ನನಗೆ ಮೈಸೂರಿನ ಚಾಮುಂಡಿ ಬೆಟ್ಟ ಹೊಸದೇನೂ ಅಲ್ಲ. ಮೈಸೂರಿಗೆ ಹೋದಾಗಲೆಲ್ಲಾ ಒಮ್ಮೆ ಚಾಮುಂಡಿ ಬೆಟ್ಟವನ್ನು ಹತ್ತಿ ದೇವಿಯ ದರ್ಶನ ಪಡೆಯುವುದು ನನ್ನ ಅಭ್ಯಾಸ. ಹಾಗಾಗಿ ಇದು ವರೆಗೆ ಸುಮಾರು ಹದಿನೈದು ಇಪ್ಪತ್ತು ಬಾರಿ ಅಲ್ಲಿಗೆ ಭೇಟಿ ನೀಡಿರಬಹುದು.
ಬೆಳಗ್ಗೆ ಚುಮು ಚುಮು ಚಳಿಯಿತ್ತು. ಅಷ್ಟೇನೂ ಜನರೂ ಇರಲಿಲ್ಲ. ದೇವಿ ದರ್ಶನ ಬಹಳ ಸುಲಭವೆನ್ನುವಂತಿತ್ತು. ಮೆಟ್ಟಿಲು ಹತ್ತಿ ದೇವಿಯ ಎದುರು ನಿಂತೆ. ಒಂದೈದು ನಿಮಿಷ ಅಲ್ಲಿಯೇ ನಿಲ್ಲೋಣ ಎನಿಸಿತು. ನಿಂತುಕೊಂಡು ದೇವಿಯನ್ನು ನೋಡ ತೊಡಗಿದೆ. ಅದ್ಭುತ ಮೂರ್ತಿ. ಅವಳಿಗೆ ಮಾಡಲಾದ ಸಿಂಗಾರ ಎಲ್ಲವನ್ನೂ ಕಂಡು ಖುಷಿ ಯಾಯಿತು. ಮೂರ್ತಿಯಲ್ಲಿನ ಕಳೆ ಬಹಳ ಆಕ ರ್ಷಣೀಯ ಎನಿಸಿತು. ಚಾಮುಂಡಿ ಎಂದರೆ ಉಗ್ರ ಸ್ವರೂಪಿ, ಅದೂ ಮಹಿಷಾಸುರನ ಕೊಂದವಳು ಬೇರೆ. ಆದರೆ, ಆ ಮೂರ್ತಿಯ ಶಾಂತತೆ ಕಂಡು ಬೆರಗಾದೆ. ಸುಮಾರು ಹತ್ತು ನಿಮಿ ಷ ಹೋದದ್ದೇ ತಿಳಿಯಲಿಲ್ಲ. ಅಷ್ಟರಲ್ಲಿ ಹಿಂದೆ ಬಂದ ಮಗುವೊಂದು ನನ್ನನ್ನು ಮುಟ್ಟಿದಾಗಲೇ ಈ ಲೋಕ ಕ್ಕೆ ಬಂದದ್ದು. ಆ ದರ್ಶನ ನನಗೆ ಕೊಟ್ಟ ಖುಷಿಗೆ ಹೋಲಿಕೆ ಇಲ್ಲ.
ಹಾಗಾದರೆ, ಅದಕ್ಕಿಂತ ಮೊದಲು ಹಲವು ಬಾರಿ ಹೋದಾಗಲೂ ಇಂಥದೊಂದು ಅನುಭವ ಯಾಕಾಗಲಿಲ್ಲ ಎನಿಸಿತು?
ಪ್ರತಿ ಬಾರಿ ಹೋದಾಗಲೂ, ದೇವಸ್ಥಾನ ದಲ್ಲಿ ಜನರು ತುಂಬಿರುತ್ತಿದ್ದರು. ನಾನೂ ಸಾಲಿನಲ್ಲಿ ನಿಂತುಕೊಳ್ಳುತ್ತಿದ್ದೆ. ಹಲವರ ಗಮನ ಎಲ್ಲೆಲ್ಲೋ ಇರುತ್ತಿತ್ತು. ಎಲ್ಲರೂ ಯಂತ್ರ ದಂತೆ ಮೆಟ್ಟಿಲು ಹತ್ತುತ್ತಿದ್ದರು, ದೇವರ ಎದುರು ನಿಲ್ಲುತ್ತಿದ್ದರು. ಪೊಲೀಸರೂ ಯಾಂತ್ರಿಕರಾಗಿ ಹೋಗಿ..ಮುಂದಕ್ಕೆ ಎನ್ನುತ್ತಿ ದ್ದರು. ಅರ್ಚಕರು ಆರತಿ ತಂದು ಕೊಟ್ಟರೂ ಮುಂದೆ ಹೋಗುವ ಭರದಲ್ಲಿ ನಮ್ಮ ದೇಹಗಳು ಚಲಿಸುತ್ತಿದ್ದವು. ನಾನೂ ಅದರಲ್ಲಿ ಒಬ್ಬ ನಾಗಿರುತ್ತಿದ್ದೆ. ದೇವರನ್ನು ನೋಡಲು ಹೋದ ನಾನು ಅದನ್ನು ಬಿಟ್ಟು ಮತ್ತೆ ಮನುಷ್ಯ ಲೋಕವನ್ನೇ ಕಂಡು ಬರುತ್ತಿದ್ದೆ,. ಈ ಬಾರಿ ಹಾಗಾಗಲಿಲ್ಲ.
ಬಹುಶಃ ನಾವು ಪ್ರತಿ ತೀರ್ಥ ಕ್ಷೇತ್ರಕ್ಕೆ ಹೋದಾಗಲೂ ಮಾಡುವುದು ಅದನ್ನೇ. ಒಂದು ಕ್ಷಣ ಶಾಂತತೆಯಿಂದ ಅಲ್ಲಿನ ಪ್ರಶಾಂತತೆ ಯನ್ನು ನಮ್ಮೊಳಗೆ ತುಂಬಿಕೊಳ್ಳಲು ಪ್ರಯತ್ನಿಸುವುದಿಲ್ಲ. ಆಗೆಲ್ಲಾ ನಾವು ಬರಿದೇ ದೇವಸ್ಥಾನವನ್ನು ಸುತ್ತಿ ಬಂದಿರುತ್ತೇವೆ; ದೇವರನ್ನು ಕಂಡು ಬರುವುದಿಲ್ಲ. ಈ ಮಾತು ನನಗೆ ಹಲವು ಬಾರಿ ಅನಿಸಿದೆ.
-ಮನಸ್ವಿನಿ,ಉಡುಪಿ