ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿದ್ದ “ಚಾಂದಿನಿ ಬಾರ್’ ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡಿದ್ದು ನಿಮಗೆ ಗೊತ್ತಿರಬಹುದು. ಸದ್ಯ “ಚಾಂದಿನಿ ಬಾರ್’ ಬಿಡುಗಡೆಯಾಗಿ ಮೂರು ವಾರಗಳ ಯಶಸ್ವಿ ಪ್ರದರ್ಶನ ಕಂಡಿದ್ದು, ಇದೀಗ ನಾಲ್ಕನೇ ವಾರಕ್ಕೆ ಕಾಲಿಡುತ್ತಿದೆ. ಒಂದೆಡೆ ರಾಜ್ಯ ವಿಧಾನಸಭಾ ಚುನಾವಣೆ, ಮತ್ತೂಂದೆಡೆ ಐಪಿಎಲ್ ಅಬ್ಬರ ಇವೆಲ್ಲದರ ನಡುವೆಯೂ ನಿಧಾನವಾಗಿ “ಚಾಂದಿನಿ ಬಾರ್’ ಸಿನಿಮಾಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಚಿತ್ರತಂಡದ ಮೊಗದಲ್ಲಿ ಸಣ್ಣದೊಂದು ನಗು ಮೂಡಿಸಲು ಕಾರಣವಾಗಿದೆ.
ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿರುವ ರಾಘವೇಂದ್ರ ಕುಮಾರ್, “ಚಾಂದಿನಿ ಬಾರ್’ ಸಿನಿಮಾ ನಿರ್ದೇಶನ ಮಾಡುವುದರ ಜೊತೆಗೆ ತೆರೆಮೇಲೆ ನಾಯಕನಾ ಗಿಯೂ ಕಾಣಿಸಿಕೊಂಡಿದ್ದಾರೆ.
ಸುಕೃತಿ ಪ್ರಭಾಕರ್ ಸಿನಿಮಾದಲ್ಲಿ ನಾಯಕಿಯಾಗಿದ್ದು, ಉಳಿದಂತೆ ಸಿದ್ದು ಬದನವಾಳು, ಮಣಿಕಂಠ, ರಶ್ಮಿ, ಮಂಜು ಆರ್ಯ, ವಿಜಯ ಕಾರ್ತಿಕ್, ಸಂಪತ್ ಮೈತ್ರೇಯಾ, ಸೂರ್ಯ ಶೇಖರ್, ಶ್ರೀವತ್ಸ, ರವಿಕುಮಾರ್, ಭರತ ಕುಮಾರ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನು ಬಿಡುಗಡೆಯ ನಂತರ “ಚಂದಿನಿ ಬಾರ್’ ಸಿನಿಮಾಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡುವ ಸಿನಿಮಾದ ನಾಯಕ ನಟ ಕಂ ನಿರ್ದೇಶಕ ರಾಘವೇಂದ್ರ ಕುಮಾರ್, “ಇದೇ ಏ. 21ಕ್ಕೆ “ಚಾಂದಿನಿ ಬಾರ್’ ಸಿನಿಮಾ ಬಿಡುಗಡೆಯಾಗಿ, ಮೂರು ವಾರಗಳನ್ನು ಪೂರೈಸಿ ನಾಲ್ಕನೇ ವಾರಕ್ಕೆ ಕಾಲಿಡುತ್ತಿದೆ. ಎಲೆಕ್ಷನ್, ಐಪಿಎಲ್ ನಡುವೆಯೂ “ಚಾಂದಿನಿ ಬಾರ್’ಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು, ವಿಮರ್ಶಕರು ಮೆಚ್ಚುಗೆಯ ಮಾತನಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಈ ವಾರದಿಂದ ರಾಜ್ಯಾದ್ಯಂತ ಸುಮಾರು 20ಕ್ಕೂ ಹೆಚ್ಚು ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.
ಜಿ.ಎಸ್. ಕಾರ್ತಿಕ ಸುಧನ್