Advertisement

ಅಡಿಕೆ ಮರ ಏರಿ ಔಷಧ ಸಿಂಪಡಿಸುವ ದಿಟ್ಟೆ!

11:09 AM Aug 04, 2018 | Team Udayavani |

ಸುಳ್ಯ : ಅಡಿಕೆ ಮರ ಏರಿ ಔಷಧ ಸಿಂಪಡಿಸುವುದು, ಅಡಿಕೆ ಕೊಯ್ಯುವುದು ಅಂದಾಗ ತತ್‌ಕ್ಷಣ ನೆನಪಾಗುವುದು ಪುರುಷ ಕಾರ್ಮಿಕರು. ಆದರೆ ಇಲ್ಲೊಬ್ಬಳು ಮಹಿಳೆ ಪುರುಷರಿಗಿಂತ ತಾನು ಕಡಿಮೆ ಇಲ್ಲ ಅನ್ನುವುದನ್ನು ಸಾಬೀತುಪಡಿಸಿದ್ದಾರೆ. ಅಡಿಕೆ ಮರ ಏರುವ, ಮದ್ದು ಸಿಂಪಡಿಸುವ ಮೂಲಕ ಅದನ್ನು ಸಾಧಿಸಿ ತೋರಿಸಿದ್ದಾರೆ. ಅಡ್ಕಾರು ಕೋನಡ್ಕಪದವಿನ ಚಂದ್ರಲೇಖಾ ತನ್ನ ಮನೆಯ ತೋಟಕ್ಕೆ ತಾನೇ ಔಷಧ ಸಿಂಪಡಿಸುತ್ತಿರುವ ವಿಶಿಷ್ಟ ಸಾಧಕಿ.

Advertisement

ಇದು ಸುಲಭದ ಕೆಲಸ ಅಲ್ಲ. ಎಲ್ಲ ಪುರುಷರಿಗೂ ಸಾಧ್ಯವಿಲ್ಲ. ಗ್ರಾಮದಲ್ಲಿ ಮೂರು ನಾಲ್ಕು ಮಂದಿ ನಿಪುಣರಷ್ಟೇ ಇರುತ್ತಾರೆ. ಅಂತಹದ್ದರಲ್ಲಿ ಮಹಿಳೆ ತಾನೇನೂ ಕಮ್ಮಿ ಇಲ್ಲ ಎಂದು ಸಾಧಿಸಿ ತೋರಿಸಿದ್ದಾರೆ. ಕಂಟ್ರೋಲರ್‌ ಹಿಡಿದು, ದಿನಪೂರ್ತಿ ಮರದ ಮೇಲೆ ನಿಂತು ಔಷಧ ಸಿಂಪಡಿಸುವ ಕಷ್ಟದ ಕಾಯಕಕ್ಕೆ ಮೂರು ವರ್ಷ ಸಂದಿದೆ.

ಅಡಿಕೆ ಮರ ಏರಿದರು..!
ಇವರ ಕಾಯಕ ಆರಂಭವಾದದ್ದೇ ಕಾರ್ಮಿಕರ ಕೊರತೆಯ ಕಾರಣಕ್ಕೆ. ಮೂರು ವರ್ಷದ ಹಿಂದೆ ಮದ್ದು ಬಿಡಲು ಕಾರ್ಮಿ
ಕರು ಸಿಗದೆ ಕೊಳೆ ರೋಗ ಬಂದು ಇವರ ತೋಟದ ಎಳೆ ಅಡಿಕೆ ಧರೆಶಾಹಿಯಾಯಿತು. ಇಡೀ ಕುಟುಂಬ ಚಿಂತೆಯಲ್ಲಿದ್ದಾಗ, ಚಂದ್ರಲೇಖ ಮೆಷಿನ್‌ ಬಳಸಿ ಅಡಕೆ ಮರ ಏರಲು ಆರಂಭಿಸಿದರು. ಅಕ್ಕ ರತ್ನಾವತಿ ಮತ್ತು ಬಾವ ಆನಂದ ಗೌಡ ಇವರಿಗೆ ಪ್ರೋತ್ಸಾಹ ನೀಡಿದರು.

ಎರಡು ದಿನಗಳಲ್ಲಿ ಪೂರ್ಣ
ಚಂದ್ರಲೇಖಾ ಅವರ ತೋಟದಲ್ಲಿ 600 ಅಡಕೆ ಮರಗಳಿವೆ. ಅದಕ್ಕೆ ಔಷಧಿ ಸಿಂಪಡಿಸಲು ಎರಡು ದಿನ ಸಾಕಾಗುತ್ತದೆ. ಪ್ರಥಮ ಅವಧಿಗೆ ಎರಡು ಬ್ಯಾರಲ್‌ ಮತ್ತು ಎರಡನೇ ಅವಧಿ ಮೂರು ಬ್ಯಾರಲ್‌ ಔಷಧ ಬೇಕಾಗುತ್ತದೆ. ಎರಡು ದಿನಗಳಲ್ಲಿ ಪೂರ್ತಿ ತೋಟಕ್ಕೆ ಸಿಂಪಡಿಸಲು ಸಾಧ್ಯವಾಗುತ್ತದೆ.

ಆತ್ಮ ವಿಶ್ವಾಸ 
ಸುಳ್ಯ ಕೆವಿಜಿ ವಿದ್ಯಾಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಚಂದ್ರಲೇಖಾ ರಜಾ ದಿನಗಳಲ್ಲಿ ಔಷಧ ಸಿಂಪಡಿಸುವ ಕೆಲಸ ಮಾಡುತ್ತಾರೆ. ಇತರೆಡೆಗೆ ಇದುವರೆಗೆ ಔಷಧ ಸಿಂಪಡಿಸಲು ಹೋಗಿಲ್ಲ. ಅನಿವಾರ್ಯ ಸಂದರ್ಭ ಎದುರಾದರೆ ಅದಕ್ಕೂ ತಾನು ಸಿದ್ಧ ಅನ್ನುವ ಆತ್ಮವಿಶ್ವಾಸ ಪ್ರದರ್ಶಿಸುತ್ತಾರೆ.

Advertisement

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next