Advertisement

ಸಿಮ್‌ ಬದಲಿಸಿ ಮತ್ತೆ ಸರ್ವೇ ಮಾಡಿ!

03:53 PM Aug 30, 2020 | Suhan S |

ಶಿರಸಿ: ದೇಶದಲ್ಲೇ ಪ್ರಥಮ ಬಾರಿಗೆ ಮಾದರಿಯಾಗಿ ರೈತರ ಪಹಣಿ ರೈತರಿಂದಲೇ ದಾಖಲೆ ಕುರಿತು ಅನುಷ್ಠಾನಕ್ಕೆ ತರಲಾದ ಬೆಳೆ ಸರ್ವೇ ಆ್ಯಪ್‌ನಲ್ಲಿ ಬೆಳೆ ನಮೂದು ತಪ್ಪಾಗಿದ್ದರೆ, ಇನ್ನಷ್ಟು ಮಾಹಿತಿ ಸೇರಿಸಬೇಕಿದ್ದರೆ, ಮೊಬೈಲ್‌ ನಂಬರ್‌ ತಪ್ಪು ನಮೂದಾಗಿದ್ದರೆ ಏನು ಮಾಡಬೇಕು ಎಂಬುದು ಹಲವು ರೈತರ ಪ್ರಶ್ನೆ. ಸರ್ವೇ ನಂಬರ್‌ ಲಾಕ್‌ ಆಗದೇ ಇರುವ ಕಾರಣ ಇನ್ನೊಮ್ಮೆ ಇದೇ ಆ್ಯಪ್‌ನಲ್ಲಿ ಸರ್ವೇ ಮಾಡಬಹುದು!

Advertisement

ಆದರೆ, ಇನ್ನೊಮ್ಮೆ ಸರ್ವೇಗೆ ಒಂದು ಊರಿನ ಒಂದೇ ಸರ್ವೇ ನಂಬರಿನ ಇನ್ನೊಂದು ಸರ್ವೇಗೆ ಈಗಾಗಲೇ ಬಳಸಿದ ನಂಬರ್‌ ಬರುವುದಿಲ್ಲ. ಬದಲಿಗೆ ಈಗ ಬಳಸಿದ ಸಿಮ್‌ ಬಿಟ್ಟು ಬೇರೆ ಬೇರೆ ನಂಬರ್‌ ಬಳಸಿ ಎಷ್ಟು ಸಲ ಬೇಕಿದ್ದರೂ ದಾಖಲಿಸಲು ಅವಕಾಶ ಇದೆ!. ಆ್ಯಪ್‌ನ ಈ ಅವಕಾಶದಿಂದ ನಿಜಕ್ಕೂ ಫಜೀತಿಗೆ ಬೀಳುವವರು ಗ್ರಾಮಗಳಿಗೆ ಸಂಬಂಧಿಸಿ ಇರುವ ಸರಕಾರಿ ಮೇಲ್ವಿಚಾರದ್ದು. ಈಗಾಗಲೇ ಒಂದೇ ಸರ್ವೆ ನಂಬರ್‌ಗೆ 2-3 ಸಲ ಅಪ್‌ಲೋಡ್‌ ಮಾಡಿದವರೂ ಇದ್ದಾರೆ!

ಕೋಡ್‌ ತಲೆಬಿಸಿ!: ಈಗಾಗಲೇ ಬೆಳೆ ಸರ್ವೇ ಆ್ಯಪ್‌ ಬಳಸುತ್ತಿರುವ ರೈತರಿಗೆ ಗ್ರಾಮ ಮಟ್ಟದಲ್ಲಿ ಓರ್ವ ಸಹಾಯಕರೂ ಇದ್ದಾರೆ. ಎಷ್ಟೋ ರೈತರು ಬೆಳೆ ಸರ್ವೇಯನ್ನು ಜಿಪಿಎಸ್‌ ಗೆ ಹುಡುಕಾಡಿ ಇಡೀ ತೋಟ ಸುತ್ತಾಟ ಮಾಡಿ ಮಾಡಿಕೊಂಡಿದ್ದೂ ಆಗಿದೆ. 24 ಅಡಕೆ ಬದಲಿಗೆ ಇನ್ನಾವುದೋ ತುಂಬಿ ಬಾನಗಡಿ ಮಾಡಿಕೊಂಡವರೂ ಇದ್ದಾರೆ. ಕರಿ ಮೆಣಸಿನ ಬದಲಿಗೆ ಹಸಿ ಮೆಣಸು ಬಿದ್ದಿದ್ದೂ ಆಗಿದೆ.

ಮಲೆನಾಡಿನಲ್ಲಿ ಈಚೆಗೆ ಬಹು ಬೆಳೆಯನ್ನು ಮಿಶ್ರ ಬೆಳೆಯಾಗಿ ಬೆಳೆಯುವವರೂ ಇದ್ದಾರೆ. ಅಡಕೆ ಜೊತೆ ಕಾಳು ಮೆಣಸು, ಬಾಳೆ, ಕೊಕ್ಕೋ, ಏಲಕ್ಕಿ ಬೆಳೆಯುವವರೂ ಇದ್ದಾರೆ. ಈ ಮಿಶ್ರ ಬೆಳೆ ದಾಖಲಿಸುವ ಜೊತೆಗೆ ತೋಟದ ಅಂಚಿನ ಬದುಗಳಲ್ಲಿನ ತೆಂಗು, ಚಿಕ್ಕು, ಲವಂಗ, ಜಾಯಿಕಾಯಿ ಬೆಳೆಗಳ ಉಲ್ಲೇಖಕ್ಕೂ ಅವಕಾಶ ಇದೆ. ಆದರೆ, ಎಲ್ಲ ದಾಖಲಿಸುವ ಮೊದಲೇ ಇಂಟರ್‌ನೆಟ್‌ ಆನ್‌ ಇದ್ದರೆ ಅಪ್‌ ಲೋಡ್‌ ಆಗುವ ಸಾಧ್ಯತೆ ಇಂತಹ ಗೊಂದಲಗಳಿಗೆ ಕಾರಣವಾಗಿದೆ. ದಾಖಲಿಸುವಾಗ ಇಲ್ಲಿ ಕೋಡ್‌ ವ್ಯತ್ಯಾಸ ಆಗಿ ತಲೆಬಿಸಿ ಮಾಡಿಕೊಂಡ ರೈತರೂ ಇದ್ದಾರೆ. ಇನ್ನೊಂದು ಸಿಮ್‌ ಬಳಸಿ ಕೆಲಸ ಮಾಡಿಕೊಳ್ಳಬಹುದು. ಅಲ್ಲೂ ಹಾಗೇ ಆದರೆ, ಮತ್ತೆ ಇದೇ ತಂತ್ರ ಬಳಸಬೇಕು.

ಯಾವುದು ಸರಿ ಎಂಬುದೇ ಪೀಕಲಾಟ!: ಒಮ್ಮೆ ಅಪ್‌ಲೋಡ್‌ ಆದರೆ ಮೂರ್‍ನಾಲ್ಕು ಗ್ರಾಮಗಳಿಗೆ ಸೇರಿಸಿ ನೇಮಕ ಮಾಡಲಾದ ಅಧಿಕಾರಿಗಳೇ ಇದನ್ನು ರಿಜೆಕ್ಟ್ ಮಾಡಬೇಕು. ಕಂದಾಯ, ಕೃಷಿ, ತೋಟಗಾರಿಕೆ, ಸಾಂಖೀಕ, ರೇಷ್ಮೆ ಇಲಾಖೆ ಅಧಿಕಾರಿಗಳು ಬಹುತೇಕ ಜವಾಬ್ದಾರಿ ಹೊತ್ತಿದ್ದಾರೆ. ಮೂರ್‍ನಾಲ್ಕು ಗ್ರಾಮಗಳಿಗೆ ಒಬ್ಬ ಮೇಲ್ವಿಚಾರಕ. ಗ್ರಾಮ ಲೆಕ್ಕಿಗರು, ಹೋಬಳಿ ಮಟ್ಟದ ಅಧಿಕಾರಿಗಳು, ತಾಲೂಕು ಅಧಿಕಾರಿಗಳು ಈ ಜವಾಬ್ದಾರಿ ಹೊತ್ತಿದ್ದಾರೆ.

Advertisement

ಹೆಚ್ಚಿದ ಜವಾಬ್ದಾರಿ: ರೈತರು ಆ್ಯಪ್‌ನಲ್ಲಿ ಸರ್ವೇ ಮಾಡಿದ ಬೆಳೆಯ ಕೋಡ್‌ ಸರಿಯಾಗಿ ನೋಡಿ ಮಾಡದೇ ಹೋದರೆ ಇನ್ನಾವುದೋ ಬೆಳೆ ದಾಖಲಾಗುತ್ತದೆ. ಇದನ್ನೂ ಮೇಲ್ವಿಚಾರಕರು ನೋಡಿಕೊಳ್ಳಬೇಕು. ಅಡಕೆ ತೋಟದಲ್ಲಿ ಕ್ಷೇತ್ರ ಕಡಿಮೆ ದಾಖಲಿಸಿ, ಕಾಳು ಮೆಣಸೋ, ಕೊಕ್ಕೋವೇ ಮುಖ್ಯಬೆಳೆ ಎಂಬಂತೆ ದಾಖಲಿಸಿದವರೂ ಇದ್ದಾರೆ! ಇವರ ದಾಖಲಾತಿಯನ್ನೂ ನೋಡಿಕೊಳ್ಳಬೇಕು. ಒಂದೇ ಸರ್ವೇ ನಂಬರ್‌ನಲ್ಲಿ ಬೇರೆ ಬೇರೆ ಸಂಗತಿಗಳು ದಾಖಲಾದಾಗ ಯಾವುದನ್ನು ರಿಜೆಕ್ಟ್ ಮಾಡಬೇಕು ಎಂಬುದು ಅಧಿಕಾರಿಗಳ ತಲೆಬಿಸಿ. ಪ್ರತಿಯೊಬ್ಬರಿಗೂ ದೂರವಾಣಿ ಮೂಲಕ ತಿಳಿಸಿ ಅನುಮೋದಿಸಬೇಕು ಎಂಬ ಸುತ್ತೋಲೆ ಕೂಡ ಇದೆ. ಆದರೆ, ಇವರು ಫೋನ್‌ ಮಾಡಿದಾಗ ರೈತರು ಸಿಗುವುದಿಲ್ಲ!. ರೈತರಿಗೆ ಮಳೆಗಾಲದಲ್ಲಿ ನಿಶ್ಯಬ್ಧವಾಗುವ ದೂರವಾಣಿಗಳ ತೆಲೆಬಿಸಿ! ಒಬ್ಬೊಬ್ಬ ಮೇಲ್ವಿಚಾರಕರಿಗೆ ಕನಿಷ್ಠ 1500 ಸರ್ವೇ ನಂಬರ್‌ಗಳ ಪರಿಶೀಲನಾ ಜವಾಬ್ದಾರಿ ಬರಲಿದೆ. ಸರ್ವೇ ನಂಬರ್‌ ಗಳ ಸಂಖ್ಯೆ ಹೆಚ್ಚಳ ಇರುವುದರಿಂದಲೂ ಗೊಂದಲ ಉಂಟಾಗಿದೆ.

ಈ ಹಂತದಲ್ಲಿ ಗೊಂದಲ ಆಗದಂತೆ ನೋಡಿಕೊಳ್ಳಬೇಕಾದ್ದು ಮೇಲ್ವಿಚಾರಕರ ಜವಾಬ್ದಾರಿ. ಮೇಲ್ವಿಚಾರಕರು ಅನುಮೋದನೆ ನೀಡಿದರೆ ಅದು ಬೆಳೆ ದರ್ಶಕಕ್ಕೂ, ನಂತರ ಭೂಮಿ ಕೇಂದ್ರಕ್ಕೂ ಲಿಂಕ್‌ ಆಗುತ್ತದೆ. ಆ ಬಳಿಕವೇ ಪಹಣಿಯಲ್ಲಿ ದಾಖಲಾಗುತ್ತದೆ. ಈ ಕಾರಣದಿಂದ ಮೇಲ್ವಿಚಾರಕರ ಕಣ್ತಪ್ಪಿದರೆ ಮತ್ತೆ ಪಹಣಿಯಲ್ಲಿ ಗೊಂದಲ ಆಗುವ ಸಾಧ್ಯತೆ ಇದೆ.

ಒಳ್ಳೇ ಆ್ಯಪ್‌. ಮುಖ್ಯ ಬೆಳೆ, ಉಪ ಬೆಳೆ ಎರಡನ್ನೂ ಗಂಭೀರವಾಗಿ ವಿಭಾಗಿಸಬೇಕಿತ್ತು. ರೈತರ ಹಂತದಲ್ಲೇ ರಿಜೆಕ್ಟ್ ಮಾಡುವ ಅಥವಾ ಅದರೊಳಗೆ ಕರೆಕ್ಷನ್‌ ಹಾಕುವ ಅವಕಾಶ ಇರಬೇಕಿತ್ತು. – ದೀಪಕ್‌ ಹೆಗಡೆ, ರೈತ

ಒಬ್ಬರೇ ಬೇರೆ ಬೇರೆ ನಂಬರ್‌ ಬಳಸಿ 3-4 ಸಲ ಅಪ್‌ಲೋಡ್‌ ಮಾಡಿದವರೂ ಇದ್ದಾರೆ. ಅದರಲ್ಲಿ ಯಾವುದು ಸರಿ ಎಂಬುದು ಅವರಿಗೂ ಗೊತ್ತಾಗದಂತೆ ಆಗಿದ್ದೂ ಆಗಿದೆ! ನೀವೇ ನೋಡಿ ಮಾಡಿ ಅಂದವರೂ ಇದ್ದಾರೆ! –ಹೆಸರು ಹೇಳಲಿಚ್ಚಿಸದ ಮೇಲ್ವಿಚಾರಕ

 

-ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next