ಇಡೀ ದಿನ ರೋಡ್ ಶೋ ನಡೆಸಿದರೆ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಬಹುದು. ಇದರಿಂದ ದೈನಂದಿನ ವ್ಯವಹಾರದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದೆಂಬ ಕಾರಣಕ್ಕೆ ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರಿಗೆ ಕರೆ ಮಾಡಿ ರೋಡ್ ಶೋ ವೇಳಾಪಟ್ಟಿ ಬದಲಾವಣೆಗೆ ಸೂಚಿಸಿದ್ದಾರೆ.
Advertisement
ರೋಡ್ ಶೋ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದ ಕೇಂದ್ರ ಸಚಿವೆ, ರಾಜ್ಯ ಚುನಾವಣ ನಿರ್ವಹಣ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ, ರಾಜಧಾನಿಯ ಎಲ್ಲರನ್ನೂ ನೋಡಬೇಕು, 17 ಕ್ಷೇತ್ರಗಳಿಗೆ ಭೇಟಿ ನೀಡಬೇಕೆಂಬ ಆಶಯದೊಂದಿಗೆ ಪ್ರಧಾನಿಯವರು ಬೆಂಗಳೂರಿಗೆ ಬರುತ್ತಿದ್ದಾರೆ. ಒಂದೇ ದಿನ ರೋಡ್ ಶೋ ನಡೆಸಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಎರಡು ದಿನ ರೋಡ್ ಶೋ ನಡೆಸಲಾಗುತ್ತಿದೆ. ಸಾರ್ವಜನಿಕರ ಭಾವನೆಗಳಿಗೆ ಗೌರವ ಕೊಟ್ಟು ಪ್ರಧಾನಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ಮೇ 5ರಂದು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಪ್ರಧಾನಿಯ ವರು ಬಳ್ಳಾರಿಯಲ್ಲಿ, ಸಂಜೆ 4.30ಕ್ಕೆ ತುಮಕೂರು ಗ್ರಾಮಾಂತರದಲ್ಲಿ ಬೃಹತ್ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮೇ 6ರಂದು ಬೆಂಗಳೂರಿನಲ್ಲಿ ರೋಡ್ ಶೋ ಮುಗಿಸಿದ ನಂತರ ಸಂಜೆ 4 ಗಂಟೆಗೆ ಬಾದಾಮಿಯಲ್ಲಿ, ಸಂಜೆ 7 ಗಂಟೆಗೆ ಹಾವೇರಿಯಲ್ಲಿ ಚುನಾವಣ ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ.
ಮೇ 7ರಂದು ರವಿವಾರ ಬೆಂಗಳೂರಿನಲ್ಲಿ ರೋಡ್ ಶೋ ಮುಗಿಸಿದ ಅನಂತರ ಸಂಜೆ 4 ಗಂಟೆಗೆ ಶಿವಮೊಗ್ಗ, ಸಂಜೆ 7 ಗಂಟೆಗೆ ನಂಜನಗೂಡಿನಲ್ಲಿ ಸಾರ್ವಜನಿಕ ಸಭೆಗಳನ್ನುದ್ದೇಶಿ ಭಾಷಣ ಮಾಡಲಿದ್ದಾರೆ. ನಂಜನಗೂಡಿನಲ್ಲಿ ಸಾರ್ವಜನಿಕ ಸಭೆ ಅನಂತರ ಪ್ರಧಾನಿ ಮೋದಿ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ ಎಂದು ವಿವರಿಸಿದರು.