Advertisement
ಹೊಸ ರಥ ನಿರ್ಮಿಸಲು ಮನಸ್ಸು ಮಾಡಿರಲಿಲ್ಲ: 2017ರ ಫೆ.19ರ ನಡುರಾತ್ರಿ ಸಮಯದಲ್ಲಿ ಕಿಡಿಗೇಡಿಯೊಬ್ಬ ನಗರದ ಚಾಮರಾಜೇಶ್ವರ ರಥಕ್ಕೆ ಬೆಂಕಿ ಹಚ್ಚಿ ರಥ ಭಾಗಶಃ ಸುಟ್ಟುಹೋಗಿತ್ತು. ಸುಟ್ಟುಹೋಗುವ ಮುಂಚೆ 180 ವರ್ಷಗಳಷ್ಟು ಹಳೆಯದಾದ ರಥ ಶಿಥಿಲವಾಗಿತ್ತು. ಹೊಸ ರಥ ನಿರ್ಮಾಣ ಮಾಡಬೇಕೆಂದು ಭಕ್ತಾದಿಗಳು ಒತ್ತಾಯಿಸುತ್ತಲೇ ಇದ್ದರು. ಆದರೂ ಜನಪ್ರತಿನಿಧಿಗಳು ಅಧಿಕಾರಿಗಳು ಹೊರ ರಥ ನಿರ್ಮಿಸಲು ಮನಸ್ಸು ಮಾಡಿರಲಿಲ್ಲ.
Related Articles
Advertisement
ಕಾರಣಾಂತರಗಳಿಂದ ಟೆಂಡರ್ ರದ್ದು: ಕಳೆದ ವರ್ಷವೇ ನೂತನ ರಥ ನಿರ್ಮಾಣಕ್ಕೆ 1.20 ಕೋಟಿ ರೂ.ಗಳ ಅನುದಾನವನ್ನು ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ನೀಡಿತ್ತು. ಜಿಲ್ಲಾಡಳಿತ ಈ ಅನುದಾನವನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರ ಮಾಡಿತು. ಲೋಕೋಪಯೋಗಿ ಇಲಾಖೆ ನೂತನ ರಥ ನಿರ್ಮಾಣ ಮಾಡಲು ಟೆಂಡರ್ ಕರೆದಿತ್ತು. ಆದರೆ ಕಾರಣಾಂತರಗಳಿಂದ ಟೆಂಡರ್ ರದ್ದಾಗಿತ್ತು. ಅದಾದ ನಂತರ ಮರುಟೆಂಡರ್ ಕರೆದು ನೂತನ ರಥ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಆ ಕೆಲಸವಿನ್ನೂ ಆಗಿಲ್ಲ.
ನವ ದಂಪತಿಗಳಿಗೆ, ಭಕ್ತಾದಿಗಳಿಗೆ ನಿರಾಸೆ: ಚಾಮರಾಜನಗರದ ಚಾಮರಾಜೇಶ್ವರ ರಥೋತ್ಸವ ನವ ದಂಪತಿಗಳ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ. ಆಷಾಢ ಮಾಸದಲ್ಲಿ ರಥೋತ್ಸವ ನಡೆಯುವುದು ವಿರಳಾತಿ ವಿರಳ. ಆದರೆ ಈ ಜಾತ್ರೆ ಆಷಾಢ ಮಾಸದ ಪೂರ್ವಾಷಾಢ ನಕ್ಷತ್ರದಂದೇ ನಡೆಯುತ್ತದೆ. ಹೀಗಾಗಿ, ಮದುವೆಯಾದ ಬಳಿಕ ಆಷಾಢದಲ್ಲಿ ಬೇರ್ಪಟ್ಟ ನವದಂಪತಿಗಳು ಈ ಜಾತ್ರೆಗೆ ಆಗಮಿಸಿ, ರಥಕ್ಕೆ ಹಣ್ಣು ಜವನ ಎಸೆಯುತ್ತಾರೆ. ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ.
ಹಳೆ ಮೈಸೂರು ಭಾಗ ಮಾತ್ರವಲ್ಲದೇ ಪಕ್ಕದ ತಮಿಳುನಾಡಿನಿಂದಲೂ ಈ ಜಾತ್ರೆಗೆ ಭಕ್ತಾದಿಗಳು, ನವದಂಪತಿಗಳು ಭಾಗವಹಿಸುತ್ತಾರೆ. ಆಷಾಢ ಮಾಸದಲ್ಲಿ ತವರಿಗೆ ಬಂದ ಪತ್ನಿಯನ್ನು ಜಾತ್ರೆಯಲ್ಲಿ ಭೇಟಿಯಾಗುವ ಅವಕಾಶ ಪತಿಗೆ ದೊರೆಯುತ್ತದೆ. ಹೀಗಾಗಿ ಜಾತ್ರೆಯಲ್ಲಿ ಈ ಭಾಗದ ನೂತನ ದಂಪತಿಗಳು ಭೇಟಿಯಾಗಿ ಸಂಭ್ರಮಿಸುತ್ತಾರೆ.
ಸತತ 2ನೇ ವರ್ಷವೂ ರಥೋತ್ಸವವಿಲ್ಲ: ಆದರೆ ರಥ ನಿರ್ಮಾಣವಾಗದೇ ರಥೋತ್ಸವ ರದ್ದಾಗಿರುವುದು ನವದಂಪತಿಗಳ ನಿರಾಸೆಗೆ ಕಾರಣವಾಗಿದೆ. ಅಲ್ಲದೇ ಚಾಮರಾಜೇಶ್ವರನ ಭಕ್ತಾದಿಗಳು, ನಗರದ ಜನತೆ ವರ್ಷಕ್ಕೊಮ್ಮೆ ನಡೆಯುತ್ತಿದ್ದ ಸಂಭ್ರಮದ ಜಾತ್ರೆ ಸತತ ಎರಡನೇ ವರ್ಷವೂ ಇಲ್ಲದಿರುವುದರಿಂದ ಬೇಸರಗೊಂಡಿದ್ದಾರೆ. ಈ ಬಾರಿ ಉತ್ತಮ ಮಳೆಯಾಗಿ ಅಣೆಕಟ್ಟುಗಳು ಭರ್ತಿಯಾಗಿ ಸಮೃದ್ಧಿ ನೆಲೆಸಿರುವುದರಿಂದ ರಥೋತ್ಸವ ನಡೆದಿದ್ದರೆ ಚೆನ್ನಾಗಿರುತ್ತಿತ್ತು ಎಂಬುದು ಜನತೆಯ ಅನಿಸಿಕೆಯಾಗಿದೆ.
ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಪ್ರಗತಿಯಲ್ಲಿದೆ. ದೇವಾಲಯಕ್ಕೆ ಸಂಪ್ರೋಕ್ಷಣೆ ನಡೆಯಬೇಕಾಗಿದೆ. ಹಾಗಾಗಿ ರಥೋತ್ಸವ ನಡೆಯುತ್ತಿಲ್ಲ. ನೂತನ ರಥ ನಿರ್ಮಾಣಕ್ಕೆ ಇನ್ನೊಂದು ವಾರದಲ್ಲಿ ಮತ್ತೆ ಟೆಂಡರ್ ಕರೆಯಲಾಗುತ್ತದೆ.-ಮಂಜೇಶ್, ಕಾರ್ಯನಿರ್ವಾಹಕ ಅಧಿಕಾರಿ, ಚಾಮರಾಜೇಶ್ವರ ದೇವಾಲಯ * ಕೆ.ಎಸ್. ಬನಶಂಕರ ಆರಾಧ್ಯ