ಹನೂರು (ಚಾಮರಾಜನಗರ): ನೂತನ ತಾಲೂಕು ಪಂಚಾಯಿತಿಯ ಚೊಚ್ಚಲ ಅಧ್ಯಕ್ಷೆಯಾಗಿ ಸವಿತಾ, ಉಪಾಧ್ಯಕ್ಷೆಯಾಗಿ ರುಕ್ಮಿಣಿ ಆಯ್ಕೆಯಾಗಿ ಹನೂರು ತಾಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್ ಚುಕ್ಕಾಣಿ ಹಿಡಿದಿದೆ.
ಹನೂರು ತಾಲೂಲು ನೂತನವಾಗಿ ರಚನೆಯಾದ ಬಳಿಕ ಅಧ್ಯಕ್ಷೆ ಸ್ಥಾನವನ್ನು ಹಿಂದುಳಿದ ವರ್ಗ(ಎ) ಮಹಿಳೆಗೂ ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೂ ಮೀಸಲು ಪ್ರಕಟಿಸಿತ್ತು. ಸರ್ಕಾರದ ಮೀಸಲಾತಿ ಅನ್ವಯ ಕೊಳ್ಳೇಗಾಲದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನೂತನ ಅಧ್ಯಕ್ಷೆಯಾಗಿ ಅಜ್ಜೀಪುರ ಕ್ಷೇತ್ರದ ಸವಿತಾ ಮತ್ತು ಉಪಾಧ್ಯಕ್ಷೆಯಾಗಿ ಲೊಕ್ಕನಹಳ್ಳಿ ಕ್ಷೇತ್ರದ ರುಕ್ಮಿಣಿ ಆಯ್ಕೆಯಾದರು.
ಅಧ್ಯಕ್ಷೆ ಸ್ಥಾನಕ್ಕೆ 3ಜನ ನಾಮಪತ್ರ: ನೂತನ ತಾಲೂಕು ಒಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಅಜ್ಜೀಪುರ ಕ್ಷೇತ್ರದ ಸವಿತಾ, ಕೌದಳ್ಳಿ ಕ್ಷೇತ್ರದ ಲತಾ ಮತ್ತು ಬಿಜೆಪಿಯಿಂದ ಪೊನ್ನಾಚಿ ಕ್ಷೇತ್ರದ ಶಕುಂತಲಾ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಕಾಂಗ್ರೆಸ್ ಪಕ್ಷದ ಲತಾ ಅವರ ನಾಮಪತ್ರ ಪರಿಶೀಲನೆ ವೇಳೆ ತಿರಸ್ಕøತಗೊಂಡಿತ್ತು. ಬಳಿಕ ನಡೆದ ಮತದಾನ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷದ ಸವಿತಾ ಅವರಿಗೆ 10 ಮತ ಮತ್ತು ಬಿಜೆಪಿಯ ಶಕುಂತಲಾ ಅವರಿಗೆ 5 ಮತಗಳು ಲಭಿಸಿದವು. ಬಳಿಕ ಅಧ್ಯಕ್ಷೆಯನ್ನಾಗಿ ಸವಿತಾ ಅವರನ್ನು ಘೋಷಣೆ ಮಾಡಲಾಯಿತು.
ಉಪಾಧ್ಯಕ್ಷೆ ಸ್ಥಾನಕ್ಕೂ 3ಜನ ನಾಮಪತ್ರ: ತಾ.ಪಂನ ಉಪಾಧ್ಯಕ್ಷೆ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಲೊಕ್ಕನಹಲ್ಳಿ ಕ್ಷೇತ್ರರ ರುಕ್ಮಿಣಿ, ಶಾಗ್ಯ ಕ್ಷೇತ್ರದ ಸುಮತಿ ಮತ್ತು ಬಿಜೆಪಿಯಿಂದ ಶಕುಂತಲಾ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಶಾಗ್ಯ ಕ್ಷೇತ್ರದ ಸುಮತಿ ನಾಮಪತ್ರ ಹಿಂಪಡೆದ ಕಾರಣ ಅಂತಿಮವಾಗಿ ರುಕ್ಮಿಣಿ ಮತ್ತು ಶಕುಂತಲಾ ಅವರ ನಡುವೆ ಚುನಾವಣೆ ಪ್ರಕ್ರಿಯೆ ಜರುಗಿತು. ಈ ವೇಳೆ ರುಕ್ಮಿಣಿ ಅವರಿಗೆ 10 ಮತಗಳು ಮತ್ತು ಶಕುಂತಲಾ ಅವರಿಗೆ 5 ಮತಗಳು ಲಭಿಸಿದವು. ಬಳಿಕ ರುಕ್ಮಿಣಿ ಅವರನ್ನು ಉಪಾಧ್ಯಕ್ಷೆಯನ್ನಾಗಿ ಘೋಷಣೆ ಮಾಡಲಾಯಿತು. ಕೊಳ್ಳೇಗಾಲ ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಶಾಸಕ ಆರ್.ನರೇಂದ್ರ ರಾಜೂಗೌಡ, ತಾ.ಪಂ ಸದಸ್ಯರಾದ ನಟರಾಜು, ರಾಜೇಂದ್ರ, ಜವಾದ್ ಅಹಮ್ಮದ್, ಸುಮತಿ, ಶಿವಮ್ಮ, ಪಾರ್ವತಿಬಾಯಿ, ಹಾಜರಿದ್ದರು.
ನೂತನ ತಾಲೂಕಿಗೆ ಅಗತ್ಯ ಸೇವೆ ಒದಗಿಸಲು ಶ್ರಮಿಸುವೆ: ಈ ವೇಳೆ ಮಾತನಾಡಿದ ಅಧ್ಯಕ್ಷೆ ಸವಿತಾ ಹನೂರು ನೂತನ ತಾಲೂಕಾಗಿ ರಚನೆಯಾಗಿದ್ದು ಮುಂದಿನ 10 ತಿಂಗಳ ಅವಧಿಯಲ್ಲಿ ಎಲ್ಲಾ ಇಲಾಖೆಗಳ ಕಚೇರಿಗಳನ್ನು ಹನೂರಿಗೆ ವಿಭಸಿಜಲು ಶ್ರಮಿಸಲಾಗುವುದು ಮತ್ತು ಶಾಸಕರು ಮತ್ತು ಎಲ್ಲಾ ಸದಸ್ಯರ ಸಹಕಾರದೊಂದಿಗೆ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು. ಇದೇ ವೇಳೆ ತಮ್ಮ ಆಯ್ಕೆಗೆ ಸಹಕರಿಸಿದ ಶಾಸಕ ನರೇಂದ್ರ ರಾಜೂಗೌಡ, ತಾ.ಪಂ ಸದಸ್ಯರು ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.