Advertisement

ಪತ್ರಿಕೆಯ ಗೌರವ ಸಂಪಾದಕ, ಸಮಾಜ ಸೇವಕ ಚಂದ್ರಕಾಂತ ಅಂಗಡಿ ನಿಧನ

06:38 PM Dec 24, 2021 | Team Udayavani |

 

Advertisement

ಹಳಿಯಾಳ: ಸರಳ ವ್ಯಕ್ತಿತ್ವ ಹಾಗೂ ಸರ್ವ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ ತಾಲೂಕಾ ಬಸವ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ, ಅಂಗಡಿ ಸರ್ವಿಸ್ ಮಾಲೀಕ ಹಾಗೂ ವಿಜಯ ಸಂದೇಶ ವಾರ ಪತ್ರಿಕೆಯ ಗೌರವ ಸಂಪಾದಕ ಸಮಾಜಸೇವಕ ಚಂದ್ರಕಾಂತ ಅಂಗಡಿ (62) ಶುಕ್ರವಾರ ನಸುಕಿನ ವೇಳೆ ಪಟ್ಟಣದ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

ಚಂದ್ರಕಾಂತ ಅವರು ಕಳೆದ ಹಲವು ತಿಂಗಳುಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೂ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದರು. ಸಮಾಜ‌ ಸೇವಕರಾಗಿ ಬಸವ ತತ್ವದ ಪ್ರಬಲ ಪ್ರತಿಪಾದಕರಾಗಿದ್ದು ಶಾಂತಿ ಸಹಬಾಳ್ವೆಗೆ ಹಾಗೂ ಸಾಮರಸ್ಯ ಜೀವನಕ್ಕೆ ಒತ್ತು ನೀಡುತ್ತಿದ್ದರು. ಅವರ ಸೇವೆಗಾಗಿ ಹಲವು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ ಪ್ರಮುಖವಾಗಿ ಇಂದಿರಾ ಗಾಂಧಿ ಪ್ರಿಯದರ್ಶನಿ ಪ್ರಶಸ್ತಿ,ಯುವ ಪ್ರಶಸ್ತಿ,ವನಮಿತ್ರ ಪಶಸ್ತಿ,ಬಸವಗುರು ಕಾರುಣ್ಯ ಪ್ರಶಸ್ತಿ, ಅಂಬಿಗ ಕುಮಾರ ಚೌಡಯ್ಯ ಸೇರಿದಂತೆ ಅನೇಕ‌ ಸೇವಾ ಪ್ರಶಸ್ತಿಗಳು ಲಭಿಸಿವೆ.

ಚಿತ್ರದುರ್ಗದ ಬೃಹಣ್ಮಠ ಸ್ವಾಮೀಜಿಗಳು, ಹಳಿಯಾಳ ಉಪ್ಪಿನಬೆಟಗೇರಿ ವಿರಕ್ತಮಠ ಸ್ವಾಮೀಜಿಗಳು, ಇಲಕಲ್ಲ ಮಹಾಂತ ಸ್ವಾಮಿಗಳು, ಚಿತ್ತರಗಿ ಮಹಾಸಂಸ್ಥಾನ ಮಠಾಧೀಶರು, ಮುಂಡಗೋಡ ಅತ್ತಿವೇರಿ ಧಾಮದ ಶರಣೆ ಬಸವೇಶ್ವರಿ,ಶಾಸಕ ಆರ್ ವಿ ದೇಶಪಾಂಡೆ,ಧಾರವಾಡ ಕ್ಷೇತ್ರದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ್,ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಘೋಟ್ನೆಕರ , ಮಾಜಿ ಶಾಸಕ ಸುನಿಲ ಹೆಗಡೆ,ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್ ವಾಸರೆ ,ಪುರಸಭೆ ಅಧ್ಯಕ್ಷ ಅಜರುದ್ದೀನ್ ಬಸರೀಕಟ್ಟಿ ,ಹಾಗೂ ವಿವಿಧ ಸಮಾಜದ ಗಣ್ಯರು ರಾಜಕೀಯ ಮುಖಂಡರು ಅಂಗಡಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ.

ಮೃತರು ಪತ್ನಿ ,ಓರ್ವ ಪುತ್ರ,ಮೂರು ಜನ ಸಹೋದರರು ಹಾಗೂ ಓರ್ವ ಸಹೋದರಿ ಹಾಗೂ ಅಪಾರ ಬಂಧು ಬಳಗ ಮತ್ತು ಅನುಯಾಯಿಗಳನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಬಸವ ತತ್ವದ ಪ್ರಕಾರ ಅಂಗಡಿ ಗ್ಯಾಸ್ ಸರ್ವಿಸಸ್ ಪಕ್ಕದ ಅವರ ಜಮೀನಿನಲ್ಲಿ ಸಂಜೆ 6 ಗಂಟೆಗೆ ನೆರವೇರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next