ಚನ್ನಗಿರಿ: ತಿಂಗಳುಗಳೇ ಕಳೆದರೂ ಸ್ವಚ್ಛತೆ ಭಾಗ್ಯ ಕಾಣದ ಗಬ್ಬು ನಾರುವ ಚರಂಡಿಗಳು, ನಿಂತ ನೀರಿನಿಂದಾಗಿ ನೋಡಿದಲ್ಲೆಲ್ಲ ಸೊಳ್ಳೆಗಳು. ಸಂಜೆಯಾದರೆ ಸಾಕು ಸೊಳ್ಳೆಗಳ ಕಾಟಕ್ಕೆ ಮನೆಯಿಂದ ಹೊರಗಡೆ ಬರುವುದಕ್ಕೂ ಹಿಂಜರಿಯುವ ಸ್ಥಿತಿ. ಇದು ಕಗತ್ತೂರು ಗ್ರಾಮದ ದಲಿತ ಕಾಲೋನಿ ಜನರ ನಿತ್ಯ ಗೋಳಾಟ.
ಹೌದು.. ಸ್ವಚ್ಛ ಭಾರತ ನಿರ್ಮಾಣಕ್ಕಾಗಿ ದೇಶದಲ್ಲಿಯೇ ದೊಡ್ಡಮಟ್ಟದ ಅಭಿಯಾನ ನಡೆಯುತ್ತಿದೆ. ಅದರೆ ತಾಲೂಕಿನ ಕಗತ್ತೂರು ಗ್ರಾಪಂ ವ್ಯಾಪ್ತಿಯಲ್ಲಿ ಮಾತ್ರ ಸ್ವತ್ಛತೆ ಎನ್ನುವುದು ಕಡತದಲ್ಲಿ ಮಾತ್ರ ಎನ್ನುವಂತಾಗಿದೆ. ಗ್ರಾಮದಲ್ಲಿ ದಲಿತರ ಕಾಲೋನಿ ಹೊರತುಪಡಿಸಿ ಬೇರೆ ಕಾಲೋನಿಗಳ ರಸ್ತೆಗಳು, ಚರಂಡಿ ಸ್ವಚ್ಛವಾಗಿವೆ. ದಲಿತ ಕಾಲೋನಿಗಳತ್ತ ಮಾತ್ರ ಅಧಿಕಾರಿಗಳು ತಲೆ ಹಾಕದೇ ಇರುವುದಕ್ಕೆ ಕಾಲೋನಿ ಜನ ಹಿಡಿ ಶಾಪ ಹಾಕುತ್ತಿದ್ದಾರೆ.
ಗಬ್ಬು ನಾರುವ ಚರಂಡಿಗಳು; ಕಳಪೆ ಗುಣಮಟ್ಟದ ಚರಂಡಿಗಳಲ್ಲಿ ನೀರು ಹರಿಯುವುದೇ ಇಲ್ಲ. ಕಸ ಕಟ್ಟಿಕೊಂಡು ರಸ್ತೆಮೇಲೆಲ್ಲ ನೀರು ಹರಿಯುತ್ತದೆ. ಇದರಿಂದ ಶಾಲೆಗೆ ಹೋಗುವ ಮಕ್ಕಳೂ ಕೊಳಚೆ ನೀರನ್ನು ತುಳಿದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಜೆಯಾದರೆ ಸಾಕು ಸೊಳ್ಳೆಗಳ ಕಾಟ ಶುರುವಾಗುತ್ತದೆ.
ಸಾಂಕ್ರಾಮಿಕ ರೋಗಗಳ ಭೀತಿ: ಸ್ವಚ್ಛತೆಯಿಲ್ಲದೆ ನಿಂತ ನೀರಿನಿಂದ ಡೆಂಘೀ, ಚಿಕೂನ್ ಗುನ್ಯಾ, ಕಾಲರಾ, ಮಲೇರಿಯಾ ಸೇರಿದಂತೆ ಅನೇಕ ರೋಗ ಹರಡುವ ಭೀತಿ ಶುರುವಾಗಿದೆ. ಈಗಾಗಲೇ ಸಣ್ಣಪುಟ್ಟ ಜ್ವರಗಳಿಂದ ಬಳಲುತ್ತಿರುವವರು ತಾಲೂಕು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೂಡ ಪಡೆದುಕೊಂಡಿದ್ದಾರೆ. ಬೀದಿ ನಲ್ಲಿಯಲ್ಲಿ ಬೀಡುವ ನೀರು ಹಿಡಿಯಲು ಕೂಡ ಚರಂಡಿಯಲ್ಲಿಯೇ ಕೊಡಪಾನಗಳನ್ನು ಇಟ್ಟು ತುಂಬಿಕೊಳ್ಳುವ ಪರಿಸ್ಥಿತಿ ಇದೆ. ಇಂತಹ ಶೋಚನೀಯ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವವರ ಸಮಸ್ಯೆಯನ್ನು ಹೇಳ್ಳೋರಿಲ್ಲ-ಕೇಳ್ಳೋರಿಲ್ಲ ಎನ್ನುವಂತಾಗಿದೆ.
ಪ್ರತಿ ವಾರಕ್ಕೊಮ್ಮೆಯಾದರೂ ಚರಂಡಿಗಳನ್ನು ಸ್ವಚ್ಛಗೊಳಿಸಿ ಬ್ಲೀಚಿಂಗ್ ಪೌಡರ್ ಹಾಕಬೇಕು ಎಂಬ ನಿಯಮವಿದೆ. ಆದರೆ ಇಲ್ಲಿಯವರೆಗೂ ಗ್ರಾಮದಲ್ಲಿ ಬ್ಲೀಚಿಂಗ್ ಪೌಡರ್‌ನ್ನು ಚರಂಡಿಗಳು ಕಂಡೇ ಇಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಗಮನಹರಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.