Advertisement

Channagiri; ಮೊರಾರ್ಜಿ ದೇಸಾಯಿ ಶಾಲೆಗೆ ಶಾಸಕರ ದಿಢೀರ್ ಭೇಟಿ; ಕೆಂಡಾಮಂಡಲ

07:59 PM Oct 09, 2023 | Team Udayavani |

ಚನ್ನಗಿರಿ : ಕೆರೆಬಿಳಚಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ವಿದ್ಯಾರ್ಥಿಗಳ ವಸತಿ ಗೃಹಕ್ಕೆ ಚನ್ನಗಿರಿ ಶಾಸಕ ಬಸವರಾಜು ವಿ. ಶಿವಗಂಗಾ ರವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಶಾಸಕರು ಕಾಲಿಡುತ್ತಿದ್ದಂತೆ ದೂರುಗಳ ಸುರಿಮಳೆ ಕೇಳಿ ಬಂದವು.

Advertisement

ಶಾಲೆಯ ಅವ್ಯವಸ್ಥೆ ಕಂಡು ಕೆಂಡಾ ಮಂಡಲರಾದ ಶಾಸಕರು ಪ್ರಾಂಶುಪಾಲರಿಗೆ, ವಸತಿ ನಿಲಯದ ವಾರ್ಡನ್ ರವರಿಗೆ ತೀವ್ರ ತರಾಟೆ ತೆಗೆದುಕೊಂಡರು.

ಕಬೋರ್ಡ್ ಗಳ ರಿಪೇರಿಗೆ 5 ಲಕ್ಷ ರೂ. ಅನುದಾನ ಬಳಕೆಯಾಗಿದೆ.ಶಿಕ್ಷಕರಿಗೆ ಹಾಗೂ ಅತಿಥಿ ಶಿಕ್ಷಕರಿಗೆ ಸರಿಯಾಗಿ ಯಾವುದೇ ವಿಚಾರಗಳಿಗೆ ಸ್ಪಂದಿಸುವುದಿಲ್ಲ. ಶಾಲಾ ದಾಖಲಾತಿಯಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಅವಕಾಶ ನೀಡದೆ ಬೇರೆ ಜಿಲ್ಲೆ ಮತ್ತು ತಾಲೂಕುಗಳ ವಿದ್ಯಾರ್ಥಿಗಳನ್ನು ದಾಖಲಿಸಲಾಗಿದೆ. ಅತಿಥಿ ಶಿಕ್ಷಕರ ಸಂಬಳ ಮೂರು ನಾಲ್ಕು ತಿಂಗಳಗಳಾದರೂ ಸಹ ಆಗಿರುವುದಿಲ್ಲ.30 ರಿಂದ 40 ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಶಾಸಕರ ಹಾಗೂ ಮೇಲಾಧಿಕಾರಿಗಳ ಹೆಸರುಗಳನ್ನು ಬಳಸಿ ವಿದ್ಯಾರ್ಥಿಯಿಂದ 30 ರಿಂದ 40,000 ರೂ ವಸೂಲಿ ಮಾಡಲಾಗಿದೆ. ಸೀಟುಗಳನ್ನು ಮಾರಾಟ ಮಾಡಿರುವುದರ ಬಗ್ಗೆ ಆರೋಪಗಳು ಕೇಳಿ ಬಂದವು.

ಪ್ರತಿದಿನ ಬದನೆಕಾಯಿ, ಸೋರೆಕಾಯಿ, ಹೆಸರುಕಾಳಿನದ್ದೇ ಸಾಂಬಾರು ಮಾಡುತ್ತಾರೆ, ಅದು ರುಚಿಯೂ ಇಲ್ಲ, ತೆಂಗಿನ ಕಾಯಿಯೂ ಹಾಕುವುದಿಲ್ಲ, ಮಜ್ಜಿಗೆ, ಮುದ್ದೆ, ಚಪಾತಿ, ದೋಸೆ ನೀಡುತ್ತಿಲ್ಲ, ಬರೀ ಚಿತ್ರಾನ್ನ , ವಾಂಗಿಬಾತ್‌, ಉಪ್ಪಿಟ್ಟು ಕೊಡುತ್ತಾರೆ. ಸ್ನಾನಕ್ಕೆ ಬಿಸಿನೀರಿಲ್ಲ
ಗುಣಮಟ್ಟದ ಆಹಾರ ಕೊಡುತ್ತಿಲ್ಲ. ವಾರಕ್ಕೊಮ್ಮೆ ಹದಿನೈದು ದಿನಕ್ಕೊಮ್ಮೆ ವಿಶೇಷ ಆಹಾರ ನೀಡಲಾಗುತ್ತಿದೆ. ಚಾರ್ಟ್ ಪ್ರಕಾರ ಆಹಾರ ಪೂರೈಕೆ ಮಾಡುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು. ಬೆಡ್ ಶೀಟ್ ಹಾಗೂ ತಲೆದಿಂಬು ಗುಣಮಟ್ಟದಿಂದ ಕೂಡಿಲ್ಲ ಈ ಬಗ್ಗೆ ಯಾರೂ ಕೂಡ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ವಿದ್ಯಾರ್ಥಿಗಳು ಶಾಸಕರ ಸಮ್ಮುಖದಲ್ಲಿ ಆರೋಪ ಮಾಡಿ, ಮೂಲಸೌಕರ್ಯಗಳ ಕೊರತೆ, ಊಟ, ಉಪಚಾರದ ಅವ್ಯವಸ್ಥೆ ಸರಿಪಡಿಸುವಂತೆ ಕೋರಿದರು.

ಪ್ರಾಂಶುಪಾಲರು ಸಹ ಸರಿಯಾದ ಸಮಯಕ್ಕೆ ಶಾಲೆಗೆ ಬರುವುದಿಲ್ಲ. ಯಾವುದೇ ಪೋಷಕರು ಬಂದರು ಸಹ ಸರಿಯಾಗಿ ಸ್ಪಂದಿಸುವುದಿಲ್ಲ.ಇಲ್ಲಿ ನಡೆಯುವ ಅವ್ಯವಸ್ಥೆ ಬಗ್ಗೆ ವಾರ್ಡನ್‌ಗೆ ಯಾರೇ ಪ್ರಶ್ನಿಸಿದರೆ ಪೋಷಕರಿಗೆ ಫೋನ್‌ ಮಾಡಿ ನಮ್ಮ ವಿರುದ್ಧ ಇಲ್ಲಸಲ್ಲದ ವಿಷಯ ಹೇಳಿ ಅವರಿಂದ ಬೈಯಿಸುತ್ತಾರೆ. ಅಲ್ಲದೇ ಹಾಸ್ಟೆಲ್ ನಿಂದ ಹೊರ ಹಾಕುತ್ತೇವೆ ಅಂತ ಬೆದರಿಸ್ತಾರೆ. ಯಾವುದೇ ಅಧಿಕಾರಿಗಳು ಬಂದರೂ ನಮ್ಮ ಸಮಸ್ಯೆ ಕೇಳಲ್ಲ. ನಮ್ಗೆ ಗುಣಮಟ್ಟದ ಊಟ-ತಿಂಡಿ, ಬಿಸಿನೀರು ಬರುವಂತೆ ಮಾಡಬೇಕು. ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಹೇಳಿಕೊಂಡರು.

Advertisement

ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳಿಗೆ ಶಾಸಕರು ಮೊರಾರ್ಜಿ ಶಾಲೆ ಮತ್ತು ವಸತಿ ನಿಲಯದ ಅವ್ಯವಸ್ಥೆಯನ್ನು ಮನವರಿಕೆ ಮಾಡಿಕೊಟ್ಟು ಕ್ರಮ ವಹಿಸಲು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next