Advertisement
ಅಂದ ಚೆಂದದ ಬೊಂಬೆಗಳು ಮತ್ತು ಆಟಿಕೆಗಳ ತಯಾರಿಕೆಯಲ್ಲಿ ಚನ್ನಪಟ್ಟಣ ಜಗದ್ವಿಖ್ಯಾತಿ. ಈ ಬೊಂಬೆ, ಆಟಿಕೆ ನಂಬಿಕೊಂಡು ನೂರಾರು ಕುಟುಂಬಗಳು ಇಲ್ಲಿ ಬದುಕು ಕಟ್ಟಿಕೊಂಡಿವೆ. ಸಂಸ್ಕೃತಿಯ ಪ್ರತಿನಿಧಿಗಳಾಗಿ, ಕಲೆಯ ಆಕರ್ಷಣೆಯಾಗಿದ್ದ ಬೊಂಬೆ- ಆಟಿಕೆಗಳೀಗ ಕರಕುಶಲ ಉದ್ಯಮವಾಗಿ ವಿಸ್ಮಯ ಹುಟ್ಟಿಸಿವೆ. ಇಲ್ಲಿನ ಬೊಂಬೆ ಉದ್ಯಮಕ್ಕೆ ಸುಮಾರು 350 ವರ್ಷಗಳ ಇತಿಹಾಸವುಂಟು. ಪರ್ಷಿಯಾದಿಂದ ಕರೆತಂದಿದ್ದ ಕುಶಲಕುರ್ಮಿಗಳಿಂದ, ಚನ್ನಪಟ್ಟಣದ ಜನತೆಗೆ ಬಣ್ಣದ ಕರಕುಶಲ ಕಲೆಯನ್ನು ತಿಳಿಸಿ- ಕಲಿಸಿಕೊಟ್ಟಿದ್ದರಿಂದ ಇಲ್ಲಿ ಬೊಂಬೆಗಳ ಗುಡಿಕೈಗಾರಿಕೆ ಉದ್ಯಮ ಬೆಳೆಯಿತು.
Related Articles
Advertisement
ವೆರೈಟಿ ಏನೇನು? : ಬಣ್ಣದ ಬುಗುರಿ, ಆಕರ್ಷಕ ರೈಲು, ಮರದ ಕೀ ಬಂಚ್, ಕಿವಿಯೋಲೆ, ಬಳೆ, ನೆಕ್ಲೆಸ್, ಚೂಡಿದಾರ್ ಮೇಲೆ ಬಳಸುವ ಅಲಂಕಾರದ ಬೊಂಬೆಗಳು ಇಲ್ಲಿ ತಯಾರಾಗುತ್ತವೆ. ಕೀಲುಕುದುರೆ, ಕ್ರಿಸ್ಮಸ್ ಗಿಡ, ಎತ್ತಿನ ಬಂಡಿ ವಿಶ್ವಪ್ರಸಿದ್ಧ. ಜಾನಪದ ಮಾದರಿಯಲ್ಲಿ ವಿವಿಧ ಬಗೆಯ ಬೊಂಬೆಗಳನ್ನು ತಯಾರಿಸುವ ಕುಶಲಕರ್ಮಿಗಳು ಕಾಲಕ್ಕೆ ತಕ್ಕಂತೆ ಬದಲಾವಣೆಯನ್ನೂ ಮೈಗೂಡಿಸಿಕೊಂಡಿದ್ದಾರೆ. ಕೆತ್ತನೆಯ ವಿನ್ಯಾಸ, ಶೈಲಿಯಲ್ಲಿ ಸುಧಾರಣೆ ಮಾಡಿಕೊಂಡಿದ್ದಾರೆ. ಆಟಿಕೆಗಳ ಜತೆಗೆ ಬಳಕೆಗೆ ಪೂರಕವಾದ ಪದಾರ್ಥಗಳನ್ನೂ ಇಲ್ಲಿ ತಯಾರಿಸಲಾಗುತ್ತಿದೆ.
ಪ್ರೋತ್ಸಾಹ ಬೇಕಿದೆ… : ಚೀನಾ, ಜಪಾನ್, ತೈವಾನ್ ದೇಶಗಳಿಂದ ಆಮದಾಗುತ್ತಿದ್ದ ಪ್ಲಾಸ್ಟಿಕ್ ಬೊಂಬೆಗಳು, ಪಿಂಗಾಣಿ ವಸ್ತುಗಳು, ಆಟಿಕೆ- ಅಲಂಕಾರಿಕ ಸಾಮಗ್ರಿಗಳ ಆಕರ್ಷಣೆಯಿಂದಾಗಿ ದಶಕದಿಂದೀಚೆಗೆ ಚನ್ನಪಟ್ಟಣದ ಬೊಂಬೆ ಉದ್ಯಮ ತೀವ್ರ ಸಂಕಷ್ಟಕ್ಕೆ ತುತ್ತಾಗಿತ್ತು. 400ಕ್ಕೂ ಹೆಚ್ಚು ಬಗೆಯ ಚೀನಾ ಬೊಂಬೆಗಳು ಪಟ್ಟಣದ ಆಟಿಕೆ ಮಳಿಗೆಗೆ, ದೇಶೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದೂ ಬರ ಸಿಡಿಲಾಯಿತು. ಆದರೂ ಚನ್ನಪಟ್ಟಣದ ಬೊಂಬೆಗಳು ನಲುಗಿಲ್ಲ. ನೈಜತೆಯ ಮೆರುಗಿನಿಂದ ತನ್ನ ತನವನ್ನು ಉಳಿಸಿಕೊಂಡು, ಗ್ರಾಹಕರನ್ನು ಸೆಳೆದಿವೆ. ನಮ್ಮೆಲ್ಲರ ಪ್ರೋತ್ಸಾಹವಿದ್ದರೆ, ಈ ಬೊಂಬೆಗಳು ಮತ್ತೆ ಜಗತ್ತಿನ ತುದಿ ತಲುಪಲು ಸಾಧ್ಯ
ವಿದೇಶಿಗರ ಮನಗೆದ್ದ ಬೊಂಬೆ :
- 1970ರ ದಶಕದಲ್ಲಿ ಚನ್ನಪಟ್ಟಣಕ್ಕೆ ಬಂದಿದ್ದ ಅಮೆರಿಕದ ಜಾಕಿ ಚಂದಾನಿ ಎಂಬಾಕೆ, ಇಲ್ಲಿನ ಕರಕುಶಲ ಕಲೆಗೆ ಮಾರುಹೋಗಿದ್ದರು. ನಂತರ ಅವರು ಇಲ್ಲಿಯೇ ನೆಲೆಸಿ ಕಲಾವಿದರಿಗೆ ಮಾರ್ಗದರ್ಶನ ನೀಡಿದರು.
- ಬ್ರಿಟನ್ ರಾಣಿ ಡಯಾನಾ ಮತ್ತು ದೊರೆ ಚಾರ್ಲ್ಸ್ ವಿವಾಹಕ್ಕೆ ಪೌಡರ್ ಬಾಕ್ಸ್‌ಗಳು ಚನ್ನಪಟ್ಟಣ ದಿಂದ ರವಾನೆಯಾಗಿದ್ದವು.
- ಶ್ರೀಲಂಕಾ ಪ್ರಧಾನಿಯಾಗಿದ್ದ ಭಂಡಾರ ನಾಯಕೆ ಅವರು ಚನ್ನಪಟ್ಟಣಕ್ಕೆ ಭೇಟಿ ನೀಡಿ ಬೊಂಬೆಗಳನ್ನು ಖರೀದಿಸಿದ್ದರು.
- ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಅವರ ಪತ್ನಿ ಮಿಶೆಲ್ ಕೂಡ ಬಣ್ಣದ ಆಟಿಕೆಗಳಿಗೆ ಮಾರು ಹೋಗಿದ್ದರು