ಇಡೀ ವಿಶ್ವವೇ ಎದುರು ನೋಡುತ್ತಿದ್ದ ಚಂದ್ರಯಾನ-2 ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಬಿಸಿಲೂರಿನ ಬಾಲೆಯೂ ಹೋಗಿದ್ದಳು. ಆಕೆಗೆ ಐತಿಹಾಸಿಕ ಪ್ರಸಂಗಕ್ಕೆ ಸಾಕ್ಷಿಯಾಗುವ ಮಹೋನ್ನತ ಕ್ಷಣದ ಜೊತೆಗೆ ಪ್ರಧಾನಿ ಅವರೊಂದಿಗೆ ಕಾಲ ಕಳೆಯುವ ಅವಕಾಶವೂ ಏಕಕಾಲಕ್ಕೆ ಕೂಡಿ ಬಂದಿತ್ತು. ಅಂಥ ಅವಿಸ್ಮರಣೀಯ ಕ್ಷಣಗಳನ್ನು ಅನುಭವಿಸಿ ಬಂದ ಸಿಂಧನೂರಿನ ಡಾಫಡಿಲ್ಸ್ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ವೈಷ್ಣವಿ ತನ್ನ ಅನುಭವ ಇಲ್ಲಿ ಹೇಳಿಕೊಂಡಿದ್ದಾಳೆ.
“ಪ್ರಧಾನಿ ಮೋದಿ ಅವರ ಜೊತೆಗೆ ಚಂದ್ರಯಾನ-2 ವೀಕ್ಷಿಸಲು ನೀವು ಆಯ್ಕೆಯಾಗಿದ್ದೀರಿ’ ಎಂದು ಮೇಲ್ ಬಂದಿತ್ತು. ಮೊದಲಿಗೆ ಅದನ್ನು ನಾನು ನಂಬಲೇ ಇಲ್ಲ. ಅದೆಲ್ಲ ಸುಳ್ಳು. ಯಾರಿಗೂ ಹೇಳಬೇಡ ಅಂತ ನನ್ನ ತಂದೆಗೂ ಹೇಳಿದ್ದೆ. ಆದರೆ, ಪ್ರಾಚಾರ್ಯರು ನನ್ನ ಆಯ್ಕೆ ಖಚಿತಪಡಿಸಿದಾಗ ಒಂದು ಕ್ಷಣ ನಂಬಲಾಗಲಿಲ್ಲ. ಅಲ್ಲದೇ, ಆವತ್ತು ರಾತ್ರಿ ಸರಿಯಾಗಿ ನಿದ್ರೆ ಕೂಡ ಬರಲಿಲ್ಲ. ಬಾಹ್ಯಾಕಾಶದ ಚಿತ್ರಣವೇ ನನ್ನನ್ನು ಆವರಿಸಿಬಿಟ್ಟಿತ್ತು. ಯಾವಾಗ ಅಲ್ಲಿಗೆ ಹೋಗುತ್ತೇನೋ ಎಂದು ಕ್ಷಣ ಕ್ಷಣಕ್ಕೂ ತವಕಿಸುತ್ತಿದ್ದೆ – ಮೊನ್ನೆ ಚಂದ್ರಯಾನ 2ನಲ್ಲಿ ಭಾಗವಹಿಸಿದ್ದ, ರಾಯಚೂರು ಜಿಲ್ಲೆಯ ಸಿಂಧನೂರಿನ ಡಾಫಡಿಲ್ಸ್ ಕಾನ್ವೆಂಟ್ ವಿದ್ಯಾರ್ಥಿನಿ ವೈಷ್ಣವಿ ಹೀಗೆ ಹೇಳುತ್ತಾ ಹೋಗುತ್ತಾಳೆ.
ಈಕೆಯ ಕಣ್ಣಲ್ಲಿ ಯಾನದ ಇನ್ನೊಂದು ಚಿತ್ರಣ ಅಚ್ಚಾಗಿದೆ. ಅದೇನೆಂದರೆ, ಈ ತನಕ ಭೌತವಿಜ್ಞಾನಿಯಾಗಬೇಕು ಅಂದುಕೊಂಡಿದ್ದವಳು. ಆದರೆ, ಈಗ ಚಂದ್ರಯಾನ ನೋಡಿದ ಮೇಲೆ ಇಸ್ರೋ ವಿಜ್ಞಾನಿಯೇ ಆಗಬೇಕು ಅನ್ನೋ ಕನಸು ಈಕೆಗೆ ಶುರುವಾಗಿದೆ. ಈಕೆಯ ಕನಸಿಗೆ ನೀರೆರೆಯಲು ಶಾಲೆಯ ವಿಜ್ಞಾನ ಶಿಕ್ಷಕ ಚರಣ್, ಪ್ರಾಚಾರ್ಯೆ ಲೀಲಾರಾಣಿ ಮುಂದಾಗಿದ್ದಾರೆ.
ವೈಷ್ಣವಿಗೆ ಚಂದ್ರಯಾನದ ಬಗ್ಗೆ ತಿಳಿ ಹೇಳಿದ್ದು ಇವರೇ. ಚಂದ್ರಯಾನ ಕಾರ್ಯಕ್ರಮಕ್ಕೆ ತೆರಳಲು, ಪ್ರತಿ ರಾಜ್ಯದಿಂದ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿತ್ತು, ಅದಕ್ಕಾಗಿ ಆನ್‌ಲೈನ್ ಪರೀಕ್ಷೆ ಎದುರಿಸಬೇಕು ಎಂಬ ವಿಚಾರವನ್ನು ಶಾಲೆಯ ಆಡಳಿತ ಮಂಡಳಿ ನೋಟಿಸ್ ಬೋರ್ಡ್‌ನಲ್ಲಿ ಹಾಕಿತ್ತು. ಇದನ್ನು ಗಮನಿಸಿದ ವೈಷ್ಣವಿ ಕೂಡ ಪರೀಕ್ಷೆ ಬರೆಯಲು ಮುಂದಾದರು. ಆದರೆ, ಅದಕ್ಕೆ ಪ್ರತ್ಯೇಕ ಇಮೇಲ್ ಐಡಿ ಬೇಕು ಎಂದಾಗ ತಂದೆ ಜಿ.ನಾಗರಾಜ್ ಮೇಲ್ ಐಡಿ ರಚಿಸಿ ಕೊಟ್ಟರು. ಪರೀಕ್ಷೆಯಲ್ಲಿ 20 ಪ್ರಶ್ನೆಗಳಿಗೆ 10 ನಿಮಿಷಗಳಲ್ಲಿ ಉತ್ತರಿಸಬೇಕಿತ್ತು. ಈ ಶಾಲೆಯಿಂದಲೂ 150 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 5 ನಿಮಿಷ ಬಾಕಿ ಇರುವಂತೆಯೇ 20 ಪ್ರಶ್ನೆಗಳಿಗೆ ಉತ್ತರಿಸಿ ಕೈಕಟ್ಟಿ ಕುಳಿತ ಏಕೈಕ ವಿದ್ಯಾರ್ಥಿನಿ ವೈಷ್ಣವಿ. ಇಡೀ ರಾಜ್ಯದಲ್ಲೇ ಕಡಿಮೆ ಅವಧಿಯಲ್ಲಿ ಉತ್ತರಿಸಿದ್ದು ನಾನೇ ಅನ್ನೋ ಹೆಮ್ಮೆ ವೈಷ್ಣವಿಗೆ ಇದೆ. ಆವತ್ತು ಏನಾಯ್ತು? ಅಂದಾಗ ವೈಷ್ಣವಿ ಹೇಳಿದ್ದು ಹೀಗೆ-
ಇಸ್ರೋದ ಬೆಂಗಳೂರಿನ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಕಚೇರಿಯಲ್ಲಿ ಒಳಗೆ ಹೋಗುತ್ತಿದ್ದಂತೆ ತಪಾಸಣೆ ಮಾಡಿದರು. ರಾಯಚೂರಿನ ವಿದ್ಯಾರ್ಥಿ ಅಂತ ತಿಳಿದಾಗ ಎಲ್ಲರೂ ನನ್ನ ಬಗ್ಗೆ ವಿಶೇಷ ಕಾಳಜಿ ತೋರಿದರು. ನನ್ನೊಂದಿಗೆ ಸೆಲ್ಫಿ ಇಳಿದಾಗ ನನಗೆ ಅಪಾರ ಖುಷಿಯಾಯಿತು. ಇಸ್ರೋ ಆವರಣದ ವಿಶೇಷ ಅತಿಥಿ ಗೃಹದಲ್ಲಿ ವಿದ್ಯಾರ್ಥಿಗಳ ಜತೆ ಪಾಲಕರಿಗೂ ವಸತಿ ವ್ಯವಸ್ಥೆ ಮಾಡಲಾಗಿತ್ತು. ಬ್ಯಾಹ್ಯಾಕಾಶ ವೀಕ್ಷಣಾಲಯಕ್ಕೆ ವಿದ್ಯಾರ್ಥಿಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಸಂಜೆ ನಮ್ಮನ್ನು ಅಲ್ಲಿಗೆ ಕರೆದೊಯ್ದರು. ನನಗಂತೂ ಒಂದೆಡೆ ದೇಶದ ಪ್ರಧಾನಿ ನೋಡಬೇಕು ಎನ್ನುವ ತವಕ, ಮತ್ತೂಂದೆಡೆ ವಿಕ್ರಂ ಲ್ಯಾಂಡಿಂಗ್ ಅನ್ನು ಕಾಣುವ ಕುತೂಹಲ. ಎರಡೂ ನನ್ನನ್ನು ತಲ್ಲಣಗೊಳಿಸಿತ್ತು. ಅಲ್ಲಿ ನೆರೆದಿದ್ದ ಪ್ರತಿಯೊಬ್ಬರಲ್ಲೂ ಅಂಥದ್ದೇ ಭಾವ ಕಾಣಿಸುತ್ತಿತ್ತು. ಇಸ್ರೋ ಮುಖ್ಯಸ್ಥ ಕೆ.ಶಿವನ್ ಕ್ಷಣ ಕ್ಷಣದ ಮಾಹಿತಿಯನ್ನು ವಿವರಿಸುತ್ತಿದ್ದರು. ಆದರೆ, ಕೊನೆ ಕ್ಷಣದಲ್ಲಿ ಸಿಗ್ನಲ್ ತಪ್ಪಿದಾಗ ಒಂದು ರೀತಿ ಮೌನ, ಚಡಪಡಿಕೆ. ಆಗ ತುಂಬಾ ನಿರಾಸೆಯಾಯಿತು. ಊಟದ ವ್ಯವಸ್ಥೆ ಮಾಡಿದ್ದರೂ, ಯಾರೊಬ್ಬರು ಕೂಡ ಊಟ ಮಾಡಲಿಲ್ಲ. ಎಲ್ಲರಲ್ಲೂ ಬೇಸರದ ಛಾಯೆ ಮೂಡಿತ್ತು’ ವೈಷ್ಣವಿ ಮತ್ತೂಮ್ಮೆ ಆ ದಿನವನ್ನು ಕಣ್ಣ ಮುಂದೆ ತಂದು ಕೊಂಡು ಹೇಳಿದಳು.
ಪ್ರಶ್ನೆ ಕೇಳುವ ಅದೃಷ್ಟ
ವಿದ್ಯಾರ್ಥಿಗಳ ಜೊತೆ ಪ್ರಧಾನಿ ಮೋದಿ ಅವರು ಕೆಲ ಕಾಲ ಕಳೆಯುವ ಮೂಲಕ ಕೆಲವೊಂದು ಟಿಪ್ಸ್‌ಗಳನ್ನು ನೀಡಿದರು. ಅವರಿಗೆ ಬೇರೆ ಬೇರೆ ಭಾಗದಿಂದ ಬಂದ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿದರಂತೆ. ವೈಷ್ಣವಿಗೂ ಪ್ರಶ್ನೆ ಕೇಳುವ ಅದೃಷ್ಟ ಸಿಕ್ಕಿತು. “ನಾನು ರಾಷ್ಟ್ರಪತಿ ಆಗಬೇಕು ಎಂಬ ಆಸೆ ಇಟ್ಟುಕೊಂಡಿದ್ದೇನೆ ಎಂದು ಹೇಳಿದಾಗ, ಪ್ರಧಾನಿ ಮೋದಿಯವರು, “ವೈ ನಾಟ್ ಪ್ರೈಮ್ ಮಿನಿಸ್ಟರ್’ ಅಂದರಂತೆ.
“ನಾನು ಮತ್ತು ಮಿಜೊರಾಂ ವಿದ್ಯಾರ್ಥಿನಿ ಒಟ್ಟಿ ಸೇರಿ- “ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದರೆ ಏನು ಮಾಡಬೇಕು’ ಅಂತ ಕೇಳಿದೆವು. ಅದಕ್ಕೆ ಮೋದಿಯವರು, “ನೀವು ಜೀವನದಲ್ಲಿ ಏನಾಗಬೇಕು ಎಂದುಕೊಂಡಿದ್ದೀರಿ ಎಂಬುದನ್ನು ಮೊದಲು ನಿರ್ಧರಿಸಿ. ಆ ದಿಸೆಯಲ್ಲಿ ನಿರಂತರ ಪ್ರಯತ್ನಿಸಿ. ಸೋತರೂ ಪ್ರಯತ್ನ ನಿಲ್ಲಿಸದಿರಿ. ನಿಮಗೆ ಸಾಧಿಸುವುದೊಂದೇ ಗುರಿಯಾಗಬೇಕು. ಸೋಲು, ವೈಫಲ್ಯಕ್ಕೆ ಎಂದಿಗೂ ಜಗ್ಗದಿರಿ’ ಎಂದು ಹೇಳಿದಾಗ ಅವರ ಬಗ್ಗೆ ನಿಜಕ್ಕೂ ಹೆಮ್ಮೆ ಎನಿಸಿತು-ಹೀಗೆ, ವೈಷ್ಣವಿ ಬೆರಗುಗಣ್ಣಿಂದ ಹೇಳಿದಳು.
ಮಗಳು ಆಯ್ಕೆಯಾಗಿದ್ದಾಳೆ ಎಂದು ಇಸ್ರೋದಿಂದ ಇ.ಮೇಲ್ ಬಂದಾಗ ನಮಗೆ ನಂಬಲಿಕ್ಕೆ ಆಗಲಿಲ್ಲ. ನಕಲಿ ಖಾತೆಯಿಂದ ಈ ಮೇಲ್ ಬಂದಿರಬೇಕು ಅಂತ ಸುಮ್ಮನಾಗಿದ್ದೆವು. ಬಳಿಕ ಶಾಲಾ ಆಡಳಿತ ಮಂಡಳಿಯವರು ಕರೆ ಮಾಡಿ ವಿಚಾರ ತಿಳಿಸಿದರು. ಕೇಳಿ ತುಂಬಾ ಖುಷಿಯಾಯಿತು. ಈಗ ಮಗಳು ಬಾಹ್ಯಾಕಾಶ ವಿಜ್ಞಾನಿ ಆಗಬೇಕು ಎಂದು ಆಸೆ ಪಟ್ಟಿದ್ದಾಳೆ. ಅವಳ ಆಸೆ ಈಡೇರಿಸಲು ಶಕ್ತಿ ಮೀರಿ ಪ್ರಯತ್ನಿಸುವೆ.
– ಜಿ.ನಾಗರಾಜ್, ವಿದ್ಯಾರ್ಥಿನಿ ತಂದೆ
ಸಿದ್ಧಯ್ಯಸ್ವಾಮಿ ಕುಕುನೂರು