“ಚಾಂಪಿಯನ್” ಹೀಗೊಂದು ಹೆಸರಿನ ಚಿತ್ರ ಕೋವಿಡ್ ಪೂರ್ವ ಕಾಲದಲ್ಲೇ ಸೆಟ್ ಏರಿ ಸದ್ದಿದಲ್ಲದೇ ತನ್ನ ಶೂಟಿಂಗ್ ಕೆಲಸಗಳನ್ನು ಸಂಪೂರ್ಣಗೊಳಿಸಿದೆ.
“ಶಿವಂ ಪ್ರೊಡಕ್ಷನ್’ನ ಬ್ಯಾನರ್‌ನಲ್ಲಿ ಸಿದ್ಧವಾಗಿರುವ “ಚಾಂಪಿಯನ್’ ಚಿತ್ರ ತಂಡ ಇತ್ತೀಚಿಗೆ ನಗರದ ಕಲಾವಿದರ ಸಂಘದ ವೇದಿಕೆಯಲ್ಲಿ ತನ್ನ ಚಿತ್ರದ ಮೊದಲ ಝಲಕ್ ಟೀಸರ್ ಅನ್ನು ಬಿಡುಗಡೆಗೊಳಿಸಿತು.
ಪರಮ ವೀರಚಕ್ರ ಪುರಸ್ಕೃತ ಯೋಗೇಂದ್ರ ಸಿಂಗ್ ಯಾದವ್ ಹಾಗೂ ಮಹಾವೀರಚಕ್ರ ಪುರಸ್ಕೃತ ಪಿ.ಎಸ್ ಗಣಪತಿ “ಚಾಂಪಿಯನ್” ಚಿತ್ರದ ಟೀಸರ್ ಬಿಡುಗಡೆಗೊಳಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.
ಚಿತ್ರದ ನಿರ್ಮಾಪಕ ಶಿವಾನಂದ್ ಎಸ್ ನೀಲಣ್ಣನವರ್ ಮಾತನಾಡಿ, “ನಾನು ಹಾಗೂ ನನ್ನ ಗೆಳೆಯ ಸಚಿನ್ ಆರ್ಮಿ ಹಿನ್ನಲೆಯಿಂದ ಬಂದವರು ಹಾಗಾಗಿ ಕ್ರೀಡಾ ಕಥಾ ವಸ್ತುವನ್ನು ಆಧರಿಸಿದ ಚಿತ್ರವನ್ನು ನಿರ್ಮಿಸಿದ್ದೇನೆ. ಛಲದ ಜೊತೆ ಕಾಮಿಡಿ, ಎಮೋಷನ್ಸ್, ಸ್ಫೂರ್ತಿ ಎಲ್ಲವೂ ಚಿತ್ರದಲ್ಲಿದೆ. ಚಿತ್ರ ಸ್ಪೂರ್ತಿದಾಯಕವಾಗಿದ್ದು, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಏನನ್ನಾದರೂ ಸಾಧಿಸುವ ಛಲ ಈ ಚಿತ್ರ ನೀಡಲಿದೆ’ ಎಂದರು. ಇದೇ ಸಂದರ್ಭದಲ್ಲಿ ತಮ್ಮನ್ನು ಅಗಲಿರುವ ಚಿತ್ರದ ನಿರ್ದೇಶಕ ಶಾಹುರಾಜ ಸಿಂಧೆ ಅವರನ್ನು ನೆನೆದು ಭಾವುಕರಾದರು.
ಚಿತ್ರದ ಸಂಭಾಷಣೆಕಾರ ರಘು ನಿಡುವಳ್ಳಿ , “ಚಿತ್ರದ ಹೆಸರೇ ಹೇಳುವಂತೆ ಮಲೆನಾಡಿನ ಒಬ್ಬ ಸಾಮಾನ್ಯ ಹುಡುಗ ಕ್ರೀಡೆಯಲ್ಲಿ ರಾಷ್ಟ್ರಮಟ್ಟದ ಚಾಂಪಿಯನ್ ಆಗಿ ಹೊರಹೊಮ್ಮುವ ದಾರಿಯೇ ಚಾಂಪಿಯನ್. ಇದೊಂದು ಫ್ಯಾಮಿಲಿ ಎಂಟಟೈìನ್ಮೆಂಟ್ ಹಾಗೂ ಕರ್ಮಷಿಯಲ್ ಚಿತ್ರ’ ಎಂದು ತಿಳಿಸಿದರು. ಟೀಸರ್‌ನಲ್ಲಿ ಹೊಸ ನಾಯಕ ಸಚಿನ್ ಧನ್‌ಪಾಲ್ ಫಿಟ್ ಆ್ಯಂಡ್ ಫೈನಾಗಿ ಕಾಣಿಸಿಕೊಂಡಿದ್ದು, ಕ್ರೀಡಾಪಟುವಿನ ಸಿದ್ಧತೆಯ ಝಲಕ್ ಟೀಸರ್‌ನಲ್ಲಿ ಮೂಡಿಬಂದಿದೆ. ಚಿ
ತ್ರವನ್ನು “ಸ್ನೇಹಾನಾ.. ಪ್ರೀತಿನಾ’ ಖ್ಯಾತಿಯ ಶಾಹುರಾಜ ಸಿಂಧೆ ನಿರ್ದೇಶಿಸಿದ್ದಾರೆ. ಶಿವಂ ಪ್ರೊಡಕ್ಷನ್ ನಿರ್ಮಾಣ, ಸರವಣನ್ ನಟರಾಜನ್ ಛಾಯಾಗ್ರಹಣ, ರಘು ನಿಡುವಳ್ಳಿ ಸಂಭಾಷಣೆ, ಅಜನೀಶ್ ಲೋಕ್‌ನಾಥ್ ಸಂಗೀತ ಸಂಯೋಜನೆ, ಇಮ್ರಾನ್ ಸರ್ದಾರಿಯ ನೃತ್ಯ ಸಂಯೋಜನೆ ಚಿತ್ರಕ್ಕಿದೆ.
ಚಿತ್ರದ ಆಡಿಯೋ ಹಕ್ಕನ್ನು “ಲಹರಿ ಆಡಿಯೋಸ್’ ಪಡೆದಿದೆ. ಕಾರ್ಯಕ್ರಮದಲ್ಲಿ, ನಾಯಕ ಸಚಿನ್ ಧನ್‌ಪಾಲ್, ಲಹರಿ ವೇಲು, ಭರತ್ ಗೌಡ, ನಿರ್ದೇಶಕ ಶಾಹುರಾಜ ಸಿಂಧೆ ಪತ್ನಿ ಶಿಲ್ಪಾ ಹಾಗೂ ಭಾರತೀಯ ಸೇನೆಯ ಅನೇಕ ಯೋಧರು ಉಪಸ್ಥಿತರಿದ್ದರು. ಚಿತ್ರದಲ್ಲಿ ನಾಯಕಿಯಾಗಿ ಅದಿತಿ ಪ್ರಭುದೇವ, ದೇವರಾಜ್, ರಂಗಾಯಣ ರಘು, ಮಂಡ್ಯ ರಮೇಶ್, ಅವಿನಾಶ್, ಚಿಕ್ಕಣ್ಣ ತಾರಾ ಬಳಗದಲ್ಲಿದ್ದಾರೆ.