾತ್ರ ಕಳಪೆ ಆಗಿದೆ. ಹಾಸ್ಟೆಲ್ ನವೀಕರಣ ಕುರಿತು ತನಿಖೆ ಆಗಬೇಕು ಎಂದು ತಾಪಂ ಸದಸ್ಯರು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next