ಹೊಸದಿಲ್ಲಿ : ಕಳೆದ ವಾರ ಚಂಡೀಗಢದಲ್ಲಿ ಕಾರಿನಲ್ಲಿ ಸಾಗುತ್ತಿದ್ದ ಮಹಿಳೆಯೋರ್ವರನ್ನು ತನ್ನ ಕಾರಿನಲ್ಲಿ, ಸ್ನೇಹಿತನ ಸಂಗಡ, ಪ್ರಾಣ ಭೀತಿ ಹುಟ್ಟಿಸುವ ರೀತಿಯಲ್ಲಿ ಬೆನ್ನಟ್ಟಿ ಕಿರುಕುಳ ನೀಡಿದ್ದ ಆರೋಪದ ಮೇಲೆ ಹಿಯಾಣ ಬಿಜೆಪಿ ಮುಖ್ಯಸ್ಥನ ಪುತ್ರ ವಿಕಾಸ್ ಬರಾಲಾ ನನ್ನು ಪೊಲೀಸರು ಇಂದು ಮಧ್ಯಾಹ್ನ ಬಂಧಿಸಿದರು.
ಈ ಪ್ರಕರಣದಲ್ಲಿ ಈ ಮೊದಲು ಬಂಧಿತನಾಗಿ ಜಾಮೀನಿನಲ್ಲಿ ಹೊರಬಂದಿದ್ದ ವಿಕಾಸ್ ಬರಾಲಾ ಇಂದು ಬೆಳಗ್ಗೆ 11 ಗಂಟೆಗೆ ಸಮನ್ಸ್ ಪ್ರಕಾರ ಪೊಲೀಸ್ ಠಾಣೆಯಲ್ಲಿ ಹಾಜರಾಗಬೇಕಿತ್ತು. ಆದರೆ ಹಾಗೆ ಮಾಡದೆ ಮಧ್ಯಾಹ್ನದ ವೇಳೆ ಪೊಲೀಸ್ ಠಾಣೆಗೆ ತಾನೇ ಖುದ್ದು ಆಗಮಿಸಿ ಶರಣಾದ ಬರಾಲಾನನ್ನು ಪೊಲೀಸರು ಬಂಧಿಸಿದರು.
ಇದಕ್ಕೆ ಮೊದಲು ಫೊರೆನ್ಸಿಕ್ ಪರೀಕ್ಷೆಗಾಗಿ ರಕ್ತದ ಸ್ಯಾಂಪಲ್ ನೀಡಬೇಕಾಗಿದ್ದ ಬರಾಲಾ, ಪೊಲೀಸರ ಆದೇಶವನ್ನು ಧಿಕ್ಕರಿಸಿದ್ದ.
ವಿಕಾಸ್ ಬರಾಲಾನ ತಂದೆ, ಹರಿಯಾಣ ಬಿಜೆಪಿ ಮುಖ್ಯಸ್ಥ ಸುಭಾಶ್ ಬರಾಲಾ ಅವರು “ನನ್ನ ಮಗ ಪೊಲೀಸ್ ತನಿಖೆಗೆ ಪೂರ್ತಿಯಾಗಿ ಸಹಕರಿಸಲಿದ್ದಾನೆ” ಎಂದು ಹೇಳಿದ್ದರು.
ಚಂಡೀಗಢದ ಸೆಕ್ಟರ್ 26ರಲ್ಲಿನ ಪೊಲೀಸ್ ಠಾಣೆಗೆ ಬಂದು ವಿಕಾಸ್ ಬರಾಲಾ ಶರಣಾಗಿದ್ದಾನೆ. ಪೊಲೀಸ್ ಠಾಣೆಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ವಿಕಾಸ್ ಬರಾಲಾನಿಂದ ಕಿರುಕುಳಕ್ಕೆ ಗುರಿಯಾದ ಮಹಿಳೆ, ವರ್ಣಿಕಾ ಕುಂದು ಅವರ ತಂದೆ ವಿ ಎಸ್ ಕುಂದು ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, “ವಿಕಾಸ್ ಬರಾಲಾನ ಬಂಧನವು ಸರಿಯಾದ ಕಾನೂನು ಕ್ರಮದಲ್ಲಿ ಇಡಲಾಗಿರುವ ಒಂದು ಸಣ್ಣ ಹೆಜ್ಜೆ’ ಎಂದಿದ್ದಾರೆ.