Advertisement

ಅನಿತಾ ಬದಲು ನಿಖಿಲ್‌ ‘ರಂಗಪ್ರವೇಶ’?

03:15 AM Oct 03, 2018 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರ ರಾಜೀನಾಮೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ರಾಮನಗರ ವಿಧಾನಸಭೆ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧೆಗಿಳಿಯುವುದು ಖಚಿತ. ಆದರೂ ಕೊನೇ ಕ್ಷಣದಲ್ಲಿ ನಿಖೀಲ್‌ ಕಣಕ್ಕಿಳಿದರೂ ಅಚ್ಚರಿಯಿಲ್ಲ. ಪುತ್ರ ನಿಖೀಲ್‌ ಅವರನ್ನು ಕುಮಾರಸ್ವಾಮಿಯವರ ರಾಜಕೀಯ ವಾರಸುದಾರರನ್ನಾಗಿ ಮಾಡುವ ಬಯಕೆ ಹೊಂದಿರುವ ಅನಿತಾ ಕುಮಾರಸ್ವಾಮಿ, ರಾಮನಗರ ಉಪಚುನಾವಣೆಯಲ್ಲೇ ‘ರಂಗಪ್ರವೇಶ’ಕ್ಕೆ ಒಲವು ಹೊಂದಿದ್ದಾರೆ. ಆದರೆ ನಿಖೀಲ್‌ ಈಗಲೇ ರಾಜಕೀಯ ಪ್ರವೇಶ ಮಾಡುವುದು ಬೇಡ. ಉಪ ಚುನಾವಣೆಯಲ್ಲಿ ಅನಿತಾ ಅಥವಾ ಪಕ್ಷದ ಬೇರೆ ಮುಖಂಡರಿಗೆ ಅವಕಾಶ ಕಲ್ಪಿಸಿಕೊಡಲು ಕುಮಾರಸ್ವಾಮಿ ಬಯಸಿದ್ದಾರೆಂದು ಹೇಳಲಾಗಿದೆ.

Advertisement

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಇರುವುದರಿಂದ ರಾಮನಗರ ಮತ್ತು ಜಮಖಂಡಿ ಕ್ಷೇತ್ರಗಳ ಉಪ ಚುನಾವಣೆಗೂ ಮೈತ್ರಿ ಖಚಿತವಾಗಿದ್ದು, ರಾಮನಗರ ಜೆಡಿಎಸ್‌ಗೆ, ಜಮಖಂಡಿ ಕಾಂಗ್ರೆಸ್‌ಗೆ ಬಿಟ್ಟುಕೊಡುವ ತೀರ್ಮಾನವಾಗಿದೆ. ಹೀಗಾಗಿ ರಾಮನಗರದಲ್ಲಿ ಜೆಡಿಎಸ್‌ನಿಂದ ಯಾರೇ ಸ್ಪರ್ಧಿಸಿದರೂ ಅನಾಯಾಸವಾಗಿ ಗೆಲ್ಲುವ ಸಾಧ್ಯತೆ ಇರುವುದರಿಂದ ನಿಖೀಲ್‌ ರಾಜಕೀಯ ಪ್ರವೇಶಕ್ಕೆ ಸೂಕ್ತ ಕಾಲ.

ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿರುವಾಗ ಪುತ್ರ ವಿಧಾನಸಭೆ ಪ್ರವೇಶಿಸಿದರೆ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರಲು ಅವಕಾಶ ದೊರೆಯುತ್ತದೆ. ಮುಂದಿನ ರಾಜಕೀಯ ಭವಿಷ್ಯಕ್ಕೂ ಒಳ್ಳೆಯದಾಗುತ್ತದೆ ಎಂಬ ಅಭಿಪ್ರಾಯವೂ ಗೌಡರ ಕುಟುಂಬದಲ್ಲಿದೆ ಎಂದು ಹೇಳಲಾಗಿದೆ.

ಆದರೆ ‘ಜಾಗ್ವಾರ್‌’ ಬಳಿಕ ‘ಸೀತಾರಾಮ ಕಲ್ಯಾಣ’ ಸೇರಿ ಎರಡು -ಮೂರು ಹೊಸ ಚಲನಚಿತ್ರಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಿರುವ ನಿಖೀಲ್‌ಗೆ ರಾಮನಗರ ಚುನಾವಣೆಯಲ್ಲಿ ಸ್ಪರ್ಧಿಸಲು ಇಷ್ಟವಿಲ್ಲ. ಚುನಾವಣೆಗೆ ಸ್ಪರ್ಧೆ ಮಾಡುವುದೇ ಆದರೆ ಮಂಡ್ಯ ಕ್ಷೇತ್ರದಿಂದ ಸಂಸತ್‌ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖೀಲ್‌ ಆಸಕ್ತಿ ಹೊಂದಿದ್ದಾರೆ. ಅದು 2019 ಅಥವಾ ಮುಂದಿನ ಚುನಾವಣೆಯೂ ಆಗಬಹುದು ಎಂದು ಹೇಳಲಾಗಿದೆ.

ಈ ನಡುವೆ, ಸಮ್ಮಿಶ್ರ ಸರಕಾರ ಇದ್ದರೂ ರಾಮನಗರದಿಂದ ಕಾಂಗ್ರೆಸ್‌ ಅಭ್ಯರ್ಥಿ ಕಣಕ್ಕಿಳಿಸಬೇಕು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮುಸ್ಲಿಂ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ 69,900 ಮತ ಪಡೆದಿದ್ದರು. ಹೀಗಾಗಿ, ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಅಲ್ಲಿ ಪಕ್ಷದ ನೆಲೆ ಹೋಗುತ್ತದೆ ಎಂಬುದು ವಿಧಾನಪರಿಷತ್‌ ಸದಸ್ಯ ಲಿಂಗಪ್ಪ ಸೇರಿ ಅಲ್ಲಿನ ಜಿಲ್ಲಾ ಮುಖಂಡರ ಅಭಿಪ್ರಾಯ. ಆದರೆ ಸಮ್ಮಿಶ್ರ ಸರಕಾರ ಇರುವುದರಿಂದ ಮೈತ್ರಿ ಅನಿವಾರ್ಯ. ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಡುವುದು ಖಚಿತ.

Advertisement

ಬಿಜೆಪಿಯಿಂದ ಯಾರು?
ರಾಮನಗರ ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಅನಿತಾ ಅಥವಾ ನಿಖೀಲ್‌ ಯಾರೇ ಸ್ಪರ್ಧಿಸಿ ದರೂ ಅವರ ವಿರುದ್ಧ ಮಾಜಿ ಸಚಿವ ಚನ್ನಪಟ್ಟಣದ ಸಿ.ಪಿ.ಯೋಗೇಶ್ವರ್‌ ಅವರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಆದರೆ ಯೋಗೇಶ್ವರ್‌ ಸದ್ಯದ ಸ್ಥಿತಿಯಲ್ಲಿ ಸ್ಪರ್ಧೆಗೆ ಒಲವು ತೋರುತ್ತಿಲ್ಲ. ಹೀಗಾಗಿ ಕಂಠೀರವ ಸ್ಟುಡಿಯೋ ಮಾಜಿ ಅಧ್ಯಕ್ಷ ರುದ್ರೇಶ್‌ ಕಣಕ್ಕಿಳಿಯುವ ಸಾಧ್ಯತೆಯಿದೆ. ಸಿ.ಪಿ.ಯೋಗೇಶ್ವರ್‌ ಲೋಕಸಭೆ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಯಬಹುದು ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next