Advertisement
ಹಿಂದೆ ಕೋಟದಲ್ಲಿ ಮಳೆಗಾಲ ಮುಕ್ತಾ ಯಗೊಂಡು ಕೃಷಿ ಕಾರ್ಯ ಆರಂಭವಾದಾಗ (ಅಕ್ಟೋಬರ್ ಮೊದಲ ವಾರದಲ್ಲಿ) ಕೋಣಗಳ ಪೈರು ಆರಂಭಗೊಳ್ಳುತಿತ್ತು. ಮಹಾರಾಷ್ಟ್ರದ ಫಂಡರಾಪುರ, ಹೊಳೆ ಸಾಲು, ಬೈಲುಹೊಂಗಲ, ಅಕ್ಕಿ ಆಲೂರು ಗಳಿಂದ ತಂದ ಕೋಣಗಳನ್ನು ಇಲ್ಲಿ ಮಾರಾಟ ಮಾಡಲಾ ಗುತ್ತಿತ್ತು. ಆದರೆ ಕೋಣಗಳಿಗೆ ಬೇಡಿಕೆ ಕುಸಿದಿದ್ದರಿಂದ ಈ ಬಾರಿ ಇದುವರೆಗೆ ಪೈರು ಆರಂಭಗೊಂಡಿಲ್ಲ.
ಈ ಪೈರಿಗೆ ಮೂರು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಜಿಲ್ಲೆಯ ಏಕೈಕ ಅತಿ ದೊಡ್ಡ ಕೋಣಗಳ ಜಾತ್ರೆ ಇದಾಗಿದೆ. ಕೋಟ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಕೋಣಗಳ ಜಾತ್ರೆ ಹಿಂದೆ ನಡೆಯುತಿತ್ತು. ಐದಾರು ಮಂದಿ ವ್ಯಾಪಾರಿಗಳು ಕೋಣ ತಂದು ವ್ಯಾಪಾರ ನಡೆಸುತ್ತಿದ್ದರು. ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಮುಂತಾದ ಕಡೆಗಳಿಂದ ಕೃಷಿಕರು ಕೋಣ ಖರೀದಿಗೆ ಇಲ್ಲಿಗೆ ಆಗಮಿಸುತ್ತಿದ್ದರು. ಇಲ್ಲಿನ ಕೋಣಗಳು ಕೃಷಿ ಕಾರ್ಯ ಹಾಗೂ ಕಂಬಳದ ಓಟಕ್ಕೆ ಹೆಚ್ಚು ಸೂಕ್ತ ಎನ್ನುವ ನಂಬಿಕೆ ಇತ್ತು.
Related Articles
ಗದ್ದೆ ಉಳುಮೆಗೆ ಯಂತ್ರಗಳನ್ನು ಬಳಸುವುದರಿಂದ ಕೋಣಗಳು ಕೇವಲ ಶೇಂಗಾ ಬಿತ್ತನೆ ಮುಂತಾದ ಬೆರಳೆಣಿಕೆಯ ಕೃಷಿ ಚಟುವಟಿಕೆಗೆ ಹಾಗೂ ಕಂಬಳಕ್ಕೆ ಮಾತ್ರ ಸೀಮಿತವಾಗಿದೆ. ಹೀಗಾಗಿ ವರ್ಷದಲ್ಲಿ ಸಾವಿರಾರು ಮಾರಾಟವಾಗುತ್ತಿದ್ದ ಕೋಣಗಳು ನೂರಾರು ಸಂಖ್ಯೆಗೆ ಇಳಿದಿದೆ. ಓಟಕ್ಕೆ ಕೋಣಗಳನ್ನು ಆರಿಸುವಾಗ ಸಾಕಷ್ಟು ಅಳೆದು-ತೂಗಿ ಆಯ್ಕೆ ಮಾಡುವುದರಿಂದ ಕೋಣಗಳು ಮಾರಾಟವಾಗದೆ ಹಾಗೇ ಉಳಿಯುತಿತ್ತು.
Advertisement
ವರ್ಷದಲ್ಲಿ ಕನಿಷ್ಠ 400ಕ್ಕಿಂತ ಕಡಿಮೆ ಕೋಣ ಮಾರಾಟವಾದರೆ ವ್ಯಾಪಾರಿಗಳಿಗೆ ನಷ್ಟವಾಗುತಿತ್ತು.ಸೌಕರ್ಯ ನೀಡಿದರೂ ನಡೆಸಲಾಗುತ್ತಿಲ್ಲ ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡ ಪರಿಣಾಮ ಸ್ಥಳಾವಕಾಶವಿಲ್ಲದೆ ಹೋರಿ ಪೈರು ನಿಲ್ಲುವ ಹಂತಕ್ಕೆ ಬಂದಿತ್ತು ಅನಂತರ ಎ.ಪಿ.ಎಂ. ಜಾಗದಲ್ಲಿ ಸ್ಥಳಾವಕಾಶ ನೀಡಿದ್ದರು. ಮೂಲಸೌಕರ್ಯಗಳಿಲ್ಲದೆ ವ್ಯಾಪಾರಿಗಳು ಹಿಂದೇಟು ಹಾಕಿದಾಗ ಸ್ಥಳೀಯ ಕೋಟ ಗ್ರಾ.ಪಂ. ಪೈರಿಗೆ ಬೇಕಾದ ಎಲ್ಲ ವ್ಯವಸ್ಥೆ ನೀಡಿತ್ತು. ಇದೀಗ ಎ.ಪಿ.ಎಂ.ಸಿ. ವತಿಯಿಂದ ಅಗತ್ಯ ಸಹಕಾರದ ಭರವಸೆ ನೀಡಿದೆ. ಮರೆಯಾಗುವುದೇ ಸಾಂಸ್ಕೃತಿಕ ನಂಟು ?
ಕೋಣಗಳ ಪೈರು ಇಲ್ಲಿನ ಸಾಂಸ್ಕೃತಿಕ ನಂಟಾಗಿ ಬೆಳೆದು ಬಂದಿದೆ. ಇಲ್ಲಿನ ವ್ಯವಹಾರಗಳು ನಂಬಿಕೆಯ ಆಧಾರದಲ್ಲಿ ನಡೆಯುತಿತ್ತು. ಹಿಂದೆ ರೈತರ ಕೈಯಲ್ಲಿ ಕೋಣ ಖರೀದಿಗೆ ಹಣವಿರುತ್ತಿರಲಿಲ್ಲ. ಆದರೂ ಇಲ್ಲಿನ ವ್ಯಾಪಾರಸ್ಥರು ಚಿಕ್ಕ ಮೊತ್ತದ ಮುಂಗಡ ಪಡೆದು ಕೋಣಗಳನ್ನು ನೀಡುತ್ತಿದ್ದರು. ಮುಂಗಾರು ಫಸಲು ಮಾರಾಟವಾದ ಮೇಲೆ ನಾಲ್ಕೈದು ತಿಂಗಳ ಅನಂತರ ಹಣವನ್ನು ವ್ಯಾಪಾರಿಗಳಿಗೆ ನೀಡಲಾಗುತಿತ್ತು. ಖರೀದಿ ಮಾಡಿದ ಕೋಣದಲ್ಲಿ ಯಾವುದೇ ದೋಷವಿದ್ದರು ಅದನ್ನು ವಾಪಾಸು ನೀಡುವ ಕ್ರಮವಿತ್ತು. ಪೈರಿನ ಯಜಮಾನ ಹಾಗೂ ರೈತನ ನಡುವೆ ಸಮನ್ವಯಕಾರನಾಗಿ ವ್ಯಾಪಾರ ಕುದುರಿಸುವ ಮಧ್ಯವರ್ತಿಯ ವ್ಯಾಪಾರ ಕ್ರಮ ಅತ್ಯಂತ ಸ್ವಾರಸ್ಯಕರವಾಗಿರುತಿತ್ತು. ಬೇಡಿಕೆ ಇಲ್ಲದಿರುವುದರಿಂದ ಸ್ಥಗಿತ
ಹಿಂದೆ ನಾಲ್ಕು ತಿಂಗಳಲ್ಲಿ 1ಸಾವಿರಕ್ಕೂ ಹೆಚ್ಚು ಕೋಣ ಮಾರಾಟವಾಗುತಿತ್ತು. ಕಳೆದ ವರ್ಷ 200-300ಕೋಣ ಮಾರಾಟವಾಗಿ ನಷ್ಟವಾಗಿತ್ತು. ಪ್ರತಿ ವರ್ಷ ರೈತರು, ಕಂಬಳದ ಯಜಮಾನರು ಕೋಣಗಳಿಗೆ ಮುಂಗಡ ಬುಕ್ಕಿಂಗ್ ಮಾಡುತ್ತಾರೆ. ಆದರೆ ಈ ಬಾರಿ ಬೆರಳೆಣಿಕೆಯ ಸಂಖ್ಯೆಯಲ್ಲಿ ಬೇಡಿಕೆ ಬಂದಿದೆ. ಹೀಗಾಗಿ ಪೈರು ನಡೆಸಲು ಸಾಧ್ಯವಾಗಲಿಲ್ಲ. ಹೆಚ್ಚಿನ ಬೇಡಿಕೆ ಬಂದರೆ ಮಾರ್ಚ್ ತಿಂಗಳಲ್ಲಿ ಶಿವರಾತ್ರಿ ಪೈರು ನಡೆಯಲಿದೆ.
– ಮೋಹನದಾಸ್ ಭಂಡಾರಿ, ಶಿವಗಿರಿ ಗಿಳಿಯಾರು, ಪೈರಿನ ಉಸ್ತವಾರಿ