ಬೆಂಗಳೂರು: ಇತ್ತೀಚೆಗೆ ಜಗಜೀವನ್ ರಾಂ ನಗರದಲ್ಲಿ ನಡೆದ ಚಂದ್ರು ಕೊಲೆ ಪ್ರಕರಣದ ತನಿಖೆಯನ್ನು ಸರಕಾರ ಸಿಐಡಿಗೆ ವರ್ಗಾಯಿಸಿದೆ.
ಈ ಸಂಬಂಧದ ಆದೇಶದ ಬೆನ್ನಲ್ಲೇ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿ ಸುಮಾರು ಎರಡು ಗಂಟೆಗಳ ಕಾಲ ಚರ್ಚಿಸಿದ್ದಾರೆ.
ಈ ವೇಳೆ ಬೆಂಗಳೂರು ಸೇರಿ ರಾಜ್ಯದಲ್ಲಿ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಿ. ಯಾವುದೇ ಅಶಾಂತಿ ಅಥವಾ ಕೋಮು ಸಂಘರ್ಷಕ್ಕೆ ಅವಕಾಶ ಕೊಡಬೇಡಿ ಎಂದು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಸಿಐಡಿ ಹಿರಿಯ ಅಧಿಕಾರಿಗಳು ಸಭೆ ನಡೆಸಿ ಸೂಕ್ತ ತನಿಖಾಧಿಕಾರಿಯನ್ನು ನೇಮಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಮತ್ತೊಂದೆಡೆ ಪ್ರಕರಣ ಸಂಪೂರ್ಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಆರೋಪ-ಪ್ರತ್ಯಾರೋಪಗಳು ನಡೆಯುತ್ತಿವೆ. ಈ ಮಧ್ಯೆ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಎಎಪಿ ಮುಖಂಡ ಭಾಸ್ಕರ್ ರಾವ್ ಬಿಜೆಪಿ ನಾಯಕರ ಹೇಳಿಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಆಯುಕ್ತರ ಹೇಳಿಕೆಯೇ ಸುಳ್ಳು ಎಂದು ಹೇಳುತ್ತಿರುವುದು ವಿಷಾದನಿಯ. ಪೊಲೀಸ್ ಇಲಾಖೆಯನ್ನು ಅವಮಾನಿಸುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಪ್ರಾಥಮಿಕ ತನಿಖೆ ಹಂತದಲ್ಲಿ ಚಂದ್ರು ಹಾಗೂ ಶಾಹಿದ್ ಬೈಕ್‌ಗಳ ನಡುವೆ ಪರಸ್ಪರ ಗುದ್ದಿಕೊಂಡ ಪರಿಣಾಮ ಗಲಾಟೆ ಪ್ರಾರಂಭವಾಗಿದೆ. ಜಗಳ ತಾರಕಕ್ಕೇರಿ ಕೊಲೆಯಾಗಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.