ರಾಂಚಿ: ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಹೇಮಂತ್ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ ಎರಡು ದಿನಗಳ ನಂತರ ಶುಕ್ರವಾರ (ಫೆ.02) ಚಂಪೈ ಸೊರೇನ್ ಜಾರ್ಖಂಡ್ ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಇದನ್ನೂ ಓದಿ:INDvsENG; ಟೀಂ ಇಂಡಿಯಾದಿಂದ ಹೊರಬಿದ್ದ ಸಿರಾಜ್: ಕಾರಣ ತಿಳಿಸಿದ ಬಿಸಿಸಿಐ
ಮುಂದಿನ 10 ದಿನದೊಳಗೆ ಚಂಪೈ ಸೊರೇನ್ ಸದನದಲ್ಲಿ ಬಹುಮತ ಸಾಬೀತುಪಡಿಸಬೇಕಾಗಿದೆ. ಸೊರೇನ್ ಗೆ (67ವರ್ಷ) ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾದ 43 ಸದಸ್ಯರು ಹಾಗೂ ಕಾಂಗ್ರೆಸ್, ರಾಷ್ಟ್ರೀಯ ಜನತಾ ದಳದ ಶಾಸಕರು ಬೆಂಬಲ ನೀಡಿದ್ದಾರೆ.
ಚಂಪೈ ಸೊರೇನ್ ಪ್ರಮಾಣವಚನ ಸ್ವೀಕರಿಸುವ ಮೂಲಕ ಜಾರ್ಖಂಡ್ ನಲ್ಲಿ ಕಳೆದ ಎರಡು ದಿನಗಳಿಂದ ತಲೆದೋರಿದ್ದ ರಾಜಕೀಯ ಬಿಕ್ಕಟ್ಟು ಕೊನೆಗೊಂಡಂತಾಗಿದೆ ಎಂದು ವರದಿ ತಿಳಿಸಿದೆ. ಹೇಮಂತ್ ಸೊರೇನ್ ಸರ್ಕಾರದಲ್ಲಿ ಚಂಪೈ ಸಾರಿಗೆ ಸಚಿವರಾಗಿದ್ದರು. ಇವರು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಬುಧವಾರ ತಡರಾತ್ರಿ ಚಂಪೈ ಅವರನ್ನು ಜಾರ್ಖಂಡ್ ಮುಕ್ತಿ ಮೋರ್ಚಾದ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು.
ರಾಜ್ಯದಲ್ಲಿ ಕಳೆದ 18ಗಂಟೆಗಳಿಂದ ಸರ್ಕಾರವೇ ಇಲ್ಲದಂತಾಗಿದೆ. ಇದೊಂದು ಗೊಂದಲಮಯ ಸನ್ನಿವೇಶವಾಗಿದೆ. ಕೂಡಲೇ ಪ್ರಮಾಣವಚನ ಸ್ವೀಕರಿಸಿ ರಾಜ್ಯದಲ್ಲಿ ಸರ್ಕಾರ ರಚಿಸಬೇಕೆಂಬ ನಿರೀಕ್ಷೆ ನನ್ನದಾಗಿದೆ ಎಂದು ರಾಜ್ಯಪಾಲ ರಾಧಾಕೃಷ್ಣನ್ ಅವರು ಚಂಪೈಗೆ ರವಾನಿಸಿದ ಪತ್ರದಲ್ಲಿ ತಿಳಿಸಿದ್ದರು.