ರಾಯಚೂರು: ಕೇವಲ ಸಂಘ-ಸಂಸ್ಥೆಗಳು ಮಾತ್ರ ಸಮಾಜಸೇವೆ ಮಾಡಲಿ ಎನ್ನುವ ಭಾವನೆ ತೊರೆದು ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ನಿರ್ವಹಿಸಿದಲ್ಲಿ ಬದಲಾವಣೆ ಸಾಧ್ಯ ಎಂದು ಜಿಲ್ಲಾ ಸತ್ರ ನ್ಯಾಯಾಧೀಶರಾದ ಮಹದೇವಪ್ಪ ಗಂಗಪ್ಪ ಕೂಡವಕ್ಕಲಗೇರ್ ಹೇಳಿದರು.
ನಗರದ ರೇಸ್ ಚಾಣಕ್ಯ ಶಾಲೆಯಲ್ಲಿ ಗ್ರೀನ್ ರಾಯಚೂರು ಸಂಸ್ಥೆಗೆ ಶಿಲ್ಪಾ ಮೆಡಿಕೇರ್ ರಾಯಚೂರು, ಶಿಲ್ಪಾ ಫೌಂಡೇಶನ್‌ನಿಂದ ದೇಣಿಗೆ ನೀಡಿದ ಟ್ರ್ಯಾಕ್ಟರ್ ಮತ್ತು ನೀರಿನ ಟ್ಯಾಂಕರ್ ಹಸ್ತಾಂತರಿಸಿ ಅವರು ಮಾತನಾಡಿದರು.
ಸಂಘ-ಸಂಸ್ಥೆಗಳ ಕಾರ್ಯ ಚಟುವಟಿಕೆಗಳು ಯಶಸ್ವಿಯಾಗಬೇಕಾದರೆ ಅದರಲ್ಲಿ ಜನರ ಪಾಲ್ಗೊಳ್ಳುವಿಕೆ ಬಹಳ ಮಹತ್ವದ್ದು. ಬದಲಾವಣೆ ನಿರಂತರ ಚಟುವಟಿಕೆಯಾಗಿದೆ. ಗ್ರೀನ್ ರಾಯಚೂರು ಸಂಸ್ಥೆಯು ರಾಯಚೂರನ್ನು ಹಸಿರು ನಗರವಾಗಿಸಲು ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದಕ್ಕೆ ಜನರ ಸಹಕಾರ ಬಹಳ ಮುಖ್ಯ ಎಂದರು.
ಶಿಲ್ಪಾ ಮೆಡಿಕೇರ್ ವ್ಯವಸ್ಥಾಪಕ ನಿರ್ದೇಶಕ ವಿಷ್ಣುಕಾಂತ ಭುತಡಾ ಮಾತನಾಡಿ, ಜನರ ಮನಸ್ಥಿತಿ ಬದಲಾವಣೆಯಾದರೆ ಏನಾದರೂ ಮಾಡಬಹುದು. ಗ್ರೀನ್ ರಾಯಚೂರು ಸಂಸ್ಥೆ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ನಮ್ಮ ಸಂಸ್ಥೆ ಸಹಕರಿಸಲಿದೆ ಎಂದರು.
ಗ್ರೀನ್ ರಾಯಚೂರು ಸಂಸ್ಥೆ ಗೌರವಾಧ್ಯಕ್ಷ ಕೊಂಡಾ ಕೃಷ್ಣಾಮೂರ್ತಿ ಮಾತನಾಡಿ, ನಾಲ್ಕು ಜನರಿಂದ ಶುರುವಾದ ಈ ಸಂಸ್ಥೆ ಇಂದು ಸಾಕಷ್ಟು ಜನರ ಬೆಂಬಲದೊಂದಿಗೆ ಮುನ್ನಡೆಯುತ್ತಿದೆ ಎಂದರು.
ಶಿಲ್ಪಾ ಮೆಡಿಕೇರ್‌ನ ಎಂಡಿ ವಿಷ್ಣುಕಾಂತ ಸಿ ಭುತಡಾ, ನಗರಸಭೆ ಅಧ್ಯಕ್ಷೆ ಲಲಿತಾ ಕಡಕೋಲು, ರಾಯಚೂರು ವಿವಿ ನಾಮನಿರ್ದೇಶಿತ ಸದಸ್ಯ ರಾಜಾ ಶ್ರೀನಿವಾಸ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ರಮೇಶ್ ಮಹಾಜನ್, ನಗರಸಭೆ ಸದಸ್ಯ ನಾಗರಾಜ್ ಕಾನಾಪೂರ, ಶಶಿರಾಜ್ ಇರಗೇರ್, ಡಾ| ಸಿ.ವಿ .ಪಾಟೀಲ್, ರಮೇಶ್ ಜೈನ್, ಗಜಾನನ ಸಾನ್ವಿ, ರಾಮಾಂಜನೇಯ, ವೆಂಕಟೇಶ್, ಸಂಧ್ಯಾ ನಾಯಕ, ಗ್ರೀನ್ ರಾಯಚೂರು ಅಧ್ಯಕ್ಷೆ ಸರಸ್ವತಿ ಕಿಲಕಿಲೆ, ರಾಜೇಂದ್ರ ಕುಮಾರ್ ಶಿವಾಳೆ ಇದ್ದರು.