ಚನ್ನಗಿರಿ: ಹತ್ತಾರು ಕಿಮೀ ದೂರದಿಂದ ಬರುತ್ತೇವೆ. ಆಸ್ಪತ್ರೆಯಲ್ಲಿ ಡಾಕ್ಟರ್ ಇರುವುದಿಲ್ಲ. ತಮ್ಮ ಖಾಸಗಿ ಕ್ಲೀನಿಕ್‌ನಲ್ಲಿ ಇರುತ್ತಾರೆ. ಗಂಟೆಗಟ್ಟಲೆ ಕಾದು ಕೂರುವ ಸ್ಥಿತಿ. ಇನ್ನು ಎಕ್ಸರೇ, ಔಷಧಿಗಳನ್ನು ಖಾಸಗಿ ಅಂಗಡಿಗೆ ಬರೆಯುತ್ತಾರೆ. ಎಂಲ್ಸಿ ಕೇಸ್‌ಗೆ 200ರೂ. ವಸೂಲಿ ಮಾಡುತ್ತಾರೆ.. ಎಂಬುದು ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಸಾರ್ವಜನಿಕರು ಲೋಕಾಯುಕ್ತ ಸರ್ಕಲ್ ಇನ್ಸಪೆಕ್ಟರ್ ಮುರುಗೇಶ್ ಎದುರು ಬಿಚ್ಚಿಟ್ಟರು.
ಬುಧವಾರ ಪಟ್ಟಣದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಗೆ ಲೋಕಾಯುಕ್ತ ಸರ್ಕಲ್ ಇನ್ಸಪೆಕ್ಟರ್ ಮುರುಗೇಶ್ ದಿಢೀರ್ ಭೇಟಿ ನೀಡಿ, ಪರೀಶಿಲನೆ ನಡೆಸಿ ಸಾರ್ವಜನಿಕರು ಮತ್ತು ರೋಗಿಗಳಿಂದ ಮಾಹಿತಿ ಪಡೆದರು. ಈ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ವೈದ್ಯರು ಖಾಸಗಿ ಕ್ಲೀನಿಕ್ ತೆರೆದಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಇರದೇ ಅಲ್ಲಿ ಕೆಲಸ ಮಾಡುತ್ತಾರೆ. ರೋಗಿಗಳು ಆಸ್ಪತ್ರೆಗೆ ಬಂದರೆ ವೈದ್ಯರಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದರೆ ಅವರ ಸಹದ್ಯೋಗಿಗಳ ರಕ್ಷಣೆ ಮಾಡುತ್ತಾರೆ ಹೊರತು ರೋಗಿಗಳ ಕಷ್ಟಕ್ಕೆ ಸ್ಪಂದಿ ಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದರು.
ಖಾಸಗಿ ಕ್ಲೀನಿಕ್ ಹೊಂದಿರುವ ಹಾಗೂ ಸಮಯಕ್ಕೆ ಬಾರದ ವೈದ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ. ದಿನಕ್ಕೆ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ವೈದ್ಯರು ಬಯೋಮೆಟ್ರಿಕ್ ಹಾಜರಾತಿ ನೀಡುವ ವ್ಯವಸ್ಥೆ ಮಾಡಿ. 2 ತಿಂಗಳ ಹಿಂದೆಯೇ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ಹೇಳಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ. ವೈದ್ಯರ ಹಾಜರಾತಿಯಲ್ಲಿ ವ್ಯತ್ಯಸ ಬಂದರೆ ದೂರನ್ನು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಆಸ್ಪತ್ರೆಯಲ್ಲಿನ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ರೋಗಿಯೋಬ್ಬರ ಕೈಲಿ ಖಾಸಗಿ ಮೇಡಿಕಲ್ ಅಂಗಡಿ ಚೀಟಿಯನ್ನು ನೋಡಿದ ಲೋಕಾಯುಕ್ತ ಸಿಪಿಐ ಮುರುಗೇಶ್, ಖಾಸಗಿಯವರ ಪ್ರಚಾರಕ್ಕೆ ಇಂಥ ಚೀಟಿ ಬಳಸುತ್ತಿದ್ದೀರ ಎಂದು ವೈದ್ಯರನ್ನು ಪ್ರಶ್ನಿಸಿದರು. ಇದನ್ನು ಬಿಟ್ಟು ಒಪಿಡಿ ಕಾರ್ಡ್ ನೀಡಿ. ಇಂತಹ ನಡವಳಿಕೆಯಿಂದ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿನ ಸೌಲಭ್ಯಗಳು ದೊರಕಬೇಕು. ವೈದ್ಯರು ಸಮಯಕ್ಕೆ ಸರಿಯಾಗಿ ಬರಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನಿಮ್ಮ ಸ್ವಂತ ಕ್ಲೀನಿಕ್‌ಗೆ ಬಂದು ಕ್ರಮ ಕೈಗೊಳ್ಳಲಾಗುವುದು. ಮುರುಗೇಶ್, ಲೋಕಾಯುಕ್ತ ಸಿಪಿಐ ದಾವಣಗೆರೆ.