Advertisement

ಅಜ್ಜಂಪುರ ಅಮೃತ್‌ ಮಹಲ್‌ ಜಾಗೆ ತೆರವು

11:35 AM Jan 05, 2020 | Naveen |

ಚನ್ನಗಿರಿ: ಸಂತೇಬೆನ್ನೂರು ಹೋಬಳಿ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಸುಮಾರು 70ವರ್ಷಗಳಿಂದ ರೈತರು ಉಳುಮೆ ಮಾಡಿಕೊಂಡು ಬಂದಿದ್ದ ಜಮೀನು ತೆರವಿಗೆ ಅಧಿಕಾರಿಗಳು ಮುಂದಾದರೆ ಮತ್ತೂಂದು ಕಡೆ ರೈತರು ಜೀವ ಬಿಟ್ಟೇವು, ಜಮೀನು ಬಿಡುವುದಿಲ್ಲ ಎಂದು ಪಟ್ಟು ಹಿಡಿದ ಘಟನೆ ನಡೆಯಿತು.

Advertisement

ಸಂತೇಬೆನ್ನೂರು ವ್ಯಾಪ್ತಿಯ ಶಿವಕುಳೇನೂರು ಸರ್ವೇ ನಂ 77, ಕಾಕನೂರು ಸರ್ವೇ ನಂ 72, ದೊಡ್ಡೇರಿಕಟ್ಟೆ ಸರ್ವೇ ನಂ 11, ಸಂತೇಬೆನ್ನೂರು ಸರ್ವೇ ನಂ 181 ರ ಒಟ್ಟು 523 ಎಕರೆ 13 ಗುಂಟೆ ಜಮೀನನ್ನು ರೈತರು ಸಾಗುವಳಿ ಮಾಡಿದ್ದಾರೆ. ಈ ಜಮೀನು ಸರ್ಕಾರಿ ಸ್ವಾಮ್ಯದ ಅಜ್ಜಂಪುರ ಅಮೃತ್‌ ಮಹಲ್‌ ಸಂವರ್ಧನ ಸಂಸ್ಥೆಗೆ ಸೇರಿದ ಜಮೀನು ಎಂದು ಲೋಕಾಯುಕ್ತ ನ್ಯಾಯಾಲಯ ಆದೇಶ ನೀಡಿದೆ. ಅದರಂತೆಯೇ ಜಮೀನನ್ನು ಬಿಟ್ಟುಕೊಡಬೇಕು ಎಂದು ರೈತರಿಗೆ ಮನವಿ ಮಾಡಿದ್ದಾರೆ. ಸ್ಥಳದಲ್ಲಿದ್ದ ರೈತರು ಈ ಜಮೀನು ನಂಬಿಕೊಂಡೇ ಜೀವನ ನಡೆಸುತ್ತಿದ್ದು, ಒಂದು ವೇಳೆ ಜಮೀನು ಕೈಬಿಟ್ಟರೆ ವಿಷ ಕುಡಿಯುವ ಸ್ಥಿತಿ ನಮ್ಮದಾಗಲಿದೆ.

ದಯವಿಟ್ಟು ಜಮೀನು ಉಳಿಸಿಕೊಡಿ ಎಂದು ರೈತರು ಅಧಿಕಾರಿಗಳಿಗೆ ಮನವಿ ಮಾಡಿದರೂ ಏನೂ ಪ್ರಯೋಜನ ಆಗದೆ ಅಧಿ ಕಾರಿಗಳು ಜಮೀನನ್ನು ತೆರವುಗೊಳಿಸಿ ಸೂಕ್ತ ಭದ್ರತೆಯನ್ನು ಒದಗಿಸಿದ್ದಾರೆ.

ತೆರವಿಗೆ ಯಾವುದೇ ನೋಟಿಸ್‌ ನೀಡಿಲ್ಲ:ಜಮೀನು ತೆರವುಗೊಳಿಸುವುದಾಗಿ ಅಧಿಕಾರಿಗಳು ಗ್ರಾಮದ ಯಾವೊಬ್ಬ ರೈತರಿಗೂ ನೋಟಿಸ್‌ ನೀಡಿಲ್ಲ. ಏಕಾಏಕಿ ತಾಲೂಕು ಆಡಳಿತ ಪೊಲೀಸ್‌ ಬಂದೋಬಸ್ತ್ನೊಂದಿಗೆ ಜೆಸಿಬಿ ಯಂತ್ರಗಳನ್ನು ತಂದು ನಮ್ಮ ಜಮೀನು ವಶಕ್ಕೆ ಪಡೆದಿದೆ ಎಂದು ಗ್ರಾಮದ ರೈತ ಶಿವಣ್ಣ ತಮ್ಮ ಅಳಲನ್ನು ಮಾಧ್ಯಮಕ್ಕೆ ತಿಳಿಸಿದರು.

ಶಿವಕುಳೇನೂರು ಗ್ರಾಮದಲ್ಲಿ 150 ಕುಟುಂಬಗಳ ಸುಮಾರು 1500 ಜನರಿದ್ದು, ಉಳುಮೆ ಮಾಡುತ್ತಿರುವ ಜಮೀನಿಗೆ ಪಹಣಿ ಮತ್ತು ಮ್ಯೂಟೇಶನ್‌ ನೀಡಿದೆ. ಗ್ರಾಮಸ್ಥರು ಪ್ರತಿಭಟನೆ ಮಾಡಲು ಮುಂದಾದಾಗ ನಾವು ನ್ಯಾಯ್ಯಾಲಯದ ಆದೇಶವನ್ನು ಪಾಲಿಸಬೇಕಿದೆ ಎಂದು ಎಸಿ ಜನರ ಮನವೊಲಿಸುವಲ್ಲಿ ಸಫಲರಾದರು.

Advertisement

ಸ್ಥಳದಲ್ಲಿ ಡಿವೈಎಸ್‌ಪಿ ಪ್ರಶಾಂತ್‌ ಮನೋಳ್ಳಿ, ತಹಾಶೀಲ್ದಾರ್‌ ನಾಗರಾಜ್‌, ಅಮೃತ್‌ ಮಹಲ್‌ ಸಂವರ್ಧನೆ ಸಂಸ್ಥೆಯ ಉಪ ನಿರ್ದೇಶಕ ಡಾ|ರಮೇಶ್‌ ಕುಮಾರ್‌, ಪಶುಪಾಲನಾ ಉಪ ನಿರ್ದೇಶಕ ಭಾಸ್ಕರ್‌ ನಾಯ್ಕ, ಸಹಾಯಕ ನಿರ್ದೇಶಕ ದೇವೇಂದ್ರಪ್ಪ, ಪಿಎಸ್‌ಐ ಶಾಂತಲಾ ಇದ್ದರು.

ಕೋರ್ಟ್‌ ಆದೇಶದಂತೆ ತಾಲೂಕು ಆಡಳಿತ ಶಿವಕೂಳೆನೂರು ಗ್ರಾಮದಲ್ಲಿ ಸರ್ವೇ ನಡೆಸಿ 523 ಎಕರೆ ಜಮೀನನ್ನು ವಶಕ್ಕೆ ಪಡೆದಿದ್ದೇವೆ ಎಂದು ಎಸಿ ಮಮತ ಗೌಡರ್‌ ತಿಳಿಸಿದರು.

ಕಳೆದ 70 ವರ್ಷಗಳಿಂದಲೂ ಜಮೀನು ಉಳುಮೆ ಮಾಡಿಕೊಂಡು
ಬಂದಿದ್ದೇವೆ. ನಮ್ಮ ಹೆಸರಿಗೆ ಪಾಣಿ ಮತ್ತು ಮ್ಯೂಟೇಶನ್‌ ಇವೆ. ಆದರೂ ನಮಗೆ ಭದ್ರತೆ ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ, ನಾವೆಲ್ಲರೂ ನಿರ್ಗತಿಕರಾಗಿದ್ದೇವೆ.
ಕುಬೇರಪ್ಪ,
ರೈತ, ಶಿವಕುಳೇನೂರು

ಈ ಮುಂಚೆಯೇ ಈ ವಿಷಯವನ್ನು ಗ್ರಾಮಸ್ಥರ ಗಮನಕ್ಕೆ ತರಲಾಗಿತ್ತು, ಈಗ ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿ ನಾವು ಕ್ರಮ ಕೈಗೊಂಡಿದ್ದೇವೆ.
ನಾಗರಾಜ್‌,
ತಹಶೀಲ್ದಾರ್‌, ಚನ್ನಗಿರಿ

Advertisement

Udayavani is now on Telegram. Click here to join our channel and stay updated with the latest news.

Next