ಹೊಸದಿಲ್ಲಿ: ಚಂಡೀಗಢ ಮೇಯರ್ ಚುನಾವಣೆಯ ಫಲಿತಾಂಶಗಳನ್ನು ಕಟ್ಟುನಿಟ್ಟಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಪ್ರಜಾಪ್ರಭುತ್ವದ ಕೊಲೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. ಅಲ್ಲದೆ ಚುನಾವಣಾಧಿಕಾರಿ ಅವರು ಮಾಡಿದ್ದಕ್ಕಾಗಿ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದೆ. ಅಧಿಕಾರಿ ಮತಪತ್ರಗಳನ್ನು ವಿರೂಪಗೊಳಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ.
ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಸುಪ್ರೀಂ ಕೋರ್ಟ್, ಮೇಯರ್ ಚುನಾವಣೆ ನಡೆದ ರೀತಿಯು ಪ್ರಜಾಪ್ರಭುತ್ವದ ಅಣಕ ಎಂದು ಹೇಳಿದೆ. “ಇದೇನಾ ಚುನಾವಣಾಧಿಕಾರಿಯ ವರ್ತನೆ?” ಎಂದು ಪೀಠ ಪ್ರಶ್ನಿಸಿದೆ.
ಚುನಾವಣಾ ಪ್ರಕ್ರಿಯೆಯ ವೀಡಿಯೋ ವೀಕ್ಷಿಸಿದ ನಂತರ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು, ಚುನಾವಣಾಧಿಕಾರಿ ಮಾಡಿದ್ದು ಪ್ರಜಾಪ್ರಭುತ್ವದ ಕೊಲೆಯಂತೆ ಎಂದರು. “ಕ್ಯಾಮೆರಾ ನೋಡಿಕೊಂಡು ಬ್ಯಾಲೆಟ್ ಪೇಪರ್ ಹಾಳು ಮಾಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದೇನಾ ಅವರು ಚುನಾವಣೆ ನಡೆಸುವುದು? ಇದು ಪ್ರಜಾಪ್ರಭುತ್ವದ ಅಣಕ. ಇದು ಪ್ರಜಾಪ್ರಭುತ್ವದ ಕೊಲೆ. ಈ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಮೂಲಕ ಮತಪತ್ರಗಳು, ವಿಡಿಯೋಗ್ರಫಿ ಮತ್ತು ಇತರ ವಸ್ತುಗಳನ್ನು ಒಳಗೊಂಡಂತೆ ಚುನಾವಣಾ ಪ್ರಕ್ರಿಯೆಯ ಸಂಪೂರ್ಣ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಚಂಡೀಗಢ ಕಾರ್ಪೊರೇಷನ್ ನ ಮುಂದಿನ ಸಭೆಯನ್ನು ಮುಂದಿನ ವಿಚಾರಣೆಯ ದಿನಾಂಕಕ್ಕೆ ಮುಂದೂಡುವಂತೆಯೂ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಚಂಡೀಗಢ ಮೇಯರ್ ಚುನಾವಣೆಯಲ್ಲಿ ಚುನಾವಣಾಧಿಕಾರಿ 8 ಪ್ರತಿಪಕ್ಷಗಳ ಮತಗಳು ಅಸಿಂಧು ಎಂದು ಘೋಷಿಸಿ ಬಿಜೆಪಿ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಿಸಿದ ನಂತರ ವಿವಾದಕ್ಕೆ ಕಾರಣವಾಗಿತ್ತು.
ಪಂಜಾಬ್ ಹರ್ಯಾಣ ಹೈಕೋರ್ಟ್‌ನಿಂದ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಮೇಯರ್ ಚುನಾವಣೆಯ ಫಲಿತಾಂಶವನ್ನು ಪ್ರಶ್ನಿಸಿ ಜಂಟಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದ ಎಎಪಿ ಮತ್ತು ಕಾಂಗ್ರೆಸ್ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿವೆ.
ಚಂಡೀಗಢ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಎಎಪಿ ಅಭ್ಯರ್ಥಿ ಕುಲದೀಪ್ ಟಿಟಾ ಗಳಿಸಿದ 12 ಮತಗಳ ವಿರುದ್ಧ 16 ಮತಗಳನ್ನು ಗಳಿಸಿದ ಬಿಜೆಪಿ ಅಭ್ಯರ್ಥಿ ಮನೋಜ್ ಸೋಂಕರ್ ಅವರನ್ನು ವಿಜಯಿ ಎಂದು ಘೋಷಿಸಲಾಯಿತು. 8 ಮತಗಳು ಅಸಿಂಧು ಎಂದು ಘೋಷಿಸಲಾಗಿತ್ತು.