ಡೆಹ್ರಾಡೂನ್: ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಗುರುವಾರ (ಏಪ್ರಿಲ್ 21) ಬಿಜೆಪಿ ಶಾಸಕ ಕೈಲಾಶ್ ಚಂದ್ರ ಗಟೋರಿ ಚಂಪಾವತ್ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಔತಣಕೂಟದಿಂದ ಬರುತ್ತಿದ್ದವರ ಕಾರು ಪಲ್ಟಿ; ಮಹಿಳೆ ಸಾವು, ಮಗು ಸೇರಿ 8 ಮಂದಿಗೆ ಗಂಭೀರ ಗಾಯ
ಕೈಲಾಶ್ ಚಂದ್ರ ಅವರು ಯಮುನಾ ಕಾಲೋನಿಯಲ್ಲಿರುವ ಉತ್ತರಾಖಂಡ್ ವಿಧಾನಸಭಾ ಸ್ಪೀಕರ್ ರಿತು ಖಾಂಡುರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿರುವುದಾಗಿ ಬಿಜೆಪಿ ಮೂಲಗಳು ಹೇಳಿವೆ.
ಸ್ಪೀಕರ್ ರಿತು ಅವರಿಗೆ ಕೈಲಾಶ್ ಚಂದ್ರ ರಾಜೀನಾಮೆ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮದನ್ ಕೌಶಿಕ್, ಸಚಿವರುಗಳಾದ ಚಂದನ್ ರಾಮ್ ದಾಸ್, ಸುಭಾಶ್ ಬಹುಗುಣಾ ಮತ್ತು ಶಾಸಕ ಖಾಜನ್ ದಾಸ್ ಹಾಜರಿದ್ದರು. ಕೈಲಾಶ್ ಚಂದ್ರ ರಾಜೀನಾಮೆ ಸ್ವೀಕರಿಸಿರುವುದಾಗಿ ರಿತು ಖಾಂಡುರಿ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಉತ್ತರಾಖಂಡ್ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಜಯ ಸಾಧಿಸಿ ಅಧಿಕಾರದ ಗದ್ದುಗೆ ಏರಿತ್ತು. ಆದರೆ ಸಿಎಂ ಪುಷ್ಕರ್ ಧಾಮಿ ಖಾಟಿಮಾ ಕ್ಷೇತ್ರದಲ್ಲಿ ಪರಾಜಯಗೊಂಡಿದ್ದು, ಪ್ರತಿಸ್ಪರ್ಧಿ ಕಾಂಗ್ರೆಸ್ ನ ಭುವನ್ ಚಂದ್ರ ಕಾಪ್ರಿ ಜಯಗಳಿಸಿದ್ದರು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಧಾಮಿ ಅವರು ಆರು ತಿಂಗಳೊಳಗೆ ವಿಧಾನಸಭೆಗೆ ಆಯ್ಕೆಯಾಗಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೈಲಾಶ್ ಚಂದ್ರ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಧಾಮಿ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.