ಬೆಳಗಾವಿ: ಶಾಸಕ ರಮೇಶ ಜಾರಕಿಹೊಳಿ ಏಕಾಂಗಿಯೇ ಅಥವಾ ಅವರೊಂದಿಗೆ ಕೆಲವು ಶಾಸಕರು ಇರುವರೇ ಎಂಬ ಬಗ್ಗೆ ಮೇ 23ರ ನಂತರ ಗೊತ್ತಾಗಲಿದೆ ಎಂದಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ, ಲೋಕಸಭಾ ಚುನಾವಣೆ ನಂತರ ರಾಜಕೀಯ ಬದಲಾವಣೆ ಇದೆ ಎನ್ನುವ ಸುಳಿವು ನೀಡಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಫಲಿತಾಂಶದ ನಂತರ ರಾಜ್ಯದ ರಾಜಕೀಯದಲ್ಲಿ ಬದಲಾವಣೆ ನಿಶ್ಚಿತ. ಅಲ್ಲಿಯವರೆಗೆ ಎಲ್ಲರೂ ಸುಮ್ಮನಿರುವುದು ಒಳ್ಳೆಯದು. ಬಿಜೆಪಿ ಈಗ 104 ಶಾಸಕರನ್ನು ಹೊಂದಿದೆ.
ಇಬ್ಬರು ಪಕ್ಷೇತರ ಶಾಸಕರು ಬೆಂಬಲ ನೀಡಿದ್ದಾರೆ. ಕುಂದಗೋಳ ಹಾಗೂ ಚಿಂಚೋಳಿ ಉಪಚುನಾವಣೆ ಗೆದ್ದರೆ ಇನ್ನೂ ಹೆಚ್ಚು ಅನುಕೂಲವಾಗಲಿದೆ. ಈ ಎರಡೂ ಕ್ಷೇತ್ರಗಳಲ್ಲಿ ನಮ್ಮ ಜಯ ಖಚಿತ. ಆಗ ರಾಜ್ಯ ರಾಜಕಾರಣದಲ್ಲಿ ತಾನಾಗೇ ಬದಲಾವಣೆ ಆಗಲಿದೆ ಎಂದರು.
ಆದರೆ, ರಮೇಶ ಜಾರಕಿಹೊಳಿಯವರ ರಾಜೀನಾಮೆ ಬಗ್ಗೆ ಗೊತ್ತಿಲ್ಲ. ಕೇವಲ ಮಾಧ್ಯಮಗಳಲ್ಲಿ ನೋಡಿದ್ದೇನೆ. ಅವರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದೂ ಸಹ ಖಚಿತವಾಗಿ ಗೊತ್ತಿಲ್ಲ ಎನ್ನುವ ಮೂಲಕ ತಮ್ಮ ಸಹೋದರನ ರಾಜಕೀಯ ನಡೆಯ ಗುಟ್ಟು ಬಿಟ್ಟುಕೊಡಲಿಲ್ಲ.
ಸಮ್ಮಿಶ್ರ ಸರಕಾರ ಉಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜತೆ ತಾವು ಯಾವುದೇ ಮಾತುಕತೆ ನಡೆಸಿಲ್ಲ. ಅವರಿಂದ ತಮಗೆ ಯಾವುದೇ ಆಫರ್ ಬಂದಿಲ್ಲ. ಈ ಕುರಿತ ವರದಿಗಳು ಸಂಪೂರ್ಣ ನಿರಾಧಾರ ಎಂದರು.