ಮೈಸೂರು: ಶಾಲೆಯ ಹೆಂಚು ತೆಗೆದು ಒಳನುಗ್ಗಿರುವ ಕಿಡಿಗೇಡಿಗಳು ಶಾಲೆಯ ಪೀಠೊಪಕರಣಗಳು, ಪಠ್ಯ ಪುಸ್ತಕಗಳು ಹಾಗೂ ವಿದ್ಯುತ್ ಉಪಕರಣಗಳನ್ನು ಧ್ವಂಸಗೊಳಿಸಿರುವ ಘಟನೆ ನಗರದ ಚಾಮುಂಡಿಬೆಟ್ಟದಲ್ಲಿ ನಡೆದಿದೆ.
ಚಾಮುಂಡಿಬೆಟ್ಟದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದ್ದು, ಶಾಲೆಯ ಛಾವಣಿಯ ಹೆಂಚು ತೆಗೆದು ಒಳಗೆ ಪ್ರವೇಶಿಸಿರುವ ಕಳ್ಳರು ಪಠ್ಯಪುಸ್ತಕವನ್ನು ಚೆಲ್ಲಾಪಿಲಿಗೊಳಿಸಿ, ಪಿಠೊಪರಕಣಗಳನ್ನು ಧ್ವಂಸ ಮಾಡಿದ್ದಾರೆ. ಅಲ್ಲದೆ ಶಾಲಾ ಕೊಠಡಿಯಲ್ಲಿದ್ದ ವಿವಿಧ ವಿದ್ಯುತ್ ಉಪಕರಣಗಳನ್ನು ಹಾಲು ಮಾಡಿ, ಕೆಲವು ವಸ್ತುಗಳನ್ನು ಕಳವು ಮಾಡಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ 2.5 ಲಕ್ಷ ರೂ.ಗಳಿಗೂ ಹೆಚ್ಚು ಮೌಲ್ಯದ ವಸ್ತುಗಳು ನಾಶವಾಗಿರುವ ಬಗ್ಗೆ ಅಂದಾಜಿಸಲಾಗಿದ್ದು, ಗುರುವಾರ ಬೆಳಗ್ಗೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾದ ಶಿಕ್ಷಕರು ಶಾಲೆಯ ಬಾಗಿಲು ತೆಗೆದಾದ ಘಟನೆ ಬೆಳಕಿಗೆ ಬಂದಿದೆ.
ಬೀದಿಯಲ್ಲಿ ತರಗತಿ: ಶಾಲೆಯಲ್ಲಿ ಕಳುವಾದ ಹಿನ್ನೆಲೆಯಲ್ಲಿ ಶಾಲೆಯ ಮೈದಾನದಲ್ಲಿ ಗುರುವಾರ ತರಗತಿಗಳು ನಡೆಯಿತು. ಘಟನೆಯಿಂದಾಗಿ ಮಕ್ಕಳು ಹಾಗೂ ಶಿಕ್ಷಕರು ಶಾಲೆಯೊಳಗೆ ಹೋಗಲು ಸಾಧ್ಯವಾಗದ ಕಾರಣ ಮಕ್ಕಳಿಗೆ ತರಗತಿಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶಿಕ್ಷಕರು ಶಾಲೆಯ ಮೈದಾನದಲ್ಲಿ ಪಾಠ ಪ್ರವಚನ ನಡೆಸಿದರು.
ಘಟನೆಯ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಸಿಆರ್‌ಪಿ ಉಷಾ ನಂದಿನಿ, ಬಿಆರ್‌ಪಿಗಳಾದ ಶಶಿರಾಜ್ ಹಾಗೂ ಬಸವರಾಜ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಘಟನೆಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಕರು ನೀಡಿದ ದೂರಿನ ಮೇರೆಗೆ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಲೆಯಲ್ಲಿ 48 ಮಕ್ಕಳು: ಚಾಮುಂಡಿಬೆಟ್ಟದಲ್ಲಿರುವ ಸರ್ಕಾರಿ ಶಾಲೆ 1957ರಲ್ಲಿ ಆರಂಭವಾಗಿದ್ದು, 1-7ನೇ ತರಗತಿಯವರೆಗಿನ ಈ ಶಾಲೆಯಲ್ಲಿ 37 ಬಾಲಕಿಯರು ಹಾಗೂ 11 ಬಾಲಕರು ಸೇರಿದಂತೆ ಒಟ್ಟು 48 ವಿದ್ಯಾರ್ಥಿಗಳಿದ್ದಾರೆ. ಇಬ್ಬರು ಶಿಕ್ಷಕರು ಶಾಲೆಯಲ್ಲಿದ್ದು, ಒಬ್ಬರು ಅತಿಥಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೇ ಶಾಲೆಯಲ್ಲಿ ಕಳೆದ ಎರಡು ವರ್ಷದಲ್ಲಿ ಎರಡನೇ ಬಾರಿ ಕಳ್ಳತನವಾಗಿದ್ದು, ಇದರಿಂದ ಶಾಲಾ ಶಿಕ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ.