ವಿಜಯಪುರ: ವಿದ್ಯಾರ್ಥಿಗಳಿಗೆ ನಾಲ್ಕು ಗೋಡೆಗಳ ನಡುವೆ ಕಲಿಯುವ ಶಿಕ್ಷಣದಿಂದ ಕೇವಲ ಪ್ರಮಾಣ ಪತ್ರ ಸಿಗಬಹುದೇ ಹೊರತು ಅವರಿಗೆ ಬದುಕು ಸಿಗುವುದಿಲ್ಲ. ಬದುಕು ಸಿಗಬೇಕೆಂದರೆ ಪಠ್ಯದಿಂದ ಆಚೆ ನೋಟ ಹರಿಸಬೇಕು ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ತಿಳಿಸಿದರು.
ಪಟ್ಟಣದ ಶಿಡ್ಲಘಟ್ಟ ಕ್ರಾಸ್‌ನಲ್ಲಿರುವ ಇನ್ಸ್‌ಪೆಕ್ಟರ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪದವಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾಭ್ಯಾಸದಲ್ಲಿ ಸಂಪೂರ್ಣತೆ: ಯಾವುದೇ ಸಂಯೋಜನೆಯ ವ್ಯಕ್ತಿ ತನ್ನದಲ್ಲದ ಸಂಯೋಜನೆಯಲ್ಲಿನ ವಿಷಯಗಳನ್ನೂ ಸಹ ಕಲಿಯುವಂತಾಗಬೇಕು. ಹಾಗೆ ಕಲಿತಾಗ ಮಾತ್ರವೇ ವಿದ್ಯಾಭ್ಯಾಸದಲ್ಲಿ ಸಂಪೂರ್ಣತೆ ಬರುತ್ತದೆ. ಇದು ಈಗ ಸರ್ಕಾರ ತರಲು ಹೊರಟಿರುವ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸಾಧ್ಯವಾಗುತ್ತದೆ ಎಂದರು.
ಸದಾ ಕಲಿಕೆ: ಶಿಕ್ಷಣ ತಜ್ಞ ಪ್ರೊ.ಶಿವರಾಂ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕ ಅಥವಾ ಪ್ರಾಧ್ಯಾಪಕ ಎಂದಿಗೂ ನಿವೃತ್ತಿಯಾಗುವುದಿಲ್ಲ. ಆತ ಸದಾ ಕಲಿಯುತ್ತಲೇ ಇರುತ್ತಾನೆ ಮತ್ತು ಕಲಿಸುತ್ತಲೇ ಇರುತ್ತಾನೆ. ಯಾವ ವಿದ್ಯಾರ್ಥಿಯು ತಾನು ಕಲಿತ ಶಾಲೆ, ಕಲಿಸಿದ ಗುರು ಮತ್ತು ಹೆತ್ತವರಿಗೆ ಗೌರವ ಕೊಡುತ್ತಾನೆಯೋ ಆತನ ಬದುಕು ಸುಂದರವಾಗಿ ರೂಪುಗೊಳ್ಳುತ್ತದೆ ಎಂದರು. ಸಂಸ್ಥೆಯ ಉಪಾಧ್ಯಕ್ಷ ಪ್ರೊ.ಶಶಿಧರ್ ಮಾತನಾಡಿ, ಇಂದು ಕೇವಲ ನೀವು ಪದವಿಯನ್ನು ಮಾತ್ರವೇ ಪಡೆಯುತ್ತಿಲ್ಲ. ಬದಲಿಗೆ ಹೆಚ್ಚಿನ ಜವಾಬ್ದಾರಿ ಹೆಗಲಿಗೇರಿಸಿಕೊಳ್ಳುತ್ತಿದ್ದೀರಿ ಎಂದರು.
ಪ್ರಾಂಶುಪಾಲ ಶ್ರೀನಿವಾಸಮೂರ್ತಿ ಎನ್. ಮಾತನಾಡಿ, ಕಾಲೇಜು ಆರಂಭಗೊಂಡ ನಂತರದ ಎರಡನೇ ಬ್ಯಾಚ್ ವಿದ್ಯಾರ್ಥಿಗಳಿಗೆ ಎರಡೆರಡು ಗೋಲ್ಡ್ ಮೆಡಲ್ ಬಂದಿದೆ ಎಂಬ ಹೆಗ್ಗಳಿಕೆ ನಮ್ಮ ಕಾಲೇಜಿಗೆ ಇದೆ ಎಂದರು. ವಿಶ್ವವಿದ್ಯಾಲಯ ಮಟ್ಟದಲ್ಲಿ ಗೋಲ್ಡ್ ಮೆಡಲ್ ಪಡೆದ ಕೀರ್ತನಾ ಮತ್ತು ಸೌಮ್ಯಶ್ರೀ ಎಲ್.ಎನ್. ಅವರಿಗೆ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.
ಬಿ.ಕಾಂನಲ್ಲಿ ಶೇ.97 ಮತ್ತು ಶೇ.95 ಅಂಕ ಪಡೆದಿರುವ ಪ್ರದೀಪ್ ಎನ್. ಮತ್ತು ನಳಿನಾ ಕೆ. ಅವರಿಗೆ ನಗದು ಪುರಸ್ಕಾರ ನೀಡಲಾಯಿತು. 100ಕ್ಕೆ 100 ಅಂಕ ಪಡೆದ 17 ವಿದ್ಯಾರ್ಥಿಗಳಿಗೆ ಮತ್ತು ಶೇ.100 ರಷ್ಟು ಫಲಿತಾಂಶ ಬರಲು ಕಾರಣರಾದ ಪ್ರಾಧ್ಯಾಪಕರನ್ನು ಅಭಿನಂದಿಸಲಾಯಿತು.
ಶಾಸಕ ನಿಸರ್ಗ ನಾರಾಯಾಣಸ್ವಾಮಿ ಪ್ರತಿಭಾ ಪುರಸ್ಕಾರ ನೀಡಿದರು. ಕಾರಹಳ್ಳಿ ಮುನೇಗೌಡ, ರೋಡಹಳ್ಳಿ ಮುನೇಗೌಡ, ಪುರಸಭೆ ಸದಸ್ಯ ಭಾಸ್ಕರ್ ಸೇರಿದಂತೆ ಪೋಷಕರು ಮತ್ತು ಪ್ರಾಧ್ಯಾಪಕರು ಉಪ. ಸ್ಥಿತರಿದ್ದರು. ಇದೇ ಸಂದರ್ಭ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಏರ್ಪಡಿಸಲಾಗಿತ್ತು.
ಗ್ರಾಮೀಣ ಭಾಗದಲ್ಲಿ ಗುಣ ಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ಸಂಸ್ಥೆ ಆರಂಭಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಬದುಕುನ್ನು ಕಟ್ಟಿಕೊಡು ವಲ್ಲಿ ಸಂಸ್ಥೆ ಸದಾ ಮುಂದಿರುತ್ತದೆ. ಮೌಲ್ಯಯುತ ಶಿಕ್ಷಣ ನೀಡುವ ವಿಷಯದಲ್ಲಿ ಕಾಲೇಜು ಎಂದಿಗೂ ರಾಜಿ ಮಾಡಿ ಕೊಳ್ಳುವಿದಿಲ್ಲ.
– ಶ್ರಿನಿವಾಸ್ ಬಿ.ಎನ್.,ಇನ್ಸ್‌ಪೆಕ್ಟರ್ ಸಂಸ್ಥೆ ಕಾರ್ಯದರ್ಶಿ