ಹುಬ್ಬಳ್ಳಿ: ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆಗೆ ಆರೋಪಿತರು ಬೇನಾಮಿ ಆಸ್ತಿ ಮಾರಾಟ ಮಾಡಿದ್ದೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಗುರೂಜಿ ಸಿಜಿ ಪರಿವಾರದ ಓರ್ವ ನೌಕರನ ಹೆಸರಲ್ಲಿ 5.11 ಎಕರೆ ಜಮೀನನ್ನು ಮಾಡಿದ್ದರು. ಈ ಬೇನಾಮಿ ಆಸ್ತಿಯನ್ನು ಧಾರವಾಡದ ರಾಜಕೀಯ ಮುಖಂಡರೊಬ್ಬರು ಖರೀದಿಸಿದ್ದರು. ನೌಕರ ಮತ್ತು ಮಧ್ಯವರ್ತಿ ಸೇರಿ ಮುಂಗಡವಾಗಿ 50ಲಕ್ಷ ರೂ. ಪಡೆದು ಹಂಚಿಕೊಂಡಿದ್ದರು. ಇದಕ್ಕೆ ಹತ್ಯೆ ಆರೋಪಿ ಮಹಾಂತೇಶ ಕೈಜೋಡಿಸಿ 20 ಲಕ್ಷ ರೂ. ಪಡೆದಿದ್ದ. ಇನ್ನುಳಿದ ಹಣ ನೋಂದಣಿ ವೇಳೆ ಕೊಡುವುದಾಗಿ ಖರೀದಿದಾರ ಹೇಳಿದ್ದ ಎನ್ನಲಾಗಿದೆ.
ಈ ವಿಷಯ ಗುರೂಜಿಗೆ ಗೊತ್ತಾಗಿ ಜಮೀನು ಖರೀದಿ ಪ್ರಕ್ರಿಯೆಗೆ ಅಡ್ಡಿಪಡಿಸಿದ್ದರು. ಅಲ್ಲದೆ ಅಣ್ಣನ ಮಗನ ಮೂಲಕ ಕೋರ್ಟ್‌ನಲ್ಲಿ ತಡೆಯಾಜ್ಞೆ ಕೂಡ ತಂದಿದ್ದರು. ಹೀಗಾಗಿ ಖರೀದಿದಾರನು ತಾನು ಕೊಟ್ಟ ಮುಂಗಡ ಹಣವನ್ನು ಮರಳಿಸುವಂತೆ ಮಹಾಂತೇಶಗೆ ದುಂಬಾಲು ಬಿದ್ದಿದ್ದ. ಆದರೆ ಆಸ್ತಿ ಮಾರಾಟ ಮಾಡಿ ಮುಂಗಡವಾಗಿ ಪಡೆದಿದ್ದ ಹಣವನ್ನು ಮಹಾಂತೇಶ ಖರ್ಚು ಮಾಡಿದ್ದ. ಅಲ್ಲದೆ ಗುರೂಜಿ ಇದಕ್ಕೆ ಅಡ್ಡಿಪಡಿಸಿದ್ದರಿಂದ ಅವರ ಮೇಲೆ ಮತ್ತಷ್ಟು ಸಿಟ್ಟಾಗಿದ್ದ ಎನ್ನಲಾಗಿದೆ.
ಗುರೂಜಿ ಬೇನಾಮಿಯಾಗಿ ಮಾಡಿದ್ದ ಬಹುತೇಕ ಆಸ್ತಿಗಳನ್ನು ಮಹಾಂತೇಶ ಮರಳಿಕೊಡಿಸಿದ್ದ. ಆ ಸಂದರ್ಭದಲ್ಲಿ ಗುರೂಜಿ ಆಸ್ತಿ ಮರಳಿ ಕೊಡಿಸಿದರೆ 60 ಲಕ್ಷ ರೂ. ಕೊಡುವುದಾಗಿ, ತಿಂಗಳಿಗೆ 50 ಸಾವಿರ ರೂ. ಹಾಗೂ ಒಂದು ಪ್ಲಾಟ್ ನೀಡುವುದಾಗಿ ಹೇಳಿದ್ದರಂತೆ. ಆದರೆ ಕೆಲಸ ಮುಗಿದ ಮೇಲೆ ಹಣ ಕೊಡಲು ನಿರಾಕರಿಸಿದ್ದರಂತೆ. ಮಹಾಂತೇಶನು ತಾನು ಮಾಡುತ್ತಿದ್ದ ವ್ಯವಹಾರದಲ್ಲೂ ಕೈಸುಟ್ಟು ಕೊಂಡಿದ್ದರಿಂದ ಹಾಗೂ ಹಣವಿಲ್ಲದೆ ಕೈಖಾಲಿಯಾಗಿದ್ದರಿಂದ ಗುರೂಜಿ ಮೇಲೆ ವಿಪರೀತ ದ್ವೇಷ ಸಾಧಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ಇದೇ ಕಾರಣವಿಟ್ಟುಕೊಂಡು ಅವರನ್ನು ಹತ್ಯೆ ಮಾಡಿದ್ದಾಗಿ ಹೇಳಲಾಗುತ್ತಿದೆ.
ಆರೋಪಿತರು ಇಂದು ನ್ಯಾಯಾಂಗ ವಶಕ್ಕೆ
ಚಂದ್ರಶೇಖರ ಗುರೂಜಿ ಹತ್ಯೆಗೆ ಸಂಬಂಧಿಸಿ ಬಂಧಿತರಾಗಿದ್ದ ಮಹಾಂತೇಶ ಶಿರೂರ ಮತ್ತು ಮಂಜುನಾಥ ಮರೇವಾಡನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದುಕೊಂಡು ಜು. 6ರಿಂದ ಆರು ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದರು. ಜು. 12ರಂದು ನ್ಯಾಯಾಲಯಕ್ಕೆ ಇಬ್ಬರನ್ನು ಹಾಜರುಪಡಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಿದ್ದಾರೆ.