ಸೊರಬ: ಮಾಜಿ ಶಾಸಕ ಎಸ್. ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೊಂಡ ಬೆನ್ನಲ್ಲೇ ತಾವು ಕಾಂಗ್ರೆಸ್ ತ್ಯಜಿಸುತ್ತಿರುವುದಾಗಿ ಕಾಂಗ್ರೆಸ್ ಮುಖಂಡ ಚಂದ್ರೇಗೌಡ ಬಾಸೂರು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರೆದಿದ್ದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸುಮಾರು 40 ವರ್ಷಗಳಿಂದ ಬಂಗಾರಪ್ಪ ಅವರ ಕುಟುಂಬ ರಾಜಕಾರಣವನ್ನು ವಿರೋಧಿ ಸುತ್ತಲೇ ಬಂದಿದ್ದೇವೆ. ಬಂಗಾರಪ್ಪ ಅವರಿಗೆ ಕ್ಷೇತ್ರದ ಜನತೆ ಎಲ್ಲ ರೀತಿಯ ಅ ಧಿಕಾರವನ್ನು ನೀಡಿದರೂ 224 ಕ್ಷೇತ್ರಗಳಲ್ಲಿ ಅತೀ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯಿಂದ ಇಂದಿಗೂ ಹೊರಬಂದಿಲ್ಲ ಎಂದು ಆರೋಪಿಸಿದರು.
ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಸಾಧ್ಯವಾಗಿಲ್ಲ. ಪರಿಣಾಮ ಜನ ಉದ್ಯೋಗವನ್ನು ಅರಸಿ ಗುಳೆ ಹೋಗುವುದು ಇಂದಿಗೂ ನಡೆಯುತ್ತಿದೆ. ಜನರ ಆರ್ಥಿಕ ಸ್ವಾವಲಂಬನೆಗೆ ಯಾವುದೇ ಯೋಜನೆಗಳು ರೂಪಿತವಾಗಿಲ್ಲ ಎಂದ ಅವರು, ಪ್ರಮುಖ ನೀರಾವರಿ ಯೋಜನೆ ದಂಡಾವತಿ ನೆನೆಗುದಿಗೆ ಬಿದ್ದು ಸುಮಾರು ದಶಕಗಳೇ ಕಳೆದಿದೆ. ಜನ ಸಂಕಷ್ಟದ ಸುಳಿಗೆ ಸಿಲುಕಿದ್ದ ವೇಳೆ ಹಾಲಿ ಹಾಗೂ ಮಾಜಿ ಶಾಸಕರು ಜನತೆಗೆ ಸ್ಪಂದಿಸುವ ಕಾರ್ಯವನ್ನು ಮಾಡಲಿಲ್ಲ. ಇದೀಗ ಮಾಜಿ ಶಾಸಕರು ಅ ಧಿಕಾರಕ್ಕಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದರು. ಈ ಹಿಂದೆ ತಾಲೂಕಿನಲ್ಲಿ ಸಮಾನ
ಮನಸ್ಕರರು ಸೇರಿ ಎನ್‌ಡಿಎ ಎಂಬ ಸಂಘಟನೆಯ ಮೂಲಕ ಜಿಲ್ಲಾ ಪಂಚಾಯ್ತಿ ಚುನಾವಣೆಯನ್ನು ಎದುರಿಸಿ, ನಾಲ್ಕು ಕ್ಷೇತ್ರಗಳಲ್ಲಿ ಜಯಶಾಲಿಯಾಗಿದ್ದೆವು. ನಾವು ಮೂಲತಃ, ಜೆಡಿಎಸ್‌ನವರಾಗಿದ್ದು, ಪುನಃಜೆಡಿಎಸ್ ಸೇರ್ಪಡೆಯಾಗುವ ಇಚ್ಛೆಯಿದೆ. ಜೆಡಿಎಸ್ ವರಿಷ್ಠರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗುವ ಉದ್ದೇಶ ಸಹ ಹೊಂದಲಾಗಿದೆ.
ನಂತರದಲ್ಲಿ ಅ ಧಿಕೃತವಾಗಿ ಜೆಡಿಎಸ್ ಸೇರ್ಪಡೆ ಅಥವಾ ನೂತನ ಸಂಘಟನೆ ಸ್ಥಾಪಿಸುವ ಕುರಿತು ತಿಳಿಸಲಾಗುವುದು ಎಂದು ಮಾಹಿತಿ ನೀಡಿದರು. ರೈತ ಮುಖಂಡ ಚಿಮಣೂರು ಹುಚ್ಚಪ್ಪ, ಕಾಂಗ್ರೆಸ್ ತಾಲೂಕು ಉಪಾಧ್ಯಕ್ಷ ಎಲ್.ಜಿ. ಗುಡ್ಡಪ್ಪ ಮಾತನಾಡಿದರು. ಕಾಂಗ್ರೆಸ್ ಎಸ್ಸಿ ಘಟಕದ ತಾಲ್ಲೂಕು ಅಧ್ಯಕ್ಷ ವಿಷ್ಣುಮೂರ್ತಿ ಬಿಳವಾಣಿ, ಮುಖಂಡರಾದ ಇ.ಎಚ್. ಮಂಜುನಾಥ್, ಬಸವರಾಜ ಕಾತುಳ್ಳಿ, ದ್ಯಾವಪ್ಪ ಹಾಲಗಳಲೆ, ಭಾರತಿ ಶೆಣೈ, ಶಿವಾಜಪ್ಪ ಅರೆತಲಗಡ್ಡೆ, ಪರಮೇಶ್ವರಪ್ಪ, ನಾಗರಾಜ ಶಕುನವಳ್ಳಿ, ಪ್ರಶಾಂತ ತತ್ತೂರು, ಸಂಪತ್ ಕುಮಾರ್ ಬಾಸೂರು, ಮುನೀರ್ ಆಹ್ಮದ್ ಇತರರಿದ್ದರು.