Advertisement

ದಿನದ ಧರಣಿಗೆ 10 ಕೋಟಿ! : ಚಂದ್ರಬಾಬು ನಾಯ್ಡು ಉಪವಾಸಕ್ಕೆ ಖರ್ಚಾದ ಹಣ

09:40 AM Feb 13, 2019 | Team Udayavani |

ಅಮರಾವತಿ/ಹೊಸದಿಲ್ಲಿ: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಆಗ್ರಹಿಸಿ ಸಿಎಂ ಚಂದ್ರಬಾಬು ನಾಯ್ಡು ಸೋಮವಾರ ದಿಲ್ಲಿಯಲ್ಲಿ ನಡೆಸಿದ 12 ಗಂಟೆಯ ಉಪವಾಸ ಸತ್ಯಾಗ್ರಹಕ್ಕೆ ಮಾಡಿದ ವೆಚ್ಚವೆಷ್ಟು ಗೊತ್ತಾ? ಬರೋಬ್ಬರಿ 10 ಕೋಟಿ ರೂ.! ಅಚ್ಚರಿಯಾದರೂ ಸತ್ಯ. ರೈಲು, ಆಹಾರ, ವಿಐಪಿಗಳ ಕೊಠಡಿ ಮತ್ತಿತರ ಸೌಲಭ್ಯಕ್ಕಾಗಿ ಇಷ್ಟೊಂದು ವೆಚ್ಚ ಮಾಡಲಾಗಿದೆ ಎಂದು ರಾಜ್ಯ ಸರಕಾರವೇ ಮಾಹಿತಿ ನೀಡಿದೆ.

Advertisement

ಧರಣಿಯಲ್ಲಿ ಪಾಲ್ಗೊಳ್ಳಲು ತೆರಳುವ ಜನರಿಗಾಗಿ ಶ್ರೀಕಾಕುಲಂ ಮತ್ತು ಅನಂತಪುರದಿಂದ 2 ವಿಶೇಷ ರೈಲುಗಳನ್ನು ಬುಕ್‌ ಮಾಡಲಾಗಿತ್ತು. ಇದಕ್ಕೆ 1.12 ಕೋಟಿ ರೂ. ತಗುಲಿತ್ತು. ಇದಲ್ಲದೆ, ಅಲ್ಲಿಗೆ ಬಂದ ಸಾರ್ವಜನಿಕರು ಹಾಗೂ ವಿಐಪಿಗಳಿಗೆ ಆಹಾರ ಮತ್ತು ವಸತಿ ವ್ಯವಸ್ಥೆಯನ್ನೂ ಸರಕಾರವೇ ಕಲ್ಪಿಸಿತ್ತು. ವಸತಿಗಾಗಿ 1,100 ಕೊಠಡಿಗಳನ್ನು ಬುಕ್‌ ಮಾಡಲಾಗಿತ್ತು. ಈ ಎಲ್ಲ ವೆಚ್ಚಗಳನ್ನು ಭರಿಸಲು ಒಟ್ಟಾರೆ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು ಎಂದು ಸರಕಾರ ತಿಳಿಸಿದೆ.

ರಾಷ್ಟ್ರಪತಿಗೆ ಮನವಿ
ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿ ಸೋಮವಾರ ಉಪವಾಸ ಸತ್ಯಾಗ್ರಹ ನಡೆಸಿದ್ದ ಸಿಎಂ ಚಂದ್ರಬಾಬು ನಾಯ್ಡು ಮಂಗಳವಾರ ರಾಷ್ಟ್ರಪತಿಭವನದತ್ತ ಪಾದಯಾತ್ರೆ ನಡೆಸಿದ್ದಾರೆ. ಬಳಿಕ ರಾಷ್ಟ್ರಪತಿ ರಾಮನಾಥ ಕೋವಿಂದ್‌ರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದಾರೆ. ಆಂಧ್ರ ಭವನದಿಂದ ಟಿಡಿಪಿಯ ಹಿರಿಯ ನಾಯಕರ ಜತೆಗೂಡಿ ಯಾತ್ರೆ ನಡೆಸಿದರು. ಬಳಿಕ ಮಾತನಾಡಿದ ಅವರು, ‘ಆಂಧ್ರ ವಿಭಜನೆ ಕಾಯ್ದೆಯ ಅಂಶಗಳನ್ನು ಕೇಂದ್ರ ಸರಕಾರ ಮರೆತಿದೆ. ಮೋದಿ ಸರಕಾರ ಹಣ ಬಿಡುಗಡೆ ಮಾಡದೆ ವಿಳಂಬ ಮಾಡುತ್ತಿದೆ’ ಎಂದು ದೂರಿದ್ದಾರೆ. ವಿಶೇಷ ಸ್ಥಾನಮಾನ ನೀಡದೇ ಇರುವ ಕಾರಣದಿಂದ ಹಲವರಿಗೆ ಖಿನ್ನತೆ ಉಂಟಾಗಿದೆ. ಅದೇ ಕಾರಣದಿಂದ ಸೋಮವಾರ ದಿವ್ಯಾಂಗ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next