ಸಿಡ್ನಿ: ಆಸ್ಟ್ರೇಲಿಯಾದ ಜಾವೆಲಿನ್ ಚಾಂಪಿಯನ್ ಜರೋಡ್ ಬ್ಯಾನಿಸ್ಟರ್ ಹಾಲೆಂಡಿನಲ್ಲಿ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾರೆ. ಜಾವೆಲಿನ್ ತ್ರೋನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ 33ರ ಹರೆಯದ ಜರೋಡ್ 2010 ದಿಲ್ಲಿ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದರು.
ಯುರೋಪಿನಲ್ಲಿ ತನ್ನ ಗೆಳತಿಯೊಂದಿಗೆ ವಾಸವಿದ್ದ ಜರೋಡ್ ಅವರ ಸಾವಿಗೆ ಕಾರಣವೇನೆಂದು ತಿಳಿದುಬಂದಿಲ್ಲ. ಜಾವೆಲಿನ್ ಎಸೆತದಲ್ಲಿ ಉತ್ತಮ ಸಾಧನೆ ಮೆರೆದಿರುವ ಬ್ಯಾನಿಸ್ಟರ್ ದಕ್ಷಿಣ ಕೊರಿಯಾ, ಬೀಜಿಂಗ್ ಒಲಿಂಪಿಕ್ಸ್‌ನ ಫೈನಲ್‌ನಲ್ಲಿ ಸ್ಪರ್ಧಿಸಿದ್ದರು. ಆಸ್ಟ್ರೇಲಿಯಾದ್ಯಂತ ಜನಪ್ರಿಯರಾಗಿದ್ದ ಬ್ಯಾನಿಸ್ಟರ್ ಅವರ ಸಾವು ಅಲ್ಲಿನ ಕ್ರೀಡಾ ವಲಯದಲ್ಲಿ ಅಘಾತವನ್ನು ಮಾಡಿದೆ.
ಜರೋಡ್ ಸಾವಿಗೆ ಶೋಕ ವ್ಯಕ್ತಪಡಿಸಿರುವ ಒಲಿಂಪಿಕ್ ಚಾಂಪಿಯನ್ ಹಡ್ಲìರ್ ಸ್ಯಾಲಿ ಪಿಯರ್‌ಸನ್, “ಬ್ಯಾನಿಸ್ಟರ್‌ನಂತ ಪ್ರತಿಭಾನ್ವಿತ ಕ್ರೀಡಾಪಟುವನ್ನು ಕಳೆದುಕೊಂಡಿರುವುದಕ್ಕೆ ದುಃಖವಾಗಿದೆ’ ಎಂದಿದ್ದಾರೆ.
2013ರಲ್ಲಿ ಬ್ಯಾನಿಸ್ಟರ್ ಉದ್ದೀಪನ ಮದ್ದು ಪರೀಕ್ಷೆಯನ್ನು ತಪ್ಪಿಸಿದ ಕಾರಣಕ್ಕಾಗಿ 20 ತಿಂಗಳ ನಿಷೇಧಕ್ಕೆ ಒಳಗಾಗಿದ್ದರು. 18 ತಿಂಗಳ ಅವಧಿಯಲ್ಲಿ ಒಟ್ಟು ಮೂರು ಉದ್ದೀಪನ ಪರೀಕ್ಷೆಗಳನ್ನು ತಪ್ಪಿಸಿದ ಕಾರಣ ಪರೀಕ್ಷೆಯನ್ನು ಸಕಾರಾತ್ಮಕವೆಂದು ಪರಿಗಣಿಸಿ ಜರೋಡ್‌ಗೆ ನಿಷೇಧ ಹೇರಲಾಗಿತ್ತು. ಆದರೆ ಇತ್ತೀಚೆಗೆ ಬ್ಯಾನಿಸ್ಟರ್ ವೃತ್ತಿ ಜೀವನವನ್ನು ಪುನರಾರಂಭಿಸುವ ನಿಟ್ಟಿನಲ್ಲಿ ಗಂಭೀರವಾಗಿ ತರಬೇತಿಯಲ್ಲಿ ತೊಡಗಿದ್ದರು.
2008ರಲ್ಲಿ ಬ್ರಿಸ್ಬೇನ್ ರಾಷ್ಟ್ರೀಯ ಕ್ರೀಡಾಕೂಟದ ಜಾವೆಲಿನ್ ಸ್ಪರ್ಧೆಯಲ್ಲಿ 89.02 ಮೀಟರ್ ದೂರ ಎಸೆದು ಬ್ಯಾನಿಸ್ಟರ್ ವೈಯಕ್ತಿಕ ದಾಖಲೆ ನಿರ್ಮಿಸಿದ್ದರು.