ಮೈಸೂರು: ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ನಾಮಪತ್ರ ಸಲ್ಲಿಕೆಗೂ ಮುನ್ನ ಪತ್ನಿ ಹಾಗೂ ಪಕ್ಷದ ಮುಖಂಡರೊಂದಿಗೆ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು, ನಾಮಪತ್ರದ ಸೆಟ್‌ಗಳಿಗೆ ಪೂಜೆ ಮಾಡಿಸಿದರು.
ಈ ವೇಳೆ ಮಾತನಾಡಿದ ವಿಜಯಶಂಕರ್, ದುಷ್ಟ ಶಕ್ತಿಗಳ ನಾಶ ಮಾಡುವ ನಾಡದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದು ಚುನಾವಣೆಯ ನಾಮಪತ್ರ ಸಲ್ಲಿಸಿದ್ದೇನೆ. ಮುಂದಿನ ದಿನಗಳಲ್ಲಿ ಜೆಡಿಎಸ್ ನಾಯಕರ ಸಹಕಾರವನ್ನೂ ಪಡೆಯುತ್ತೇನೆ ಎಂದರು.
ಬಳಿಕ ಅರಮನೆ ಆವರಣದಲ್ಲಿ ವಿನಾಯಕ ದೇವಸ್ಥಾನ ಹಾಗೂ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅಪಾರ ಬೆಂಬಲಿಗರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಂದಿಗೆ ತೆರೆದ ವಾಹನದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾ ಚುನಾವಣಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ತನ್ವೀರ್ ಸೇಠ್, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಕೆ.ವೆಂಕಟೇಶ್, ವಾಸು, ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮೊದಲಾದವರಿದ್ದರು.
ತೆರೆದ ವಾಹನದಲ್ಲಿ ಪಕ್ಷದ ಅಭ್ಯರ್ಥಿ ವಿಜಯಶಂಕರ್ ಜೊತೆಗೆ ಸ್ವಲ್ಪ ದೂರ ಮೆರವಣಿಗೆಯಲ್ಲಿ ತೆರಳಿದ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರು ಬಳಿಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ ಹೆಲಿಕಾಪ್ಟರ್‌ನಲ್ಲಿ ಚಿತ್ರದುರ್ಗಕ್ಕೆ ಹೊರಟರು.