Advertisement

Champions Trophy: ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

11:15 AM Sep 15, 2024 | Team Udayavani |

ಮುಂಬೈ: ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿ (Champions Trophy) ಕ್ರೀಡಾಕೂಟ ಆಯೋಜನೆಗೆ ಪಾಕಿಸ್ತಾನ (Cricket Pakistan) ಸಿದ್ದತೆ ಮಾಡಿಕೊಳ್ಳುತ್ತಿದೆ. ಆದರೆ ಪ್ರಮುಖ ದೇಶವಾದ ಭಾರತವು ಈ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಇನ್ನೂ ನಿರ್ಧಾರವಾಗಿಲ್ಲ. ಬಿಸಿಸಿಐ (BCCI) ಇದುವರೆಗೆ ಯಾವುದೇ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ.

Advertisement

ಕಳೆದೊಂದು ದಶಕದಿಂದ ಭಾರತ ಮತ್ತು ಪಾಕಿಸ್ತಾನ ಪರಸ್ಪರರ ವಿರುದ್ಧ ಒಂದೇ ಒಂದು ದ್ವಿಪಕ್ಷೀಯ ಸರಣಿಯಲ್ಲಿ ಭಾಗವಹಿಸಿಲ್ಲ. ಆದರೆ 2023ರ ಏಕದಿನ ವಿಶ್ವಕಪ್‌ ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಭಾರತಕ್ಕೆ ಬಂದಿತ್ತು. ಆದರೆ ಭಾರತವು ಇದುವರೆಗೂ ಪಾಕಿಸ್ತಾನಕ್ಕೆ ಹೋಗುವ ಬಗ್ಗೆ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ.

ಅತ್ಯಂತ ನಿರೀಕ್ಷಿತ ಚಾಂಪಿಯನ್ಸ್‌ ಟ್ರೋಫಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯಬಹುದು ಎಂದು ಕೆಲವು ವರದಿಗಳು ಬಂದಿವೆ. ಆದರೆ ಈ ಬಗ್ಗೆ ಐಸಿಸಿ ಯಾವುದೇ ಅಧಿಕೃತ ಪ್ರಕಟಣೆಯನ್ನು ಮಾಡಿಲ್ಲ. ಇದೇ ವೇಳೆ ಮಾತನಾಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಯಿನ್ ಖಾನ್ (Moin Khan) ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕ್ರಿಕೆಟ್‌ ಪಾಕಿಸ್ತಾನಕ್ಕೆ ನೀಡಿದ ಸಂದರ್ಶನದ ವೇಳೆ ಮೊಯಿನ್‌ ಖಾನ್‌ ಅವರು, “ಭಾರತವು ಐಸಿಸಿ ಬದ್ಧತೆಗಳನ್ನು ಗೌರವಿಸಬೇಕು. ಒಂದು ವೇಳೆ ಅದು ಆಗದಿದ್ದರೆ, ಮುಂದಿನ ದಿನಗಳಲ್ಲಿ ಭಾರತದಲ್ಲಿ ನಡೆಯಲಿರುವ ಪಂದ್ಯಾವಳಿಗಳಲ್ಲಿ ಭಾಗವಹಿಸದೇ ಇರುವ ನಿಲುವು ತೆಗೆದುಕೊಳ್ಳುವುದನ್ನು ಪಾಕಿಸ್ತಾನ ಪರಿಗಣಿಸಬೇಕು” ಎಂದರು.

Advertisement

“ನನ್ನ ದೃಷ್ಟಿಯಲ್ಲಿ, ಭಾರತೀಯ ಕ್ರಿಕೆಟ್ ದಿಗ್ಗಜರು ರಾಜಕೀಯದಿಂದ ಕ್ರೀಡೆಯನ್ನು ಪ್ರತ್ಯೇಕಿಸಲು ಬಿಸಿಸಿಐಗೆ ಸಲಹೆ ನೀಡಬೇಕು. ಪ್ರಪಂಚದಾದ್ಯಂತದ ಅಭಿಮಾನಿಗಳು ಭಾರತ ಮತ್ತು ಪಾಕಿಸ್ತಾನವನ್ನು ಆಡಬೇಕೆಂದು ಬಯಸುತ್ತಾರೆ, ಇದು ಪಾಕಿಸ್ತಾನಕ್ಕೆ ಮಾತ್ರವಲ್ಲದೆ ಇಡೀ ಕ್ರೀಡೆಗೆ ಪ್ರಯೋಜನವನ್ನು ನೀಡುತ್ತದೆ” ಎಂದು ಮೊಯಿನ್‌ ಹೇಳಿದರು.

ಈ ಹಿಂದೆ ಜೀ ನ್ಯೂಸ್‌ ಗೆ ನೀಡಿದ್ದ ಸಂದರ್ಶನದಲ್ಲಿ ಮಾಜಿ ಪಾಕ್‌ ಸ್ಪಿನ್ನರ್‌ ದಾನಿಶ್‌ ಕನೇರಿಯಾ ಅವರು, ಭಾರತ ತಂಡವು ಪಾಕಿಸ್ತಾನಕ್ಕೆ ಭೇಟಿ ನೀಡಬಾರದು ಎಂದು ಹೇಳಿದ್ದರು. ಪಾಕಿಸ್ತಾನದಲ್ಲಿ ಭಾರತ ತಂಡಕ್ಕೆ ಭದ್ರತಾ ತೊಡಕು ಉಂಟಾಗಬಹುದು ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next