Advertisement

ಚಾಮುಂಡಿ ವಿಹಾರ ಈಜುಕೊಳ 29ಕ್ಕೆ ಲೋಕಾರ್ಪಣೆ

01:20 PM Jun 17, 2017 | Team Udayavani |

ಮೈಸೂರು: ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ಈಜುಕೊಳದ ಕಾಮಗಾರಿ ಪೂರ್ಣಗೊಂಡಿದ್ದು, ಜೂ.29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್‌ ಹೇಳಿದರು. ಶುಕ್ರವಾರ ನಗರದ ನಜರ್‌ಬಾದ್‌ನಲ್ಲಿರುವ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ಈಜುಕೊಳದ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಮೈಸೂರಿನಲ್ಲಿ ಉತ್ತಮ ಮೂಲಸೌಕರ್ಯವಿರುವ ಕ್ರೀಡಾಂಗಣವಿದ್ದು, ಇದರ ಜತೆಗೆ ಈಜು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಅಂದಾಜು 5 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಈಜುಕೊಳ ನಿರ್ಮಿಸಲಾಗಿದೆ. ಇದರ ಕಾಮಗಾರಿ ಶೇ.95 ಪೂರ್ಣಗೊಂಡಿದ್ದು, ಈ ಹಿನ್ನೆಲೆ ಜೂ.29ರಂದು ವರುಣಾ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಲುವಾಗಿ ಮುಖ್ಯಮಂತ್ರಿಗಳು ನಗರಕ್ಕಾಗಮಿ ಸಲಿದ್ದಾರೆ. ಇದೇ ದಿನದಂದು ಈಜುಕೊಳವನ್ನು ಲೋಕಾರ್ಪಣೆ ಮಾಡಿಸಲಾಗುವುದು ಎಂದರು.

ಅಲ್ಲದೇ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಮಕ್ಕಳ ಈಜುಕೊಳ, ಅಭ್ಯಾಸದ ಈಜುಕೊಳ, ಅಂತಾರಾಷ್ಟ್ರೀಯ ಗುಣಮಟ್ಟದ ಈಜುಕೊಳದ ಜತೆಗೆ ಇನ್ನಿತರ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುವುದು. ಇನ್ನೂ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ 5 ಕೋಟಿ ರೂ. ವೆಚ್ಚದ ಟೆನ್ನಿಸ್‌ ಅಕಾಡೆಮಿ, ತಲಾ 2 ಕೋಟಿ ರೂ. ವೆಚ್ಚದ ಅತ್ಯಾಧುನಿಕ ಜಿಮ್ನಾಸ್ಟಿಕ್‌ ಸೆಂಟರ್‌ ಹಾಗೂ ಮಹಿಳಾ ಕ್ರೀಡಾನಿಲಯಕ್ಕೆ ಹಾಗೂ ವರುಣಾ ಕೆರೆಯಲ್ಲಿ 5 ಕೋಟಿ ರೂ. ವೆಚ್ಚದ ಜಲಸಾಹಸ ಕ್ರೀಡಾ ತರಬೇತಿ ಕೇಂದ್ರದ ಕಾಮಗಾರಿಗಳಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ  ಎಂದು ತಿಳಿಸಿದರು.

ಕಲಾಮಂದಿರದ ಆವರಣದ ಕಿರುರಂಗಮಂದಿರದ ಕಾಮಗಾರಿ ಸಹ ಪೂರ್ಣಗೊಂಡಿದ್ದು, ಸಂಬಂಧಪಟ್ಟ ಇಲಾಖೆ ಅವರು ಒಪ್ಪಿದರೆ ಅದನ್ನೂ ಸಹ ಮುಖ್ಯಮಂತ್ರಿಗಳಿಂದ ಉದ್ಘಾಟನೆಗೊಳಿಸಲಾಗುವುದು ಎಂದು ಹೇಳಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್‌, ನಿರ್ಮಿತಿ ಕೇಂದ್ರದ ನಿರ್ದೇಶಕ ಮಂಜುನಾಥ್‌, ಎಂಜಿನಿಯರ್‌ಗಳಾದ ಸತೀಶ್‌, ಶಿವರಾಮೇಗೌಡ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next