Advertisement
ಮಂಗಳವಾರ ಸಿಎಂ ಆಫ್ ಕರ್ನಾಟಕ ಟ್ವಿಟರ್ ಪುಟದಲ್ಲಿ ಸಿದ್ದರಾಮಯ್ಯ ಅವರು ಮಾಧ್ಯಮ ಹೇಳಿಕೆ ನೀಡಿದ್ದು, ಚಾಮರಾಜನಗರದ ಆಕ್ಸಿಜನ್ ದುರಂತ ಮರುತನಿಖೆ ನಡೆಸಲಾಗುವುದು. ಅಂದಿನ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಅಲ್ಲಿ ಸತ್ತಿರುವುದು ಇಬ್ಬರೇ ಎಂದಿದ್ದರು. ಆದರೆ, ಸತ್ತವರ ಸಂಖ್ಯೆ ಮೂವತ್ತಕ್ಕೂ ಹೆಚ್ಚಿತ್ತು. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಮೃತರ ಕುಟುಂಬಗಳಿಗೆ ನ್ಯಾಯ ಕೊಡಿಸುತ್ತೇವೆ ಎಂದು ತಿಳಿಸಿದ್ದಾರೆ. ಇನ್ನೊಂದೆಡೆ, ಮೈಸೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ತನಿಖೆಯಾಗಬೇಕಿರುವ ಚಾರ್ಜ್ ಫ್ರೇಮ್ ಅನ್ನು ಸಿದ್ಧ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಈ ಬೆಳವಣಿಗೆ. ಅನ್ಯಾಯಕ್ಕೊಳಗಾದ ಸಂತ್ರಸ್ತರ ಕುಟುಂಬಗಳಿಗೆ ಕಗ್ಗತ್ತಲಿನ ನಡುವೆ ಕಂಡಿರುವ ಆಶಾಕಿರಣವಾಗಿದೆ.
Related Articles
Advertisement
ಹೈಕೋರ್ಟ್ ನ್ಯಾಯಮೂರ್ತಿಗಳ ವರದಿಗೂ ಬೆಲೆ ನೀಡಲಿಲ್ಲ : ಈ ಘಟನೆಯ ಬಗ್ಗೆ ವರದಿ ನೀಡಲು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಎನ್.ವೇಣುಗೋಪಾಲಗೌಡ ಅವರ ಅಧ್ಯಕ್ಷತೆಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿಯನ್ನು ನೇಮಿಸಿತ್ತು. ಕಾನೂನು ಸೇವೆಗಳ ಪ್ರಾಧಿಕಾರದ ಸಮಿತಿ ಹೈಕೋರ್ಟ್‌ಗೆ 2021ರ ಮೇ 13ರಂದೇ ವರದಿ ಸಲ್ಲಿಸಿತ್ತು.
ಒಟ್ಟಾರೆ ಇದರಿಂದ 37 ಮಂದಿ ಮೃತಪಟ್ಟಿದ್ದಾರೆಂದು ವರದಿ ತಿಳಿಸಿತ್ತು. ಅಲ್ಲದೇ, ಆಮ್ಲಜನಕ ಕೊರತೆಯಂತಹ ದೊಡ್ಡ ಪ್ರಮಾದ ನಡೆಯುವ ಮೊದಲೇ ಈ ಬಗ್ಗೆ ಮುಂಜಾಗ್ರತೆ ವಹಿಸದೇ ಜಿಲ್ಲಾಧಿಕಾರಿ ನಿರ್ಲಕ್ಷ್ಯ ವಹಿಸಿದ್ದಾರೆ. ಸಿಮ್ಸ್ ಡೀನ್, ಜಿಲ್ಲಾಸ್ಪತ್ರೆಯ ಪ್ರಭಾರ ಜಿಲ್ಲಾ ಸರ್ಜನ್ ಅವರ ಕರ್ತವ್ಯಲೋಪವೂ ಇದೆಯೆಂದು ವರದಿಯಲ್ಲಿ ಬೊಟ್ಟು ಮಾಡಲಾಗಿತ್ತು.
ಸಂತ್ರಸ್ತರಾದವರಿಗೆ ದೊರೆತಿಲ್ಲ; ನ್ಯಾಯಯುತ ಪರಿಹಾರ : ಈ ಘಟನೆಯಿಂದ 36ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಆದರೆ, ಸರ್ಕಾರದ ಪ್ರಕಾರ ಸತ್ತವರು 24 ಮಂದಿ. ಹೀಗಾಗಿ 37 ಮೃತರ ಕುಟುಂಬದ ಪೈಕಿ ಕೇವಲ 24 ಮಂದಿಯ ಕುಟುಂಬದವರಿಗೆ ಮಾತ್ರ ಅಲ್ಪ ಪರಿಹಾರ (2 ರಿಂದ 3 ಲಕ್ಷ ರೂ.) ದೊರೆತಿದೆ. ಇನ್ನು 13 ಕುಟುಂಬದವರಿಗೆ ನಯಾಪೈಸೆ ಪರಿಹಾರವೂ ಸಿಕ್ಕಿಲ್ಲ. ಕೆಲವರಿಗೆ 2 ಲಕ್ಷ ರೂ., ಇನ್ನು ಕೆಲವರಿಗೆ 3 ಲಕ್ಷ ರೂ. ಪರಿಹಾರ ನೀಡಿದೆ. ಆಕ್ಸಿಜನ್ ಕೊರತೆಯಿಂದ ಅಂದು ರಾತ್ರಿ 11.30ರಿಂದ ಮತ್ತೆ ಮಾರನೆಯ ಮಧ್ಯಾಹ್ನದವರೆಗೂ ಜನರು ಸತ್ತಿದ್ದಾರೆ. ಅವರ ಕುಟುಂಬಗಳಿಗೆ ಯಾವುದೇ ಪರಿಹಾರ ದೊರೆತಿಲ್ಲ.
ಸರ್ಕಾರಿ ಉದ್ಯೋಗದ ಭರವಸೆ ನೀಡಿದ್ದ ರಾಹುಲ್ ಗಾಂಧಿ: ಭಾರತ್ ಜೋಡೋ ಯಾತ್ರೆ ಕೇರಳದಿಂದ ಕರ್ನಾಟಕ ಪ್ರವೇಶಿಸಿದಾಗ ಗುಂಡ್ಲುಪೇಟೆ ಬಳಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಾ.ನಗರದ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ದುರಂತದಲ್ಲಿ ಮಡಿದ ಕುಟುಂಬದವರ ಜೊತೆ ಸಂವಾದ ನಡೆಸಿದ್ದರು. ತಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸಂತ್ರಸ್ತರ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ಮತ್ತು ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ರಾಜ್ಯ ಸರ್ಕಾರ ಈ ಭರವಸೆ ಈಡೇರಿಸಲು ಕ್ರಮ ಕೈಗೊಳ್ಳಬೇಕೆಂಬುದು ಸಂತ್ರಸ್ತರ ಒತ್ತಾಯವಾಗಿದೆ.
ನನ್ನ ಪತಿ ನನ್ನ ಕಣ್ಣೆದುರೇ ಆಕ್ಸಿಜನ್ ಬರುತ್ತಿಲ್ಲ ವೆಂದು ನರಳಾಡಿ ಸತ್ತರು. ಘಟನೆ ನಡೆದ ಬಳಿಕ ಸರ್ಕಾರದಿಂದ ನಮಗೆ ಒಂದು ಪೈಸೆಯಷ್ಟೂ ಪರಿ ಹಾರ ಕೊಟ್ಟಿಲ್ಲ. ಇಬ್ಬರು ಮಕ್ಕಳು ಸುತ್ತೂರು ಶ್ರೀಗಳ ದಯೆಯಿಂದ ಉಚಿತ ಶಿಕ್ಷಣ ಪಡೆಯುತ್ತಿ ದ್ದಾರೆ. ನಾನು ಈಗ ಕೂಲಿ ನಾಲಿ ಮಾಡಿ ಕುಟುಂಬ ಸಾಕುತ್ತಿದ್ದೇನೆ. ●ಜ್ಯೋತಿ, ಮೃತ ಆಟೋಚಾಲಕ ಸಿದ್ದನಾಯಕರ ಪತ್ನಿ.
ದುರಂತದಲ್ಲಿ ಪತಿಯನ್ನು ಕಳೆದುಕೊಂಡೆ. ನನಗೆ ಇಬ್ಬರು ಚಿಕ್ಕಮಕ್ಕಳಿ¨ªಾರೆ. ಸರ್ಕಾರದಿಂದ ಪರಿಹಾರ ಬಂದಿಲ್ಲ. ಅಧಿಕಾರಿಗಳನ್ನು ವಿಚಾರಿಸಿದರೆ ಆಸ್ಪತ್ರೆಯಿಂದ ಪಾಸಿಟಿವ್ ವರದಿ ತರಬೇಕು ಎಂದು ಸತಾಯಿಸುತ್ತಿದ್ದಾರೆ. ಹಿಂದಿನ ಶಾಸಕ ಎನ್. ಮಹೇಶ್ ಗಮನಕ್ಕೆ ತಂದರೂ ಪ್ರಯೋಜನ ಆಗಲಿಲ್ಲ. ●ಸಿದ್ದರಾಜಮ್ಮ, ಕೊಳ್ಳೇಗಾಲದ ಮುಂಡಿಗುಂಡ.
ಇದ್ದ ಒಬ್ಬ ಮಗ ದುರಂತದಲ್ಲಿ ಮೃತಪಟ್ಟನು. ವಯಸ್ಸಾದ ನಾನು ಮತ್ತು ನಮ್ಮ ಪತಿ ಜೀವನ ನಡೆಸಲು ಕಷ್ಟಪಡುತ್ತಿದ್ದೇವೆ. ಯಾವುದೇ ಪರಿಹಾರ ಬಂದಿಲ್ಲ. ನಮ್ಮ ಮಗನ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಆಗಬೇಕು. ●ಜಯಮ್ಮ ನಾಗವಳ್ಳಿ,
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸರ್ಕಾರಿ ನೌಕರಿ ಕೊಡಿಸುವುದಾಗಿ ಭರವಸೆ ನೀಡಿದ್ದರು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಉದ್ಯೋಗ ಸಿಗುವ ಭರವಸೆಯಲ್ಲಿದ್ದೇವೆ. ಸರ್ಕಾರ ಸಂತ್ರಸ್ತರಾದ ನಮ್ಮ ಕುಟುಂಬಗಳಿಗೆ ನೌಕರಿ ನೀಡಬೇಕು. ●ನಾಗರತ್ನ, ಕೆಸ್ತೂರು.
-ಕೆ.ಎಸ್.ಬನಶಂಕರ ಆರಾಧ್ಯ