ನೀನಾಸಂ ಸತೀಶ್ ನಾಯಕರಾಗಿರುವ “ಚಂಬಲ್’ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. ಟೀಸರ್ ನೋಡಿದವರಿಂದ ಇದೊಂದು ಸೂಕ್ಷ್ಮ ವಿಚಾರಗಳಿರುವ ಚಿತ್ರ ಎಂದು ಬಿಂಬಿತವಾಗಿದೆ. ಜೇಕಬ್ ವರ್ಗಿಸ್ ಈ ಚಿತ್ರದ ನಿರ್ದೇಶಕರು. ಈಗಾಗಲೇ ಜೇಕಬ್ “ಪೃಥ್ವಿ’ ಹಾಗೂ “ಸವಾರಿ 2′ ಚಿತ್ರಗಳನ್ನು ಮಾಡಿದ್ದು, ಆ ಎರಡೂ ಚಿತ್ರಗಳಿಗಿಂತ “ಚಂಬಲ್’ ಬೇರೆ ತರಹದ ಚಿತ್ರವಾಗುತ್ತದೆ ಎಂಬ ನಂಬಿಕೆ ಇದೆ.
ನೀನಾಸಂ ಸತೀಶ್ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಅದಕ್ಕೆ ಕಾರಣ ಕಥೆಯ ಸೂಕ್ಷ್ಮತೆ. ಈ ಚಿತ್ರ ಮಾಡುವಾಗ ಮೊದಲ ಬಾರಿಗೆ ಸತೀಶ್ ನರ್ವಸ್ ಆದರಂತೆ. “ನಾನು ಇಷ್ಟೊಂದು ಸಿನಿಮಾ ಮಾಡಿದರೂ ಯಾವತ್ತೂ ನರ್ವಸ್ ಆಗಿರಲಿಲ್ಲ. ಆದರೆ, ಈ ಸಿನಿಮಾ ಮಾಡುವಾಗ ತುಂಬಾ ನರ್ವಸ್ ಆದೆ. 10-15 ಟೇಕ್ ತಗೊಂಡರೂ ಓಕೆಯಾಗುತ್ತಿರಲಿಲ್ಲ. ಆದರೆ, ಕಾರಣ ನಿರ್ದೇಶಕರ ಕಲ್ಪನೆ. ತುಂಬಾ ಸೆಟಲ್ಡ್ ಆದ ನಟನೆ ಬೇಕಿತ್ತು. ಸಣ್ಣ ಸಣ್ಣ ಅಂಶಗಳನ್ನು ಕೂಡಾ ತುಂಬಾ ಗಮನದಲ್ಲಿರಿಸಿಕೊಂಡು ಹೀಗೆ ಬರಬೇಕೆಂದು ಹೇಳುತ್ತಿದ್ದರು.
ಹಾಗಾಗಿ, ನನಗೆ ಈ ಸಿನಿಮಾ ಹೊಸ ಅನುಭವ ಕೊಟ್ಟಿದೆ. ನಾನೇನಾದರೂ ಈ ಸಿನಿಮಾನಾ ಒಪ್ಪದೇ ಇದ್ದರೆ ದೊಡ್ಡ ನಷ್ಟವಾಗುತ್ತಿತ್ತು’ ಎಂದು “ಚಂಬಲ್’ ಬಗ್ಗೆ ಹೇಳಿಕೊಳ್ಳುತ್ತಾರೆ ಸತೀಶ್. ಎಲ್ಲಾ ಓಕೆ, “ಚಂಬಲ್’ ಶೀರ್ಷಿಕೆ ಕಥೆಗೆ ಹೇಗೆ ಹೊಂದಿಕೊಳ್ಳುತ್ತದೆ ಎಂದು ನೀವು ಕೇಳಬಹುದು. ಅದಕ್ಕೂ ಸತೀಶ್ ಉತ್ತರಿಸುತ್ತಾರೆ. “ಡಕಾಯಿತರಿರುವ ಜಾಗದಲ್ಲಿನ ಹುಡುಗನ ಕಥೆ. ಹಾಗಂತ ಚಂಬಲ್ ಕಣಿವೆಯ ಡಕಾಯಿತರಲ್ಲ. ನಗರದ ಡಕಾಯಿತರು’ ಎನುವುದು ಸತೀಶ್ ಮಾತು.
ಚಿತ್ರದಲ್ಲಿ ಸೋನು ನಾಯಕಿಯಾಗಿ ನಟಿಸಿದ್ದಾರೆ. ಇನ್ನು ತನಗೆ ಯಾರೂ ಅವಕಾಶ ಕೊಡಲ್ಲ ಎಂದು ಬೇಜಾರಲ್ಲಿದ್ದ ಸಮಯದಲ್ಲಿ ನಿರ್ದೇಶಕ ಜೇಕಬ್ ವರ್ಗಿಸ್ ಕರೆ ಮಾಡಿ, “ಚಂಬಲ್’ ಸಿನಿಮಾದಲ್ಲಿ ಅವಕಾಶ ಕೊಟ್ಟರಂತೆ. ಮೊದಲ ಭೇಟಿಯಲ್ಲಿ ಸೋನು, “ಇದು ಯಾವ ತರಹದ ಸಿನಿಮಾ’ ಎಂದಾಗ, “ಎಲ್ಲರೂ ಕುಳಿತು ನೋಡುವಂತಹ ಸಿನಿಮಾ’ ಎಂದಷ್ಟೇ ಉತ್ತರಿಸಿದರಂತೆ ಜೇಕಬ್. ಚಿತ್ರದಲ್ಲಿ ಸೋನು ಸಾಮಾನ್ಯ ಹುಡುಗಿಯಾಗಿ ಕಾಣಿಸಿಕೊಂಡಿದ್ದು, ಹೆಚ್ಚು ಮೇಕಪ್ ಕೂಡಾ ಮಾಡಿಲ್ಲವಂತೆ. ರೋಜರ್ ನಾರಾಯಣ್ ಕೂಡಾ ತಮ್ಮ ಅನುಭವ ಹಂಚಿಕೊಂಡರು. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನವಿದೆ. ಈ ಅವಕಾಶವನ್ನು ಜೇಕಬ್ ಅವರಲ್ಲಿ ಅವರೇ ಕೇಳಿಕೊಂಡು ಪಡೆದರಂತೆ.