Advertisement

ಚಂದ್ರಯಾನ-2 ಮಾಸಾಂತ್ಯದಲ್ಲಿ ಉಡಾವಣೆ?

02:07 AM Jul 16, 2019 | Sriram |

ಶ್ರೀಹರಿಕೋಟ: ಮಹತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆಯ ಅನುಷ್ಠಾನ ಇಸ್ರೋ ವಿಜ್ಞಾನಿಗಳ ಸಮಯಪ್ರಜ್ಞೆಯಿಂದಾಗಿ ಮುಂದೂಡಲ್ಪಟ್ಟಿದೆ.

Advertisement

ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡ್ಡಯನ ಕೇಂದ್ರದಿಂದ ಚಂದ್ರಯಾನ-2 ಪರಿಕರಗಳನ್ನು ಹೊತ್ತಿದ್ದ ಜಿಎಸ್‌ಎಲ್ವಿ ಎಂಕೆ-3 ರಾಕೆಟ್ ಜು.14ರ ತಡರಾತ್ರಿ 2.51ಕ್ಕೆ ಸರಿಯಾಗಿ ಉಡಾವಣೆಗೊಳ್ಳಬೇಕಿತ್ತು. ಆದರೆ ರಾಕೆಟ್‌ನ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ‘ಮುನ್ನೆಚ್ಚರಿಕೆ ಕ್ರಮವಾಗಿ’ ಉಡಾವಣ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಯಿತು.

ವಿಜ್ಞಾನಿಗಳ ಚಾತುರ್ಯ
ಉಡಾವಣ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷವನ್ನು ಉಡಾವಣೆಗೆ ಕೇವಲ 56 ನಿಮಿಷ, 24 ಸೆಕೆಂಡ್‌ಗಳಿದ್ದಾಗ ಇಸ್ರೋದ ತಂತ್ರಜ್ಞರು ಪತ್ತೆಹಚ್ಚಿದ್ದಾರೆ. ಆ ನಿಟ್ಟಿನಲ್ಲಿ ಯೋಚಿಸುವುದಾದರೆ ಇದು ಇಸ್ರೋ ಪಾಲಿನ ಅದೃಷ್ಟ ಮಾತ್ರವಲ್ಲ, ಭಾರತೀಯ ವಿಜ್ಞಾನಿಗಳ ಸಮಯಪ್ರಜ್ಞೆ, ಚಾತುರ್ಯಕ್ಕೆ ಮತ್ತೂಂದು ಸಾಕ್ಷಿ.

ಮುಂದಿನ ಉಡಾವಣೆ ಯಾವಾಗ?
ಮುಂದೂಡಲ್ಪಟ್ಟಿರುವ ಉಡಾವಣೆಯನ್ನು ಇದೇ ತಿಂಗಳ ಕೊನೆಯ ವಾರದಲ್ಲಿ ನೆರವೇರಿಸುವ ಬಗ್ಗೆ ಹೇಳ ಲಾಗುತ್ತಿದೆ.

ಮುಂದಿನ ಪ್ರಕ್ರಿಯೆಯೇನು?
ಉಡಾವಣ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷದ ಮೂಲವನ್ನು ಮೊದಲು ಪತ್ತೆ ಮಾಡಬೇಕಿದೆ. ‘ಜಿಎಸ್‌ಎಲ್ವಿ ಎಂಕೆ-3’ನಲ್ಲಿ ದ್ರವರೂಪದ ಆಮ್ಲಜನಕ, ದ್ರವರೂಪದ ಜಲಜನಕಗಳನ್ನು ಇಂಧನಗಳನ್ನಾಗಿ ಬಳಸಲಾಗಿದೆ. ಇವೆರಡನ್ನೂ ಹೊರತೆಗೆದು ಅನಂತರ ತಪಾಸಣೆ ನಡೆಸಬೇಕು. ಲಿಕ್ವಿಡ್‌ ಆಕ್ಸಿಜನ್‌ ಅನ್ನು ಸುಲಭವಾಗಿ ರಾಕೆಟ್ನಿಂದ ತೆಗೆಯಬಹುದು. ಆದರೆ ಲಿಕ್ವಿಡ್‌ ಹೈಡ್ರೋಜನ್‌ನ ತೆರವು ಅಷ್ಟು ಸುಲಭವಲ್ಲ. ಅದು ಇರುವ ಇಂಧನ ಟ್ಯಾಂಕ್‌ ಅನ್ನು ಶೀತಲವಾಗಿಯೇ (ಅಂದಾಜು -252.8 ಡಿ.ಸೆ.) ಕಾಪಾಡಬೇಕು. ರಾಕೆಟ್ನಿಂದ ಅದನ್ನು ಹೊರ ತೆಗೆಯುವಾಗ ಅದು ಕೊಂಚ ನಷ್ಟ ವಾಗುವ ಭೀತಿಯೂ ಇರುತ್ತದೆ.

Advertisement

ದೋಷ ಪತ್ತೆಯಾಗದೆ ಇದ್ದಿದ್ದರೆ?
ಒಂದು ವೇಳೆ ತಾಂತ್ರಿಕ ದೋಷ ಪತ್ತೆಯಾಗದೆ ಇದ್ದಿದ್ದರೆ, ಅಂದಾಜು ಸಾವಿರ ಕೋಟಿ ರೂ.ಗಳ ಈ ಯೋಜನೆ ವಿಫ‌ಲವಾಗುವ ಅಪಾಯವಿತ್ತು. ಉಡಾವಣಪೂರ್ವದಲ್ಲಿ ಹೀಗೆ ತಪ್ಪುಗಳನ್ನು ಪತ್ತೆ ಹಚ್ಚದಿದ್ದರ ಪರಿಣಾಮ ರಾಕೆಟ್‌ಗಳು ಉಡಾವಣ ಹಂತದಲ್ಲೇ ಸ್ಫೋಟಗೊಂಡು ಅಪಾರ ಸಾವು-ನೋವು-ನಷ್ಟಗಳಿಗೆ ಕಾರಣವಾಗಿರುವ ಅನೇಕ ಉದಾಹರಣೆಗಳಿವೆ. ಅವನ್ನು ಗಮನಿಸಿದರೆ ದೋಷವನ್ನು ಮೊದಲೇ ಪತ್ತೆಹಚ್ಚಿದ್ದು ಇಸ್ರೋದ ಸುಕೃತ.

Advertisement

Udayavani is now on Telegram. Click here to join our channel and stay updated with the latest news.

Next